ಅತ್ತ ಕಾಂಗ್ರೆಸ್ಸಿನಲ್ಲಿನ ಮುಸ್ಲಿಮ ಮುಖಂಡರು ಧಾರವಾಡ ಜಿಲ್ಲೆಯಲ್ಲಿ ಒಂದು ಕ್ಷೇತ್ರಕ್ಕಾದರೂ ಮುಸ್ಲಿಮರಿಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿರುವ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ಕೊಡಿ ಎಂಬ ಕೂಗು ಜೋರಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಫೆ.3) : ಅತ್ತ ಕಾಂಗ್ರೆಸ್ಸಿನಲ್ಲಿನ ಮುಸ್ಲಿಮ ಮುಖಂಡರು ಧಾರವಾಡ ಜಿಲ್ಲೆಯಲ್ಲಿ ಒಂದು ಕ್ಷೇತ್ರಕ್ಕಾದರೂ ಮುಸ್ಲಿಮರಿಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿರುವ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ಕೊಡಿ ಎಂಬ ಕೂಗು ಜೋರಾಗಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಪಶ್ಚಿಮ, ಪೂರ್ವ, ಧಾರವಾಡ ಗ್ರಾಮಾಂತರ, ಕುಂದಗೋಳ, ಕಲಘಟಗಿ, ನವಲಗುಂದ ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಇದರಲ್ಲಿ ನವಲಗುಂದ, ಕುಂದಗೋಳ ಕ್ಷೇತ್ರಗಳಲ್ಲಿ ತಲಾ 50 ಸಾವಿರಕ್ಕೂ ಅಧಿಕ ಕುರುಬ ಸಮುದಾಯದ ಮತಗಳಿದ್ದರೆ, ಧಾರವಾಡ ಗ್ರಾಮಾಂತರ ಹಾಗೂ ಶಿಗ್ಗಾಂವಿ ಸವಣೂರು ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ತಲಾ 35-40 ಸಾವಿರಕ್ಕೂ ಅಧಿಕ ಮತಗಳಿವೆ. ಇನ್ನುಳಿದ ಕ್ಷೇತ್ರಗಳಲ್ಲೂ ಕುರುಬ ಸಮಯದಾಯದ ಮತಗಳ ಪ್ರಮಾಣ ಸಾಕಷ್ಟಿದೆ.
ಶಾಸಕ ಅರವಿಂದ 'ಬೆಲ್ಲದ ರುಚಿ' ಕೆಡಿಸ್ತಾರಾ ಕಾಂಗ್ರೆಸ್ ಯುವ ನಾಯಕ ಡಾ.ಮಯೂರ ಮೋರೆ!
ಕಾಂಗ್ರೆಸ್ ನವಲಗುಂದ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಕುರುಬ ಸಮುದಾಯದವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುತ್ತಿದೆ. ಆದರೆ ಬಿಜೆಪಿಯಲ್ಲಿ ಮಾತ್ರ ಈ ವರೆಗೂ ಒಂದೇ ಒಂದು ಬಾರಿ ಯಾವ ಕ್ಷೇತ್ರದಲ್ಲೂ ಕುರುಬ ಸಮುದಾಯದವರಿಗೆ ಟಿಕೆಟ್ ಕೊಟ್ಟಿಲ್ಲ. ಕುರುಬ ಸಮುದಾಯದವರು ಕಾಂಗ್ರೆಸ್ಸಿನಂತೆ ಬಿಜೆಪಿಯೊಂದಿಗೂ ಗುರುತಿಸಿಕೊಂಡಿರುವುದುಂಟು. ಈ ಕಾರಣದಿಂದಲಾದರೂ ಒಂದು ಕ್ಷೇತ್ರಕ್ಕಾದರೂ ಕುರುಬ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ.
ಯಾವ ಕ್ಷೇತ್ರ ಸೂಕ್ತ?:
ಲೋಕಸಭಾ ಕ್ಷೇತ್ರದ 8 ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಇಲ್ಲಿನ ಹಾಲಿ ಶಾಸಕರನ್ನು ಬಿಟ್ಟು ಟಿಕೆಟ್ ಕೊಡುವುದು ಕಷ್ಟ. ಇನ್ನುಳಿದ ಎರಡು ಕ್ಷೇತ್ರಗಳಲ್ಲಿ ಹುಬ್ಬಳ್ಳಿ -ಧಾರವಾಡ ಪೂರ್ವ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲೂ ಟಿಕೆಟ್ ಸಿಗುವುದಿಲ್ಲ. ಕುಂದಗೋಳ ಕ್ಷೇತ್ರದಲ್ಲಿ ಸದ್ಯ ಕಾಂಗ್ರೆಸ್ ಶಾಸಕರಿದ್ದಾರೆ. ಅವರು ಕೂಡ ಕುರುಬ ಸಮುದಾಯಕ್ಕೆ ಸೇರಿದವರು. ಈ ಕ್ಷೇತ್ರದಲ್ಲಿ ಬಿಜೆಪಿಯೂ ಕುರುಬ ಸಮುದಾಯದವರಿಗೆ ಟಿಕೆಟ್ ಕೊಟ್ಟರೆ ಸರಿಯಾದ ಠಕ್ಕರ್ ಕೊಟ್ಟು ಗೆಲವು ಸಾಧಿಸಬಹುದು. ಉಳಿದ ಕ್ಷೇತ್ರಗಳಲ್ಲಿ ಕುರುಬ ಸಮುದಾಯದವರ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಬಿಜೆಪಿಯಲ್ಲಿನ ಕುರುಬ ಸಮುದಾಯದ ಮುಖಂಡರದ್ದು.
ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಎರಡ್ಮೂರು ಬಾರಿ ಕುರುಬ ಸಮುದಾಯದವರು ಸಭೆ ನಡೆಸಿದ್ದಾರೆ. ಜತೆಗೆ ತಮ್ಮ ಬೇಡಿಕೆಯನ್ನೂ ರಾಜ್ಯದ ಮುಖಂಡರಿಗೂ ತಿಳಿಸಿದ್ದಾರೆ. ಶೀಘ್ರದಲ್ಲೇ ಹೈಕಮಾಂಡ್ ಮುಂದೆ ನಿಯೋಗವೊಂದನ್ನು ತೆಗೆದುಕೊಂಡು ಈ ಸಂಬಂಧ ಮನವಿ ಸಲ್ಲಿಸಲು ಈ ಸಮುದಾಯ ನಿರ್ಧರಿಸಿದೆ.
ರೈತರು ಉಳಿಯಲು ಇಸ್ರೇಲ್ ಮಾದರಿ ಕಾನೂನು ಜಾರಿಯಾಗಲಿ: ಸಭಾಪತಿ ಹೊರಟ್ಟಿ
ಒಟ್ಟಿನಲ್ಲಿ ಕುಂದಗೋಳ ಕ್ಷೇತ್ರದಲ್ಲೀಗ ಅತ್ತ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಎಂ.ಆರ್. ಪಾಟೀಲ ನಡುವೆ ಪೈಪೋಟಿ ನಡೆದಿರುವ ಮಧ್ಯೆಯೇ ಈ ಸಲ ತಮ್ಮ ಸಮುದಾಯದವರಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ಮಾತು ಬಿಜೆಪಿ ಕುರುಬ ಸಮುದಾಯದ್ದಾಗಿದೆ. ಬಿಜೆಪಿ ಯಾರಿಗೆ ಟಿಕೆಟ್ ಕೊಡುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ.