
ಬೆಂಗಳೂರು (ಜ.27): ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಒಂದೇ ದಿನದಲ್ಲಿ ಪ್ರಧಾನಿ ಮೋದಿ ಅವರ ಕೈಯಿಂದ ಮೇಕೆದಾಟು ಯೋಜನೆಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5,300 ಕೋಟಿಯನ್ನೇ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ಬಜೆಟ್‌ನಲ್ಲಿ ಹೊಸ ಯೋಜನೆಗಳಿಗೆ ಹಣ ನೀಡುತ್ತದೆ ಎಂದು ನಂಬುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದರು.
ದೇವೇಗೌಡರು, ಕುಮಾರಸ್ವಾಮಿ ಒಂದೇ ದಿನದಲ್ಲಿ ಮೋದಿ ಅವರ ಕೈಯಿಂದ ಮೇಕೆದಾಟಿಗೆ ಸಹಿ ಹಾಕಿಸುವುದಾಗಿ ಹೇಳಿದ್ದರು. ಪ್ರಹ್ಲಾದ್ ಜೋಶಿ ಹಾಗೂ ಜಗದೀಶ್ ಶೆಟ್ಟರ್ ಅವರು ಕಳಸಾ ಬಂಡೂರಿ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುತ್ತೇವೆ ಎಂದಿದ್ದರು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದರು. ನಾವು ಈ ವಿಚಾರವಾಗಿ ಮನವಿ ಮಾಡಿದ್ದೇವೆ. ರಾಜ್ಯದಿಂದ ಇಷ್ಟೊಂದು ಸಂಸದರು ಇದ್ದಾರೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೆ ಮೋಸ ಮಾಡುವುದಿಲ್ಲ, ಅನುದಾನ ಕೊಡುತ್ತಾರೆ ಎಂಬ ನಂಬಿಕೆ ಮೇಲೆ ಕೇಳಿದ್ದೇವೆ. ಮುಖ್ಯಮಂತ್ರಿಗಳು ಸಹ ಪತ್ರ ಬರೆದಿದ್ದಾರೆ. ಸಂಸತ್ ಕಲಾಪದ ವೇಳೆಯೂ ಹೋಗಿ ಭೇಟಿ ಮಾಡುತ್ತೇನೆ. ನಮ್ಮ ಕರ್ತವ್ಯ ಮಾಡುತ್ತೇನೆ. ಫಲಾಫಲ ಭಗವಂತನಿಗೆ ಬಿಟ್ಟದ್ದು ಹೇಳಿದರು.
ಬೆಂಗಳೂರಿನ ಯೋಜನೆಗಳಿಗೆ ಅನುದಾನ ಕೋರಿ ಪತ್ರ ಬರೆದಿರುವುದನ್ನು ಕೇಂದ್ರ ಸರ್ಕಾರ ಪರಿಗಣಿಸುವುದೇ ಎಂಬ ಪ್ರಶ್ನೆಗೆ, ಬೆಂಗಳೂರು ಜಾಗತಿಕ ನಗರ. ಹೀಗಾಗಿ ಕೇಂದ್ರ ಸರ್ಕಾರ ಕೇವಲ ಬಿಹಾರ ಹಾಗೂ ಆಂಧ್ರಪ್ರದೇಶವನ್ನು ಮಾತ್ರ ನೋಡಬಾರದು. ಕರ್ನಾಟಕದ ಪ್ರತಿನಿಧಿಯಾಗಿ ನಮ್ಮ ರಾಜ್ಯದ ಕಡೆಯೂ ನೋಡಿ, ಬೆಂಗಳೂರಿಗೆ ಅಗತ್ಯ ಅನುದಾನ ನೀಡಿ ಎಂದು ಕೇಂದ್ರ ಹಣಕಾಸು ಸಚಿವರಿಗೆ ಹಾಗೂ ಪ್ರಧಾನಮಂತ್ರಿಗಳಿಗೂ ಮನವಿ ಮಾಡಿದ್ದೇನೆ. ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಉಳಿದಿದ್ದು ಕೇಂದ್ರಕ್ಕೆ ಬಿಟ್ಟಿದ್ದು ಎಂದು ಹೇಳಿದರು. ಕೇಂದ್ರ ಸರ್ಕಾರಕ್ಕೆ ಗಡುವು ನೀಡುತ್ತೀರಾ ಎಂದು ಕೇಳಿದಾಗ, ನಾವು ಗಡುವು ನೀಡುವುದಿಲ್ಲ. ಮಹಾತ್ಮಾ ಗಾಂಧೀಜಿ ಅವರು ಒಂದು ಮಾತು ಹೇಳಿದ್ದಾರೆ. ನೀನು ನಿನ್ನನ್ನು ಗೆಲ್ಲಬೇಕಾದರೆ ನಿಮ್ಮ ಮೆದುಳು ಪ್ರಯೋಗಿಸು, ನೀನು ಬೇರೆಯವರನ್ನು ಗೆಲ್ಲಬೇಕಾದರೆ ನಿನ್ನ ಹೃದಯವನ್ನು ಪ್ರಯೋಗಿಸು ಎಂದು ಹೇಳಿದ್ದಾರೆ. ನಮ್ಮದೂ ಅದೇ ಮಾರ್ಗ ಎಂದಷ್ಟೇ ಹೇಳಿದರು.
ಕಾಂಗ್ರೆಸ್ ಸೇರಲು ಶ್ರೀರಾಮುಲುಗೆ ನಾನು ಆಹ್ವಾನ ಕೊಟ್ಟಿಲ್ಲ: ಡಿ.ಕೆ.ಶಿವಕುಮಾರ್
ಎರಡು ನಿಮಿಷ ಕಾಫಿ ಕುಡಿಯಬಾರದೇ?: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಪ್ರತ್ಯೇಕ ಮಾತುಕತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಈ ಕಚೇರಿ ಕಟ್ಟಿದ್ದು ಅವರೇ. ಅವರು ಇಲ್ಲಿ 2 ನಿಮಿಷ ನೆಮ್ಮದಿಯಾಗಿ ಕಾಫಿಯನ್ನೂ ಕುಡಿಯಬಾರದೇ? ನೀವು ನಿಮ್ಮ ಮನೆಯವರು ಚರ್ಚೆ ಮಾಡಿದನ್ನು ಸಾರ್ವಜನಿಕವಾಗಿ ಮಾತನಾಡುತ್ತೀರಾ ಎಂದು ಸುದ್ದಿಗಾರರಿಗೆ ಪ್ರಶ್ನಿಸಿದರು. ಕುಟುಂಬ ಬೇರೆ ರಾಜಕೀಯ ಬೇರೆ ಎಂದು ಕೇಳಿದಾಗ, ‘ಕಾಂಗ್ರೆಸ್ ಪಕ್ಷವೇ ಒಂದು ಕುಟುಂಬ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ ಎಂದು ಮುಖ್ಯಮಂತ್ರಿಗಳು ವಾಣಿ ವಿಲಾಸ ಸಾಗರ ಆಣೆಕಟ್ಟಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದ ವೇಳೆ ಸ್ಪಷ್ಟಪಡಿಸಿದ್ದಾರೆ’ ಎಂದಷ್ಟೇ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.