ಸಚಿವರಾಗಲು ಎಚ್.ವಿಶ್ವನಾಥ್ ಅರ್ಹರಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಇದರಿಂದ ಸಚಿವಾಕಾಂಕ್ಷಿಯಾಗಿದ್ದ ಹಳ್ಳಿಹಕ್ಕಿಗೆ ದಿಕ್ಕುತೋಚದಂತಾಗಿದೆ. ಇನ್ನು ಈ ಬಗ್ಗೆ ಸಾಹುಕಾರ್ ಪ್ರತಿಕ್ರಿಯಿಸಿದ್ದು ಹೀಗೆ...!
ಬೆಳಗಾವಿ, (ಡಿ.01): ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅನರ್ಹತೆ ವಿಚಾರವಾಗಿ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದು ನಿಜ. ಆದರೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರಚನೆಗಾಗಿ ತ್ಯಾಗ ಮಾಡಿರುವ 17 ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತೇವೆ ಎಂದರು.
ವಿಶ್ವನಾಥ್‌ಗೆ ಬಿಗ್ ಶಾಕ್: ಮಂತ್ರಿಗಿರಿ ಕನಸು ಕಾಣುತ್ತಿದ್ದ ಹಳ್ಳಿಹಕ್ಕಿ ಕನಸಿಗೆ ತಣ್ಣೀರು
ದೇವರ ಮುಂದೆ ಸುಳ್ಳು ಆಣೆ, ಪ್ರಮಾಣ ಮಾಡಿದ್ದಕ್ಕೆ ನ್ಯಾಯಾಂಗದಲ್ಲಿ ಶಿಕ್ಷೆಯಾಗಿದೆ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಹೇಳಿರುವುದಕ್ಕೂ ಹೈಕೋರ್ಟ್ ಆದೇಶಕ್ಕೂ ಯಾವುದೇ ಸಂಬಂಧ ಇಲ್ಲ. ರಾಜಕೀಯದಲ್ಲಿ ಯಾವ ಶಾಪವೂ ನಡೆಯಲ್ಲ. ಹಾಗಾಗಿ ನಾವೆಲ್ಲ ಎಚ್. ವಿಶ್ವನಾಥ್ ಅವರ ಪರವಾಗಿ ನಿಲ್ಲುತ್ತೇವೆ. ಎಷ್ಟೇ ಕಷ್ಟ ಬಂದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಶಾಸಕರ ಅನರ್ಹತೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಮ್ಮ ಪರವಾಗಿಯೇ ಆದೇಶ ಹೊರಡಿಸಿದೆ. ವಿಶ್ವನಾಥ್ ಅವರು ಹಿಂಜರಿಯುವ ಅವಶ್ಯಕತೆ ಇಲ್ಲ. ಮುಂದಿನ ಹೋರಾಟವನ್ನು ಒಗ್ಗಟ್ಟಿನಿಂದಲೇ ಎದುರಿಸುತ್ತೇವೆ. ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಈ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.