
ಬೆಂಗಳೂರು (ಜು.05): ದಾವಣಗೆರೆ ಜಿಲ್ಲಾ ಘಟಕದಲ್ಲಿನ ಬಿಕ್ಕಟ್ಟಿಗೆ ಸಂಬಂಧಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತಿತರ ಮುಖಂಡರೊಂದಿಗೆ ಸಭೆ ನಡೆಸಿರುವ ರಾಜ್ಯ ಬಿಜೆಪಿ ನಾಯಕರು, ಏನೇ ಭಿನ್ನಾಭಿಪ್ರಾಯ ಇದ್ದರೂ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದಾರೆ. ಇದೇ ವೇಳೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಕೇಂದ್ರದ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಪತ್ನಿ ಗಾಯತ್ರಿ ಅವರ ಸೋಲಿಗೆ ಸಿದ್ದೇಶ್ವರ್ ಅವರೇ ಹೊಣೆಗಾರರು. ಅದರಲ್ಲಿ ನಮ್ಮ ಪಾತ್ರ ಇಲ್ಲ ಎಂದು ರೇಣುಕಾಚಾರ್ಯ ಅವರು ದೂರಿನ ಸುರಿಮಳೆಗೈದಿದ್ದಾರೆ. ಜತೆಗೆ ಲಿಖಿತ ದಾಖಲೆಗಳನ್ನೂ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ರೀತಿ ಮುಂದುವರೆದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರೀತಿ ನಿಮ್ಮನ್ನೂ ಉಚ್ಚಾಟಿಸಬೇಕಾಗುತ್ತದೆ ಎಂದು ರಾಜ್ಯ ನಾಯಕರು ರೇಣುಕಾಚಾರ್ಯ ಅವರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದ್ದರೂ, ಇದನ್ನು ಸ್ವತಃ ರೇಣುಕಾಚಾರ್ಯ ಬಲವಾಗಿ ನಿರಾಕರಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಂಸದ ಗೋವಿಂದ ಕಾರಜೋಳ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರೇಣುಕಾಚಾರ್ಯ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಕಳೆದ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳಾಗಿದ್ದವರನ್ನು ಸಭೆಗೆ ಆಹ್ವಾನಿಸಿತ್ತು.
ಇತ್ತೀಚೆಗೆ ಸಿದ್ದೇಶ್ವರ್ ಬಣದೊಂದಿಗೆ ರಾಜ್ಯ ನಾಯಕರು ಮಾತುಕತೆ ನಡೆಸಿದ್ದರು. ಇದೀಗ ರೇಣುಕಾಚಾರ್ಯ ಬಣದ ಸರದಿ. ತಮ್ಮ ಪತ್ನಿ ಗಾಯತ್ರಿ ಸೋಲಿಗೆ ರೇಣುಕಾಚಾರ್ಯ ಮತ್ತಿತರ ಮುಖಂಡರೇ ಕಾರಣ ಎಂದು ಸಿದ್ದೇಶ್ವರ್ ಮತ್ತು ಶಾಸಕ ಬಿ.ಪಿ.ಹರೀಶ್ ಅವರು ರಾಜ್ಯ ನಾಯಕರು ಆರೋಪಿಸಿದ್ದರು. ಇದನ್ನೇ ಪ್ರಮುಖವಾಗಿಟ್ಚುಕೊಂಡು ರಾಜ್ಯ ನಾಯಕರು ರೇಣುಕಾಚಾರ್ಯ ಬಣದ ಮುಖಂಡರನ್ನು ಪ್ರಶ್ನಿಸಿದರು ಎನ್ನಲಾಗಿದೆ. ಆದರೆ, ಈ ಆರೋಪವನ್ನು ಬಲವಾಗಿ ಅಲ್ಲಗಳೆದ ಮುಖಂಡರು ಬಿಜೆಪಿ ಅಭ್ಯರ್ಥಿ ಸೋಲು ಸ್ವಯಂಕೃತ ಅಪರಾಧ. ಸಿದ್ದೇಶ್ವರ್ ಅವರ ಕಾರ್ಯವೈಖರಿಯಿಂದಲೇ ಸೋಲುಂಟಾಯಿತು.
ಇದರಲ್ಲಿ ನಮ್ಮ ಯಾರದ್ದೇ ಪಾತ್ರ ಇಲ್ಲ ಎಂದು ಪ್ರತಿಪಾದಿಸಿದರು. ಜತೆಗೆ ಸಿದ್ದೇಶ್ವರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಶ್ರಮಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣದ ಬೆಂಬಲವನ್ನೂ ನೀಡಿದ್ದರು ಎಂದು ಗಂಭೀರವಾಗಿ ಆಪಾದಿಸಿದರು ಎಂದು ತಿಳಿದು ಬಂದಿದೆ. ಪಕ್ಷದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಯಾರಾದರೂ ಮಾತನಾಡಿದರೆ ಅದು ಪಕ್ಷದ ವಿರುದ್ಧ ಮಾತನಾಡಿದಂತೆ. ಅಂಥವರಿಗೆ ನಾನು ತಿರುಗೇಟು ಕೊಟ್ಟಿದ್ದೇನೆ. ಇದೇನು ಪಕ್ಷ ವಿರೋಧಿಯೇ ಎಂದು ರೇಣುಕಾಚಾರ್ಯ ರಾಜ್ಯ ನಾಯಕರನ್ನು ಪ್ರಶ್ನಿಸಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.