ಸಿದ್ಧ​ಗಂಗಾ ಶ್ರೀಗಳ ಹುಟ್ಟೂರಿಗೆ ಬಸ್ ಸಂಚಾರವೇ ಇಲ್ಲ

By Kannadaprabha NewsFirst Published Oct 24, 2019, 11:28 AM IST
Highlights

ಸಿದ್ದಗಂಗಾ ಶ್ರೀಗಳ ಹುಟ್ಟೂರಿಗೆ  ಇಂದಿಗೂ ಕೂಡ ಬಸ್ ಸಂಚಾರವೇ ಇಲ್ಲ. ಹಲವು ಮೂಲಭೂತ ಸೌಕರ್ಯಗಳಿಂದ ಶ್ರೀಗಳು ಜನ್ಮ ತಾಳಿದ ಊರು ವಂಚಿತವಾಗಿದೆ. 

ಕುದೂರು [ಅ.24]:  ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಸ್ಥಳ ಮಾಗಡಿ ತಾಲೂಕು ವೀರಾಪುರ ಗ್ರಾಮಕ್ಕೆ ಕರ್ನಾಟಕ ಸರ್ಕಾರ 25 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಈ ಹಿನ್ನೆ​ಲೆ​ಯಲ್ಲಿ ಗ್ರಾಮಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು, ಅಭಿವೃದ್ಧಿ ಕಾರ್ಯಗಳು ಏನಾಗಬೇಕೆಂದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ಅವರು ವೀರಾಪುರ ಗ್ರಾಮಕ್ಕೆ ಭೇಟಿ ನೀಡಿದ್ದರು.

ವೀರಾಪುರ ಗ್ರಾಮವನ್ನು ವಿಶ್ವಪಾರಂಪರಿಕ ಸ್ಥಳವನ್ನಾಗಿಸಲು ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಈ ಗ್ರಾಮದಲ್ಲಿ ಆಗಬೇಕಾಗಿರುವ ಕೆಲಸಗಳ ಪಟ್ಟಿಮಾಡಬೇಕು. ವೀರಾಪುರ ಗ್ರಾಮದಲ್ಲಿ ಅತ್ಯಂತ ಆಕರ್ಷಕ ತಾಣವನ್ನಾಗಿಸಿ ವಿಶ್ವದರ್ಜೆಯ ಕೇಂದ್ರವನ್ನಾಗಿ ಮಾಡಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಹತ್ತು ಎಕ್ಕರೆ ಭೂಮಿಯಲ್ಲಿ ಭವನ ನಿರ್ಮಾಣ:

ವೀರಾಪುರ ಗ್ರಾಮವನ್ನು ಆಕರ್ಷಕ ತಾಣವನ್ನಾಗಿಸಲು ಭೂಮಿಯ ಅವಶ್ಯಕತೆ ಇದೆ. ಅದಕ್ಕಾಗಿ ವೀರಾಪುರ ಗ್ರಾಮದ ಸಮೀಪದಲ್ಲೇ ಹತ್ತು ಎಕ್ಕರೆ ಸರ್ಕಾರಿ ಜಮೀನಿದೆ. ಅದರಲ್ಲಿ ಸಿದ್ಧಗಂಗಾ ಶ್ರೀಗಳ ಪ್ರತಿಮೆ, ಧ್ಯಾನಮಂದಿರ, ಅಧ್ಯಯನ ಕೇಂದ್ರಗಳಂತಹ ಕಾರ್ಯವನ್ನು ಮಾಡಲಾಗುವುದು ಎಂದು ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ರುದ್ರೇಶ್‌ ತಿಳಿಸಿದರು.

ಶಿಕ್ಷಣಕ್ಕಾಗಿ ಸಿದ್ಧಗಂಗೆ ಮಠಕ್ಕೆ ವಿದ್ಯಾರ್ಥಿಗಳ ದಂಡು...

ವೀರಾಪುರ ಗ್ರಾಮಕ್ಕೆ ಇದುವರೆವಿಗೂ ಭೇಟಿ ಕೊಟ್ಟಬಹುತೇಕ ರಾಜಕಾರಣಿಗಳು ಕೇವಲ ಭರವಸೆ ನೀಡಿ ಹೋಗುತ್ತಿದ್ದರೆಯೇ ಹೊರತು ಗ್ರಾಮ ಅಭಿವೃದ್ಧಿಯನ್ನು ಕಾಣಲಿಲ್ಲ. ಸಿದ್ಧಗಂಗಾ ಶ್ರೀಗಳು ಭೌತಿಕವಾಗಿ ನಮ್ಮೊಂದಿಗಿದ್ದಾಗಲೇ ಈ ಗ್ರಾಮದ ಅಭಿವೃದ್ಧಿ ಆಗಿದ್ದರೆ ಶ್ರೀಗಳು ಹೆಚ್ಚು ಸಂತೋಷ ಪಡುತ್ತಿದ್ದರು ಎಂದು ಆಶಯ ವ್ಯಕ್ತಪಡಿಸಿದರು.

ಅದರಂಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಗದೀಶ್‌ ಮಾತನಾಡಿ, ವೀರಾಪುರ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ, ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಪ್ರಗತಿಯಾಗುವಂತೆ ನೀಲಿನಕ್ಷೆ ತಯಾರಿಸಿ ಒಂದು ಸುಂದರ ವಿಶ್ವವಿದ್ಯಾಲಯದಂತೆ ಜ್ಞಾನ ತಾಣವನ್ನಾಗಿ ಮಾರ್ಪಡಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಅಧಿಕಾರಿಗಳು, ವೀರಾಪುರ ಗ್ರಾಮದ ಹೊನ್ನಪ್ಪ, ಮೂರ್ತಯ್ಯ, ಲಿಂಗಮೂರ್ತಿ, ಜಗದೀಶ್‌ ಮತ್ತಿತರರು ಹಾಜರಿದ್ದರು.

ಸಿದ್ಧಗಂಗಾ ಶ್ರೀಗಳ ಗ್ರಾಮಕ್ಕೆ ಬಸ್‌ಗಳಿಲ್ಲ :  ಗ್ರಾಮದ ಮುಖಂಡ ಹೊನ್ನಪ್ಪ ಮಾತನಾಡಿ, ತ್ರಿವಿಧ ದಾಸೋಹಿ ನಡೆದಾಡುವ ಬಸವಣ್ಣರೆಂದೇ ಖ್ಯಾತರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಜನ್ಮಸ್ಥಳ ವೀರಾಪುರ ಗ್ರಾಮಕ್ಕೆ ಬರಬೇಕೆಂದರೆ ಸ್ವಂತ ವಾಹನಗಳಿರಬೇಕು. ಇಲ್ಲದೆ ಇದ್ದರೆ ನಡೆದೇ ಬರಬೇಕು. ಇಂತಹ ದುಸ್ಥಿತಿಯಲ್ಲಿ ಗ್ರಾಮವಿದೆ. ಮಾಗಡಿ ಕೇಂದ್ರದಲ್ಲಿ ಕೆಎಸ್‌ಆರ್‌ ಟಿಸಿ ಡಿಪೋ ಇದ್ದರೂ ಇಲ್ಲಿಗೆ ಸರ್ಕಾರಿ ಬಸ್‌ ಬಿಡುವ ಮನಸ್ಸು ಮಾಡಿಲ್ಲ. ಇದಕ್ಕಿಂತಲೂ ಮೊದಲು ಗ್ರಾಮದ ಸುತ್ತಲೂ ರಸ್ತೆ, ಶಾಲೆ, ನಿರ್ಮಾಣಗೊಳ್ಳಬೇಕು. ಸ್ವಾಮೀಜಿ ಅವರ ತಂದೆ-ತಾಯಿಯ ಸಮಾಧಿಯನ್ನು ಜೀರ್ಣೋದ್ಧಾರ ಮಾಡಬೇಕು ಎಂದರು.

click me!