
ಟರ್ಕಿಯ ಅದ್ರಾಸನ್ ಕರಾವಳಿಯ ಆಳಸಮುದ್ರದಲ್ಲಿ ಸಾಗರ ಪುರಾತತ್ತ್ವಜ್ಞರು ಅತ್ಯಂತ ಅಪರೂಪದ ಹಾಗೂ ರೋಚಕ ಐತಿಹಾಸಿಕ ಆವಿಷ್ಕಾರ ಒಂದನ್ನು ಮಾಡಿದ್ದಾರೆ. ಸುಮಾರು 2,100 ವರ್ಷಗಳ ಹಿಂದೆ ರೋಮ್ ನಗರದತ್ತ ಪ್ರಯಾಣಿಸುತ್ತಿದ್ದ ಪ್ರಾಚೀನ ಸರಕು ಹಡಗಿನ ಅವಶೇಷಗಳು ಪತ್ತೆಯಾಗಿವೆ. ಮೆಡಿಟರೇನಿಯನ್ ಸಮುದ್ರದ ತಳದಲ್ಲಿದ್ದ ಈ ಹಡಗಿನಲ್ಲಿ ಆ ಕಾಲದ ರೋಮನ್ ಗಣ್ಯರು ಬಳಸುತ್ತಿದ್ದ, ಅತ್ಯಂತ ಬೇಡಿಕೆಯಲ್ಲಿದ್ದ ಸಾವಿರಾರು ಸೆರಾಮಿಕ್ ಊಟದ ಟೇಬಲ್ ಐಟಂಗಳು, ತಟ್ಟೆಗಳು ಅತ್ಯಂತ ಸುರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಟರ್ಕಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ನೀಡಿರುವ ಪ್ರಕಟಣೆಯ ಪ್ರಕಾರ, ಈ ಮುಳುಗಿದ ಹಡಗಿನ ಉತ್ಖನನ ಕೆಲಸವು 2025 ರಲ್ಲಿ ಪ್ರಾರಂಭವಾದವು. ಸಮುದ್ರದ 140 ರಿಂದ 180 ಅಡಿ ಆಳದಲ್ಲಿ ಹಡಗು ಬಿದ್ದಿದ್ದರಿಂದ, ಸಂಶೋಧಕರು ನೀರೊಳಗಿನ ನೂತನ ರೊಬೊಟಿಕ್ ತಂತ್ರಜ್ಞಾನವನ್ನು ಬಳಸಿ ಸಾವಿರಾರು ಸೆರಾಮಿಕ್ ತುಣುಕುಗಳನ್ನು ಆಚೆಗೆ ತೆಗೆದು ಅಂಟಲ್ಯ ವಸ್ತುಸಂಗ್ರಹಾಲಯ ಹಾಗೂ ಸಂರಕ್ಷಣಾ ಪ್ರಯೋಗಾಲಯಗಳಿಗೆ ರವಾನಿಸಿದ್ದಾರೆ.
ಸಮುದ್ರದಾಳದಲ್ಲಿ ಸಿಕ್ಕಿರುವ ಈ ಸರಕು ಹಡಗಿನಲ್ಲಿ ಒಟ್ಟು 122 ವಿಭಿನ್ನ ವಿನ್ಯಾಸ ಮತ್ತು ಗಾತ್ರದ ತಟ್ಟೆಗಳು, ಬಟ್ಟಲುಗಳು ಹಾಗೂ ಆಕರ್ಷಕ ಬಡಿಸುವ ಭಕ್ಷ್ಯಗಳು ಪತ್ತೆಯಾಗಿವೆ. ಪ್ರಾಚೀನ ಕಾಲದಲ್ಲಿದ್ದ ರೋಮನ್ನರ ಅಡುಗೆಮನೆ ಹಾಗೂ ಊಟದ ಮೇಜಿನ ವೈವಿಧ್ಯಮಯ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಈ ಆವಿಷ್ಕಾರ ಅತ್ಯಂತ ಪ್ರಮುಖ ಸಾಕ್ಷಿಯಾಗಿದೆ.
ಇಲ್ಲಿ ಪತ್ತೆಯಾದ ಸರಕು ಇಂದಿನ ಟರ್ಕಿಯ ಅರ್ಸುಜ್ನಲ್ಲಿರುವ 'ರೋಸಸ್' ಎಂಬ ಪ್ರಾಚೀನ ಬಂದರು ನಗರದಲ್ಲಿ ತಯಾರಾಗಿರಬಹುದು ಎಂದು ಪುರಾತತ್ತ್ವಜ್ಞರು ಅಂದಾಜಿಸಿದ್ದಾರೆ. ಆ ಕಾಲದಲ್ಲಿ ರೋಸಸ್ ನಗರವು ಗಣ್ಯರು ಬಳಸುವ ಅತ್ಯುನ್ನತ ಗುಣಮಟ್ಟದ ಸೆರಾಮಿಕ್ ಪಾತ್ರೆಗಳ ತಯಾರಿಕೆಗೆ ಹೆಸರುವಾಸಿಯಾಗಿತ್ತು.
ಈ ಹಡಗು ಧ್ವಂಸದ ಅಧ್ಯಯನ ನಡೆಸಿದ ವಿಜ್ಞಾನಿಗಳಿಗೆ ಅತ್ಯಂತ ಆಶ್ಚರ್ಯ ತಂದ ವಿಷಯವೆಂದರೆ ಆ ಕಾಲದ ನಿಕಟವಾದ ಪ್ಯಾಕಿಂಗ್ ಶೈಲಿ. ಸಮುದ್ರದ ಭೋರ್ಗರೆತಕ್ಕೆ ಪಾತ್ರೆಗಳು ಪರಸ್ಪರ ಅಪ್ಪಳಿಸಿ ಒಡೆದುಹೋಗಬಾರದೆಂದು, ಪೆಟ್ಟಿಗೆಗಳಲ್ಲಿ ಪಾತ್ರೆಗಳನ್ನಿಡುವಾಗ ಅವುಗಳ ನಡುವೆ ಒದ್ದೆಯಾದ ವಿಶೇಷ ಜೇಡಿಮಣ್ಣನ್ನು ತುಂಬಿ ಭದ್ರಪಡಿಸಲಾಗಿತ್ತು. ಇದೇ ಕಾರಣಕ್ಕೆ ಹಡಗು ಮುಳುಗಿ 2,000 ವರ್ಷಗಳಿಗಿಂತಲೂ ಹೆಚ್ಚು ಸಮಯ ಕಳೆದರೂ ಇಂದಿಗೂ ಆ ಪಾತ್ರೆಗಳು ಸವೆಯದೆ ಹಾಗೆಯೇ ಉಳಿದುಕೊಂಡಿವೆ.
ರೋಮನ್ ಇತಿಹಾಸದಲ್ಲಿ 'ರೋಸಸ್' ಪಾತ್ರೆಗಳಿಗೆ ಎಷ್ಟೊಂದು ಬೇಡಿಕೆಯಿತ್ತೆಂದರೆ, ಪ್ರಸಿದ್ಧ ರೋಮನ್ ರಾಜಕಾರಣಿ ಹಾಗೂ ವಾಗ್ಮಿ ಮಾರ್ಕಸ್ ಟುಲಿಯಸ್ ಸಿಸೆರೊ ಬಿಟ್ಟುಹೋದ ದಾಖಲೆಗಳಲ್ಲಿಯೂ ಇದರ ಉಲ್ಲೇಖವಿದೆ. ಕ್ರಿ.ಪೂ 50 ರಲ್ಲಿ ಸಿಲಿಸಿಯಾದ ಗವರ್ನರ್ ಆಗಿದ್ದಾಗ ತಮ್ಮ ಆಪ್ತ ಸ್ನೇಹಿತ ಟೈಟಸ್ ಪೊಂಪೋನಿಯಸ್ ಅಟಿಕಸ್ ಎಂಬುವವರಿಗೆ ಬರೆದ ಪತ್ರದಲ್ಲಿ, ತಾವು ರೋಸಸ್ನಿಂದ 'ರೋಸಿಕಾ ವಾಸಾ' ರೋಸಸ್ ನಗರದ ವಿಶಿಷ್ಟ ಭಕ್ಷ್ಯಗಳು) ಆರ್ಡರ್ ಮಾಡಿದ್ದಾಗಿ ಬರೆದುಕೊಂಡಿದ್ದರು. ಸಿಸೆರೊ ಉಲ್ಲೇಖಿಸಿದ್ದ ಅದೇ ಮಾದರಿಯ 'ಈಸ್ಟರ್ನ್ ಸಿಗಿಲ್ಲಟಾ ಎ' ವರ್ಗಕ್ಕೆ ಸೇರಿದ ಜೇಡಿಮಣ್ಣಿನ ಭಕ್ಷ್ಯಗಳು ಈಗ ಲಭ್ಯವಾಗಿರುವುದು ಇತಿಹಾಸಕಾರರ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಟರ್ಕಿ ಜಲ ಗಡಿಯಲ್ಲಿ ಈ ಹಿಂದೆಯೂ 10,000 ಸೆರಾಮಿಕ್ ತಟ್ಟೆಗಳನ್ನು ಹೊತ್ತ 1,500 ವರ್ಷಗಳಷ್ಟು ಹಳೆಯ ಹಡಗು ಹಾಗೂ 1,100 ವರ್ಷಗಳಷ್ಟು ಹಳೆಯ ಆಲಿವ್ ಎಣ್ಣೆಯ ಜಗ್ಗಳಿದ್ದ ಹಡಗುಗಳು ಪತ್ತೆಯಾಗಿದ್ದವು. ಆದರೆ, ಪ್ರಸ್ತುತ ಸಿಕ್ಕಿರುವ ಈ 2,100 ವರ್ಷ ಹಳೆಯ ಹಡಗು ಪ್ರಾಚೀನ ಸಮುದ್ರ ವಾಣಿಜ್ಯ ಹಾಗೂ ಸಾರಿಗೆ ವ್ಯಾಪಾರಕ್ಕೆ ಸಿಕ್ಕ ಅತ್ಯಂತ ಅಪರೂಪದ ಪುರಾವೆಯಾಗಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.