
ಬೆಂಗಳೂರು (ಆ.22): ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಮಾಡಿಲ್ಲ ಎಂಬುದಾಗಿ ಸಚಿವ ಬಿ.ನಾಗೇಂದ್ರ ಅವರು ವಾಲ್ಮೀಕಿ ರಚಿಸಿದ ರಾಮಾಯಣ ಕೃತಿಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಶ್ರೀರಾಮುಲು ಸವಾಲು ಎಸೆದಿದ್ದಾರೆ.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ನಾಗೇಂದ್ರ ಯಾವ ಮಟ್ಟಿಗೂ ಹೋಗಬಲ್ಲರು. ರಾಮಾಯಣದ ಮೇಲೂ, ಮಹರ್ಷಿ ವಾಲ್ಮೀಕಿ ಮೇಲೂ ಆಣೆ ಇಡೋದಕ್ಕೂ ಅವರು ಸೈ. ನಾಗೇಂದ್ರ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಯಾವ ರೀತಿ ನಾವು ಹೋರಾಟ ಮಾಡಬೇಕು ಎಂಬ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ ಎಂದು ತಿಳಿಸಿದರು.
ಮಾನ ಮರ್ಯಾದೆ ಯಾವುದೂ ಇಲ್ಲದ ಕಾಂಗ್ರೆಸ್ ಪಕ್ಷ ನದಿ ಉಗಮವಾಗಿ ಹರಿಯುವಂತೆ ಭ್ರಷ್ಟಾಚಾರವನ್ನು ನಿರಂತರವಾಗಿ ನಡೆಸುತ್ತಲೇ ಬಂದಿದೆ. ನೆಹರು ಕುಟುಂಬದ ರಾಹುಲ್ ಗಾಂಧಿವರೆಗೆ ಭ್ರಷ್ಟಾಚಾರ ನಡೆಸುತ್ತಲೇ ಇದೆ ಎಂದು ಆಪಾದಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ, ಜವಾಹರ ಲಾಲ್ ನೆಹರು ಅವರು ಪ್ರಧಾನಿಯಾದಾಗಿನಿಂದಲೂ ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತಲೇ ಬಂದಿದೆ.
ದಲಿತನಾದ ಕಾರಣಕ್ಕೆ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ ಎಂಬ ಮಾತನ್ನು ಸಚಿವ ನಾಗೇಂದ್ರ ಹೇಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಜಾತಿ ಇಲ್ಲ. ಚರಿತ್ರೆ ಹಾಗೂ ಮುಖ ಇಲ್ಲ. ನಿಗಮದ ಮೂಲಕ ಹಲವಾರು ಕಾರ್ಯಕ್ರಮ ಜಾರಿ ಮಾಡಲು ಹಣ ಬಳಸಬೇಕಿತ್ತು. ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ನಿಗಮದ ಹಣ ಬಳಸುವ ಬದಲು ಅವರ ಭವಿಷ್ಯವನ್ನೇ ಬಾಡುವಂತೆ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಗಮದ ಹಣ ಕೊಳ್ಳೆ ಹೊಡೆದು ರಾಹುಲ್ ಗಾಂಧಿ ಅವರ ದೆಹಲಿ ಮನೆಗೆ ಕಳುಹಿಸಿದರು. ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣ ಲಪಟಾಯಿಸಿದರು. ಇದು ಇಡೀ ಸಮಾಜ ತಲೆತಗ್ಗಿಸುವ ವಿಚಾರ. ವಾಲ್ಮೀಕಿ ಸಮುದಾಯಕ್ಕೆ ನೋವು ಮಾಡಿದ್ದಾರೆ. ಸರ್ಕಾರದ ಖಜಾನೆಯಲ್ಲಿದ್ದ ಹಣವನ್ನು ಸಾವಿರಾರು ಖಾತೆಗಳಿಗೆ ವರ್ಗಾಯಿಸಿದ್ದಾರೆ. ಐಷಾರಾಮಿ ಕಾರು ಖರೀದಿ, ಚಿನ್ನ ಖರೀದಿ ಮಾಡಿದ್ದಾರೆ. ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದು ಸೇರಿದಂತೆ ಎಲ್ಲವೂ ದಾಖಲೆಯಲ್ಲಿದೆ ಎಂದು ಶ್ರೀರಾಮುಲು ವಿವರಿಸಿದರು.
ಆತ್ಮಸಾಕ್ಷಿ ಇದ್ದಿದ್ದರೆ ನಾಗೇಂದ್ರ ಅವರು ಸಚಿವರಾಗಿ ಇರುತ್ತಿರಲಿಲ್ಲ. ಇಷ್ಟೊಂದು ಹಗರಣ ಮಾಡಿ ಹಣ ತಿಂದೂ ಸದನದಲ್ಲಿ ಸಂವಿಧಾನ ಪ್ರತಿ ಹಿಡಿದು ಓಡಾಡುತ್ತಾರೆ. ಬಾಬಾ ಸಾಹೇಬರು ಭ್ರಷ್ಟಾಚಾರಿಗಳನ್ನು ರಕ್ಷಿಸಲು ಸಂವಿಧಾನ ಮಾಡಿಲ್ಲ ಎಂದರು.
ದಲಿತ ಸಮುದಾಯದ ಮಕ್ಕಳ ಭವಿಷ್ಯವನ್ನು ಕಸಿಯವ ವೇಳೆ ನೆನಪಾಗಿಲ್ಲ. ನಾಗೇಂದ್ರ ಅವರಿಗೆ ಆಗ ಜಾತಿ ಕಂಡಿಲ್ಲ. ಸಚಿವ ಸ್ಥಾನ ಉಳಿಸಿಕೊಳ್ಳಲು ಅವರಿಗೆ ಜಾತಿ ನೆನಪಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸುವುದೇ ಆದರೆ ನಾಗೇಂದ್ರ ಅವರನ್ನು ಕೈಬಿಟ್ಟು ಇದೇ ಸಮುದಾಯದ ಬೇರೆಯವರನ್ನು ಸಚಿವರನ್ನಾಗಿ ನೇಮಿಸಲಿ. ಕಳಂಕಿತ ನಾಗೇಂದ್ರ ಮಾತ್ರ ಸಚಿವರಾಗಿ ಇರಬಾರದು. ಅವರನ್ನು ಕ್ಷಮಿಸಲಾಗದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲ ಪಕ್ಷದ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ರಾಜುಗೌಡ, ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮಾಜಿ ಸಚಿವ ಶಿವನಗೌಡ ನಾಯಕ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.