ಮೇಕೆದಾಟು ಯೋಜನೆ, ಕಾಂಗ್ರೆಸ್ ಭರವಸೆ ಏನಾಯಿತು: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

By Govindaraj S  |  First Published Apr 21, 2024, 7:43 AM IST

ನಮ್ಮ ನೀರು ನಮ್ಮ ಹಕ್ಕು ಘೋಷವಾಕ್ಯದೊಂದಿಗೆ ತೂರಾಡಿಕೊಂಡು ಹೋರಾಟ ನಡೆಸಿದ ಮೇಕೆದಾಟು ಯೋಜನೆ ಕಾಂಗ್ರೆಸ್ ಸರ್ಕಾರ ಬಂದು 11 ತಿಂಗಳಾಯಿತು. ರೈತರು, ಜನರಿಗೆ ನೀಡಿದ ಭರವಸೆ ಏನಾಯಿತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು. 


ಭಾರತೀನಗರ (ಏ.21): ನಮ್ಮ ನೀರು ನಮ್ಮ ಹಕ್ಕು ಘೋಷವಾಕ್ಯದೊಂದಿಗೆ ತೂರಾಡಿಕೊಂಡು ಹೋರಾಟ ನಡೆಸಿದ ಮೇಕೆದಾಟು ಯೋಜನೆ ಕಾಂಗ್ರೆಸ್ ಸರ್ಕಾರ ಬಂದು 11 ತಿಂಗಳಾಯಿತು. ರೈತರು, ಜನರಿಗೆ ನೀಡಿದ ಭರವಸೆ ಏನಾಯಿತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು. ಎನ್‌ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಪ್ರಚಾರ ನಡೆಸಿದ ವೇಳೆ ಮಾತನಾಡಿ, ಕಳೆದ 11 ತಿಂಗಳ ಹಿಂದೆ ಮೇಕೆದಾಟು ಕಟ್ಟುತ್ತೇವೆ ಎಂದು ಕಾಂಗ್ರೆಸ್ ನವರು ತೂರಾಡಿಕೊಂಡು ಹೋರಾಟ ನಡೆಸಿದರು. 

ಪಕ್ಷ ಅಧಿಕಾರಕ್ಕೆ ಬಂದರೂ ಈ ಯೋಜನೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ರಾಜ್ಯದ ಜನತೆ ಚಿಂತಿಸಬೇಕಾಗಿದೆ ಎಂದರು. ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಿದಾಗಲೆಲ್ಲ ಬರಗಾಲ ತಪ್ಪಿದ್ದಲ್ಲ. ಸಿಎಂ ಸಿದ್ದರಾಮಯ್ಯನವರ ಕಾಲ್ಗುಣವೇ ಹಾಗೆ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಕೆಆರ್‌ಎಸ್‌ನಲ್ಲಿ 72 ಅಡಿ ನೀರಿದ್ದಾಗಲೂ ರೈತರ ಬೆಳೆಗಳಿಗೆ ನೀರುಕೊಟ್ಟ ಸರ್ಕಾರ ನಮ್ಮದು. ಆದರೆ, ಈಗ 86 ಅಡಿ ನೀರಿದ್ದರೂ ಬೆಳೆಗಳಿಗೆ ನೀರು ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

Tap to resize

Latest Videos

ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ದೇಶ, ವಿದೇಶದ ಪ್ರಭಾವಿಗಳು ಒಂದಾಗಿದ್ದಾರೆ: ಪ್ರಧಾನಿ ಮೋದಿ

5 ಗ್ಯಾರಂಟಿಗಳನ್ನು ನೀಡಿದ್ದೇವೆಂದು ಕಾಂಗ್ರೆಸ್ ಸರ್ಕಾರ ಬೆನ್ನು ತಟ್ಟಿಕೊಂಡು ಓಡಾಡುತ್ತಿದೆ. ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾತನಾಡಿದರೆ ಮಂಡ್ಯ ಜಿಲ್ಲೆಯ ಜನ ಕೇಳುವುದಿಲ್ಲ ಎಂದರು. ಕಾಂಗ್ರೆಸ್ ಸರ್ಕಾರ ದಲಿತ ಸಮುದಾಯದ ಮೇಲೆ ಗೊಂದಲ ಸೃಷ್ಟಿಮಾಡುತ್ತಿದ್ದಾರೆ. ಸಂವಿಧಾನವನ್ನು 67 ವರ್ಷದಲ್ಲಿ 89 ಬಾರಿ ತಿದ್ದುಪಡಿ ಮಾಡಿರುವ ಪಕ್ಷ ಎಂದರೆ ಅದು ಕಾಂಗ್ರೆಸ್ ಪಕ್ಷ. ಆದರೆ, ಪ್ರಧಾನಿ ಮೋದಿ ಅವರು ಸಂವಿಧಾನವನ್ನು ಬದಲಾವಣೆ ಮಾಡುತ್ತಾರೆ ಸುಳ್ಳು, ಅಪಪ್ರಚಾರ ಮಾಡಿ ದಲಿತ ಸಮುದಾಯವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ಗೆ ದಲಿತ ಸಮುದಾಯದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. 2013ರಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು, 2018ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಆದರೆ, ಇಬ್ಬರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು 92 ವರ್ಷ ಇಳಿ ವಯಸ್ಸಿನಲ್ಲೂ ಕಾವೇರಿ ರಕ್ಷಣೆಗಾಗಿ ರಾಜ್ಯಸಭಾ, ಸಂಸತ್‌ನಲ್ಲಿ ನಿಂತು ಆರೋಗ್ಯದ ಸಮಸ್ಯೆ ಇದ್ದರೂ ಹೋರಾಟ ನಡೆಸುತ್ತಿದ್ದಾರೆ. ಆ ಹೋರಾಟಕ್ಕೆ ಶಕ್ತಿ ತಂದುಕೊಡಬೇಕಾದರೆ ಕಾವೇರಿ ಪುತ್ರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಸದ ಸ್ಥಾನಕ್ಕೆ ಆಯ್ಕೆಗೊಳಿಸಿ ಎಂದು ಮನವಿ ಮಾಡಿದರು.

ಕನ್ನಡದಲ್ಲಿ ಮಾತಾಡಿದ್ದಕ್ಕೆ ಹಲ್ಲೆ: ನಟಿ ಹರ್ಷಿಕಾ, ಭುವನ್‌ ದೂರು

ಪ್ರಚಾರಕ್ಕಾಗಿ ನಿಖಿಲ್‌ಕುಮಾರ್‌ಸ್ವಾಮಿ ಭಾರತೀನಗರದ ಮದ್ದೂರು-ಮಳವಳ್ಳಿ ಹೆದ್ದಾರಿಗೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ, ಕಾರ್ಯಕರ್ತರು ಜೈಕಾರ ಕೂಗಿದರು. ಅಭಿಮಾನಿಗಳು ಸೆಲ್ಫಿಗೆ ಮುಂದಾದರು. ಇದೇ ವೇಳೆ ಭಾರಿ ಗಾತ್ರದ ಹಾರವನ್ನು ಕ್ರೇನ್‌ಮೂಲಕ ಹಾಕಿ ನಿಖಿಲ್‌ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು. ಈ ವೇಳೆ ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡರಾದ ಅಣ್ಣೂರು ನವೀನ್, ಹನುಮಂತೇಗೌಡ, ಗುರುದೇವರಹಳ್ಳಿ ಅರವಿಂದ್ ಸೇರಿದಂತೆ ಹಲವರಿದ್ದರು.

click me!