ವಿಧಾನಸಭೆ, ಲೋಕಸಭೆ ಚುನಾವಣೆ ಗೆಲ್ಲಲು ಕೈ ರಣತಂತ್ರ; ಇಂದು ಕಾರ್ಯಕಾರಿ ಸಭೆ: 2ನೇ ಭಾರತ್ ಜೋಡೋ ಯಾತ್ರೆಗೆ ರಾಹುಲ್‌ ಸಿದ್ಧ!

By Kannadaprabha News  |  First Published Sep 16, 2023, 9:09 AM IST

ಚುನಾವಣಾ ರಣತಂತ್ರದ ಜೊತೆಗೆ, ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 2ನೇ ಭಾರತ್‌ ಜೋಡೋ ಯಾತ್ರೆ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. 


ಹೈದರಾಬಾದ್‌ (ಸೆಪ್ಟೆಂಬರ್ 16, 2023): ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕಗೊಂಡ ಬಳಿಕ ಪುನಾರಚನೆಗೊಂಡ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ಮೊದಲ ಸಭೆ ಶನಿವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ, ಮುಂಬರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಗೆ ಪಕ್ಷವು ರೂಪಿಸಬೇಕಾದ ರಣತಂತ್ರಗಳ ಬಗ್ಗೆ ಚರ್ಚೆ ನಡೆಯಲಿದೆ.

ಚುನಾವಣಾ ರಣತಂತ್ರದ ಜೊತೆಗೆ, ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 2ನೇ ಭಾರತ್‌ ಜೋಡೋ ಯಾತ್ರೆ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್‌ ಕೈಗೊಂಡಿದ್ದ ಮೊದಲ ಭಾರತ್‌ ಜೋಡೋ ಪಾದಯಾತ್ರೆಯ ಯಶಸ್ಸಿನ ಬಳಿಕ ಅವರು ಪೂರ್ವದಿಂದ ಪಶ್ಚಿಮಕ್ಕೆ 2ನೇ ಯಾತ್ರೆ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ.

Tap to resize

Latest Videos

ಇದನ್ನು ಓದಿ: ತನ್ನ ನಿಲುವು ಒಪ್ಪದ ಮಾಧ್ಯಮ ಬಹಿಷ್ಕಾರಕ್ಕೆ ಮುಂದಾದ I.N.DI.A ಒಕ್ಕೂಟ: ಬಿಜೆಪಿ ಟೀಕೆ

ಕಾಂಗ್ರೆಸ್‌ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವ ಪರಮೋಚ್ಚ ಸಮಿತಿಯಾಗಿರುವ ಸಿಡಬ್ಲ್ಯುಸಿಗೆ ಖರ್ಗೆ ಅಧ್ಯಕ್ಷರಾಗಿದ್ದು, 39 ಸದಸ್ಯರಿದ್ದಾರೆ. 32 ಶಾಶ್ವತ ಆಹ್ವಾನಿತರು, 13 ವಿಶೇಷ ಆಹ್ವಾನಿತರು ಕೂಡ ಸಮಿತಿಯಲ್ಲಿದ್ದಾರೆ. ಅವರು ಹಾಗೂ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರು ಶನಿವಾರದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಿಡಬ್ಲ್ಯುಸಿ ಸಭೆಯ ಬಳಿಕ ಸೆಪ್ಟೆಂಬರ್ 17ರಂದು ತೆಲಂಗಾಣ ರಚನೆಯಾದ ದಿನದಂದು ಪಕ್ಷವು ಹೈದರಾಬಾದ್‌ನಲ್ಲಿ ಮೆಗಾ ರ್‍ಯಾಲಿ ನಡೆಸಲಿದ್ದು, ಅದರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ತಾನು ಗೆದ್ದರೆ ಕರ್ನಾಟಕದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಘೋಷಿಸುವ ಸಾಧ್ಯತೆಯಿದೆ.

ಈ ವರ್ಷಾಂತ್ಯದ ಒಳಗೆ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಂನಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ವರ್ಷದ ಏಪ್ರಿಲ್‌-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆ ಚುನಾವಣೆಗಳಿಗೆ ಸಿಡಬ್ಲ್ಯುಸಿ ಸಭೆಯಲ್ಲಿ ರಣತಂತ್ರ ರೂಪಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಸನಾತನ ಧರ್ಮ ನಿರ್ಮೂಲನೆಗೆಂದೇ I.N.D.I.A ಬಣ ರಚಿಸಲಾಗಿದೆ: ಮತ್ತೊಬ್ಬ ಡಿಎಂಕೆ ಸಚಿವನ ವಿಡಿಯೋ ವೈರಲ್‌

ಇದನ್ನು ಓದಿ: ರಾಹುಲ್‌ ಗಾಂಧಿ ಉತ್ತರ ಭಾರತದ ಪಪ್ಪು ಆದ್ರೆ ಉದಯನಿಧಿ ದಕ್ಷಿಣ ಭಾರತದ ಪಪ್ಪು: ಅಣ್ಣಾಮಲೈ ವ್ಯಂಗ್ಯ

click me!