ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ

Kannadaprabha News   | Kannada Prabha
Published : Dec 10, 2025, 07:40 AM IST
loksabha

ಸಾರಾಂಶ

ಚುನಾವಣಾ ಆಯೋಗವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಮತಗಳವು ಮಾಡಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, ‘ಕಾಂಗ್ರೆಸ್‌ ಪಕ್ಷವು ಮೊದಲ ಲೋಕಸಭೆ ಚುನಾವಣೆಯ ಸಮಯದಿಂದಲೇ ಮತಚೋರಿಯಲ್ಲಿ ತೊಡಗಿದೆ ಎಂದು ಆರೋಪಿಸಿದೆ.

 ನವದೆಹಲಿ: ಚುನಾವಣಾ ಆಯೋಗವನ್ನು ಬಳಸಿಕೊಂಡು ಕೇಂದ್ರ ಸರ್ಕಾರ ಮತಗಳವು ಮಾಡಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ, ‘ಕಾಂಗ್ರೆಸ್‌ ಪಕ್ಷವು ಮೊದಲ ಲೋಕಸಭೆ ಚುನಾವಣೆಯ ಸಮಯದಿಂದಲೇ ಮತಚೋರಿಯಲ್ಲಿ ತೊಡಗಿದೆ. ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಿ 74000 ಮತಗಳನ್ನು ಅಮಾನ್ಯ ಮಾಡುವ ಮೂಲಕ ಬಿ.ಆರ್‌. ಅಂಬೇಡ್ಕರ್‌ ಅವರು ಸೋಲುವಂತೆ ಮಾಡಿತು’ ಎಂದು ಆರೋಪಿಸಿದೆ.

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಚರ್ಚೆ ವೇಳೆ ಮಾತನಾಡಿದ ಕೇಂದ್ರ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘ್ವಾಲ್‌, ‘ತಮ್ಮ ಪುನರಾವರ್ತಿತ ಸೋಲಿಗೆ ಇವಿಎಂ, ಎಸ್‌ಐಆರ್‌ ಪ್ರಕ್ರಿಯೆಯನ್ನು ದೂಷಿಸುವ ಬದಲು ಆತ್ಮಾವಲೋಕನ ಮಾಡಿಕೊಳ್ಳಯವ ಅವಶ್ಯಕತೆಯಿದೆ. ಎಸ್‌ಐಆರ್‌ನ ಅಗತ್ಯತೆ ಮತ್ತು ಅದನ್ನು ನಡೆಸುವ ಚುನಾವಣಾ ಆಯೋಗದ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ’ ಎಂದಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ, ‘ಆ ಬಗೆಗಿನ ಕಾನೂನನ್ನು ಮೋದಿ ಸರ್ಕಾರ ರಚಿಸಿಲ್ಲ. ಸಮಿತಿಯನ್ನು 2023ರ ಸುಪ್ರೀಂ ತೀರ್ಪಿನ ಅನುಸಾರ ರಚಿಸಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಅತ್ತ ರಾಹುಲ್‌ರ ಮತಚೋರಿ ಆರೋಪಕ್ಕೆ ಸಂಸದ ನಿಶಿಕಾಂತ್‌ ದುಬೆ ಪ್ರತಿಕ್ರಿಯಿಸಿ, ‘ಸುಪ್ರೀಂ ಕೋರ್ಟ್‌ ತೀರ್ಪಿನ ಹೊರತಾಗಿಯೂ ಇಂದಿರಾ ಗಾಂಧಿ, ತಮಗೆ ಅನುಕೂಲವಾಗುವಂತೆ ಸಿಜೆಐ (ಎ.ಎನ್‌. ರಾಯ್‌)ಅನ್ನು ನೇಮಿಸಿದ್ದರು. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಸಿಇಸಿ ಆಗಿದ್ದವರೆಲ್ಲಾ ನಿವೃತ್ತಿಯ ಬಳಿಜ ರಾಜಕೀಯಕ್ಕೆ ಬಂದರು’ ಎಂದು ಇತಿಹಾಸ ನೆನಪಿಸಿದರು. ಜೊತೆಗೆ ಸೋನಿಯಾ ಪಿಎಸ್‌ಒ ಆಗಿದ್ದ ಅಶ್ವನಿ ಕುಮಾರ್‌ ಅವರನ್ನು ಮತ್ತು ನಿತ್ಯ ಅಹಮದ್‌ ಪಟೇಲ್‌ ಅವರನ್ನು ಭೇಟಿ ಮಾಡುತ್ತಿದ್ದ ರಂಜಿತ್‌ ಸಿನ್ಹಾ ಅವರನ್ನು ಸಿಬಿಐ ಮುಖ್ಯಸ್ಥರಾಗಿ ಮಾಡಿದ್ದು ಯಾರು ಎಂದು ಪ್ರಶ್ನಿಸಿದರು.

‘ಆಯ್ಕೆ ಸಮಿತಿಯಲ್ಲಿರುವ ರಾಹುಲ್‌ ಸಲಹೆಗಳನ್ನು ನೀಡುವ ಬದಲು ಸುಳ್ಳು ಹೇಳುತ್ತಾ ನಾಟಕ ಮಾಡುತ್ತಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಪ್ರಧಾನಿಯೇ ಸಿಇಸಿಯನ್ನು ನೇಮಿಸುತ್ತಿದ್ದರು. ಸಿಜೆಐ ಅಥವಾ ವಿಪಕ್ಷ ನಾಯಕರಿಂದ ಸೂಚಿಸಲಾದ ಒಬ್ಬರು ಚುನಾವಣಾ ಆಯುಕ್ತರಾದ ಉದಾಹರಣೆ ಕೊಡಿ’ ಎಂದು ರಾಹುಲ್‌ರನ್ನು ಎಕ್ಸ್‌ನಲ್ಲಿ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ, 2005ರಲ್ಲಿ ಸೋನಿಯಾ ಗಾಂಧಿ ಅವರು ನವೀನ್‌ ಚಾವ್ಲಾರನ್ನು ಸಿಇಸಿ ಆಗಿ ಯಾವ ಅಧಿಕಾರದಡಿಯಲ್ಲಿ ಆಯ್ಕೆ ಮಾಡಿದ್ದರು ಎಂದು ಪ್ರಶ್ನಿಸಿದೆ.

ಬಿಜೆಪಿ - ಆಯೋಗದಿಂದ ಮತಗಳವು: ರಾಹುಲ್‌ 

ನವದೆಹಲಿ: ‘ಅತಿಘೋರ ರಾಷ್ಟ್ರವಿರೋಧಿ ಕೃತ್ಯವೆಂದರೆ ಅದು ಮತಗಳ್ಳತನ. ಕಾರಣ, ಅದರಿಂದ ದೇಶದ ಪ್ರಜಾಪ್ರಭುತ್ವಕ್ಕೇ ಧಕ್ಕೆಯಾಗುತ್ತದೆ. ಇಂತಹ ಕೆಲಸವನ್ನು ಬಿಜೆಪಿ ತನ್ನ ಕಪಿಮುಷ್ಟಿಯಲ್ಲಿರುವ ಚುನಾವಣಾ ಆಯೋಗವನ್ನು ಬಳಸಿಕೊಂಡು ಮಾಡಿದೆ’ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಚುನಾವಣಾ ಆಯೋಗದ ನಂಟಿನ ಬಗ್ಗೆ ತಮ್ಮ ಬಳಿ ಸಾಕ್ಷ್ಯ ಇದೆ ಎಂದು ಹೇಳಿದ್ದಾರೆ.

ಕೆಳಮನೆಯಲ್ಲಿ ನಡೆದ ಚುನಾವಣಾ ಸುಧಾರಣೆಗಳ ಚರ್ಚೆ ವೇಳೆ ಮಾತನಾಡಿದ ಅವರು, ಚುನಾವಣಾ ಆಯೋಗವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಯಂತ್ರಿಸುತ್ತಿದೆ ಎಂದು ಮತ್ತೆ ಆರೋಪಿಸಿದ್ದಾರೆ. ‘ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳನ್ನೇಕೆ ಕೈಬಿಡಲಾಯಿತು?ಅವರ ಮೇಲೆ ನಂಬಿಕೆಯಿಲ್ಲವೇ? ಜತೆಗೆ, 2023ರ ಡಿಸೆಂಬರ್‌ನಲ್ಲಿ, ಸಿಇಸಿಗೆ ಶಿಕ್ಷೆಯಿಂದ ರಕ್ಷಣೆ ನೀಡಲಾಯಿತು. ಅದರ ಅವಶ್ಯಕತೆಯೇನು?’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಚುನಾವಣೆ ನಡೆದ 45 ದಿನಗಳಲ್ಲಿ ಎಲ್ಲಾ ಸಿಸಿಟೀವಿ ದೃಶ್ಯಾವಳಿಗಳನ್ನು ಅಳಿಸಿಹಾಕಬೇಕೆಂಬ ಆದೇಶದ ಉದ್ದೇಶದ ಬಗ್ಗೆಯೂ ಪ್ರಶ್ನೆಯೆತ್ತಿದ್ದಾರೆ.

ಇದೇ ವೇಳೆ, ವಿಶೇಷ ಮತಪಟ್ಟಿ ಪರಿಷ್ಕರಣೆ ಹೆಸರಲ್ಲಿ ಹರ್ಯಾಣ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದ ರಾಹುಲ್‌, ‘ಎಸ್‌ಐಆರ್‌ನಿಂದ ನಿಜವಾಗಿಯೂ ಮತಪಟ್ಟಿಯಿಂದ ಅಕ್ರಮ ಹೆಸರುಗಳನ್ನು ತೆಗೆದುಹಾಕಲಾಗಿದ್ದರೆ, ಬಿಹಾರದಲ್ಲಿ 1.2 ಲಕ್ಷ ನಕಲಿ ಮತದಾರರು ಎಲ್ಲಿಂದ ಬಂದರು?’ ಎಂದೂ ಕೇಳಿದ್ದಾರೆ.

ಸಲಹೆಗಳು:

‘ಚುನಾವಣಾ ಪ್ರಕ್ರಿಯೆಯಲ್ಲಿ ಹೊಸ ಸುಧಾರಣೆಗಳ ಅಗತ್ಯವೇ ಇಲ್ಲ’ ಎಂದಿರುವ ರಾಹುಲ್‌, ‘ಚುನಾವಣೆಗೆ 1 ತಿಂಗಳ ಮೊದಲು ಎಲ್ಲಾ ರಾಜಕೀಯ ಪಕ್ಷಗಳಿಗೆ ಯಂತ್ರ ಓದಬಹುದಾದ(ಮುದ್ರಿತ ಕಾಗದದ ಬದಲು ಪಿಡಿಎಫ್‌/ಎಕ್ಸೆಲ್‌ ಶೀಟ್‌) ಮತದಾರರ ಪಟ್ಟಿಗಳನ್ನು ನೀಡಿ. ಸಿಸಿಟೀವಿ ದೃಶ್ಯಗಳನ್ನು ಅಳಿಸುವ ನಿಯಮವನ್ನು ಹಿಂಪಡೆಯಿರಿ. ಜತೆಗೆ, ಇವಿಎಂ ಒಳಗೆ ಏನಿದೆ ಎಂದು ನೋಡಲು ನಮ್ಮ ತಜ್ಞರಿಗೂ ಅವಕಾಶ ಮಾಡಿಕೊಡಿ. ಬಯಸಿದ್ದು ಮಾಡುವ ಸಿಇಸಿ ಅಧಿಕಾರವನ್ನು ಮೊಟಕುಗೊಳಿಸಿ ಅವರನ್ನೂ ಶಿಕ್ಷೆಯ ವ್ಯಾಪ್ತಿಗೆ ತನ್ನಿ. ಇವಿಷ್ಟು ಸುಧಾರಣೆಗಳು ಸಾಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ
ಹೊಸದಾಗಿ 545 ಪಿಎಸ್‌ಐ ಶೀಘ್ರ ಸೇವೆಗೆ ನಿಯೋಜನೆ: ಗೃಹ ಸಚಿವ ಪರಮೇಶ್ವರ್‌