ಮಂತ್ರಿಗಿರಿ ಮಿಸ್ ಆದ ಬೆನ್ನಲ್ಲೇ ಕತ್ತಿ ಸೋದರರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಭೇಟಿ| ಇಂದು ಅಮಿತ್ ಭೇಟಿ ಮಾಡಿ ಮಾತುಕತೆ ಸಾಧ್ಯತೆ
ಬೆಂಗಳೂರು[ಫೆ.13]: ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಉಮೇಶ್ ಕತ್ತಿ ಮತ್ತು ಅವರ ಸಹೋದರ ರಮೇಶ್ ಕತ್ತಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ರಾಜ್ಯದಲ್ಲಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮತ್ತು ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಇಬ್ಬರು ಸಹೋದರರು ತಮಗಾದ ಅನ್ಯಾಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಜತೆ ಹಂಚಿಕೊಂಡರು. ಲೋಕಸಭೆ ಚುನಾವಣೆ ವೇಳೆ ರಮೇಶ್ ಕತ್ತಿ ಅವರಿಗೆ ಟಿಕೆಟ್ ನೀಡದೆ ಸಚಿವೆ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿ ರಾಜ್ಯಸಭಾ ಸದಸ್ಯ ಸ್ಥಾನ ನೀಡುವಂತೆ ಉಮೇಶ್ ಕತ್ತಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
BSYಗೂ ತಲೆನೋವಾಗುತ್ತಾ ಬೆಳಗಾವಿ ರಾಜಕಾರಣ? ಸಂದಿಗ್ಧ ಸ್ಥಿತಿಯಲ್ಲಿ ಸಿಎಂ
ಉಮೇಶ್ ಕತ್ತಿ ಅವರು ಹಿರಿಯ ಶಾಸಕರಾಗಿದ್ದು, ಸಚಿವ ಸ್ಥಾನ ಕೇಳಿರಲಿಲ್ಲ. ಆದರೂ ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಕತ್ತಿ ಅವರನ್ನು ಸಚಿವರನ್ನಾಗಿ ಮಾಡುವುದಾಗಿ ಹೇಳಿರುವುದು ಪದೇ ಪದೇ ತೊಂದರೆಯನ್ನುಂಟು ಮಾಡಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಇಲ್ಲದಿದ್ದರೆ ಮುಂದೆ ಏನಾದರೂ ಆದರೆ ನಮ್ಮ ಮೇಲೆ ಅಪವಾದ ಬೇಡ ಎಂದು ಸ್ಪಷ್ಟವಾಗಿ ರಮೇಶ್ ಕತ್ತಿ ತಿಳಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಭೇಟಿಯಾಗಲಿದ್ದು, ಅವರೊಂದಿಗೆ ಸಚಿವ ಸ್ಥಾನ ತಪ್ಪಿರುವ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ದರಿದ್ರದ ಮೂಲವೇ ಸಿದ್ದು: ಸಿ.ಟಿ.ರವಿ!