ಡಿಸೆಂಬರ್‌ನಲ್ಲಿ ಉಮೇಶ್‌ ಕತ್ತಿಗೆ ದೊಡ್ಡ ಹುದ್ದೆ: ಯಡಿಯೂರಪ್ಪ

By Web DeskFirst Published Oct 16, 2019, 11:14 AM IST
Highlights

ಡಿಸೆಂಬರ್‌ವರೆಗೂ ಕಾದು ನೋಡಿ. ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಘೋಷಿಸಿದ್ದಾರೆ. 

ಬೆಳಗಾವಿ [ಅ.16]:  ನನ್ನ ಹಾಗೂ ಮಾಜಿ ಸಚಿವ ಉಮೇಶ್‌ ಕತ್ತಿ ನಡುವೆ ಯಾವುದೇ ಮುನಿಸಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಡಿಸೆಂಬರ್‌ವರೆಗೂ ಕಾದು ನೋಡಿ. ಕತ್ತಿ ಅವರಿಗೆ ದೊಡ್ಡ ಹುದ್ದೆ ಸಿಗಲಿದೆ ಎಂದು ಘೋಷಿಸಿದ್ದಾರೆ. ತನ್ಮೂಲಕ ಉಮೇಶ್‌ ಕತ್ತಿ ಹಾಗೂ ತಮ್ಮ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ವದಂತಿಗಳಿಗೆ ತೆರೆ ಎಳೆಯುವ ಯತ್ನ ನಡೆಸಿದ್ದಾರೆ. ಬೆಳಗಾವಿಯಲ್ಲಿರುವ ಉಮೇಶ್‌ ಕತ್ತಿ ಒಡೆತನದ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ಕತ್ತಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾಡಿದ ಅವರು, ಪುಗಸಟ್ಟೆಅಲ್ಪೋಪಹಾರ ಸೇವಿಸಲು ಉಮೇಶ ಕತ್ತಿ ಹೋಟೆಲಿಗೆ ಬಂದಿದ್ದೇನೆ ಎಂದು ಚಟಾಕಿ ಹಾರಿಸಿದರು.

ಸಚಿವನಾಗಲು ಹಣೆಬರಹ ಬೇಕು: ಕತ್ತಿ

‘ಸಚಿವನಾಗೋದಕ್ಕೂ ಹಣೆಬರಹ ಬೇಕು. ಹಣೆಬರಹ ಇದ್ರೆ ಸಚಿವನಾಗುತ್ತೇನೆ’ ಎಂದು ಯಡಿಯೂರಪ್ಪ ಭೇಟಿ ಬಳಿಕ ಶಾಸಕ ಉಮೇಶ್‌ ಕತ್ತಿ ತಿಳಿಸಿದರು. ಲಕ್ಷ್ಮಣ ಸವದಿ ನನ್ನ ಮಿತ್ರ, ಅವರು ಮಂತ್ರಿ ಆಗಿದ್ದನ್ನು ಸ್ವಾಗತಿಸುತ್ತೇನೆ. ನಾನು ಜ್ಯೋತಿಷ್ಯ ನಂಬಲ್ಲ, ಹಣೆಬರಹ ಚೆನ್ನಾಗಿದ್ರೆ ಯಾರು ಬೇಕಾದರೂ ಡಿಸಿಎಂ ಆಗಬಹುದು ಎಂದು ಸವದಿ ಹೇಳಿಕೆಗೆ ಟಾಂಗ್‌ ಕೊಟ್ಟರು. ಯಡಿಯೂರಪ್ಪ ಜತೆಗೆ ಯಾವುದೇ ಅಸಮಾಧಾನ ಇಲ್ಲ, ಅವರು ನಮ್ಮ ನಾಯಕ. ನನಗೆ ಯಾವುದೇ ಸಚಿವ ಸ್ಥಾನ ಬೇಕಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ನಿರ್ಧಾರ ಮಾಡಲ್ಲ, ಬೇಕಾದ್ರೆ ಯಾರನ್ನಾದ್ರೂ ಆತ್ಮಹತ್ಯೆ ಮಾಡಿಸುತ್ತೇನೆ ಎಂದರು.

ಇಲ್ಲಿ ಬಂದ್ರೆ ಪುಗಸಟ್ಟೆಅಲ್ಪೋಪಹಾರ ಸಿಗುತ್ತೆ ಎಂಬುದು ಗೊತ್ತು ಹೀಗಾಗಿ ಕತ್ತಿ ಮಾಲೀಕತ್ವದ ಹೋಟೆಲ್‌ಗೆ ಬಂದಿದ್ದೇನೆ. ಮೊನ್ನೆಯ ನನ್ನ ಬೆಳಗಾವಿ ಪ್ರವಾಸದ ಸಂದರ್ಭದಲ್ಲಿ ಉಮೇಶ ಕತ್ತಿ ನನ್ನ ಜತೆಗಿದ್ದರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚುನಾವಣಾ ಪ್ರಚಾರ ಕೈಗೊಳ್ಳುವ ಸಲುವಾಗಿ ಬಿಎಸ್‌ವೈ ಬುಧವಾರ ಬೆಳಗ್ಗೆ ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರವೇ ಕುಂದಾನಗರಿಗೆ ಆಗಮಿಸಿದ್ದಾರೆ.

ಈ ವೇಳೆ ವಿಮಾನನಿಲ್ದಾಣದಲ್ಲಿ ಮಾತನಾಡಿದ ಅವರು, 15 ರಿಂದ 20 ದಿನಗಳ ಬಳಿಕ ಮತ್ತೊಮ್ಮೆ ಪ್ರವಾಹ ಪೀಡಿತ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸುತ್ತೇನೆ. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಲು ಈಗಾಗಲೇ .5 ಲಕ್ಷ ಘೋಷಿಸಲಾಗಿದ್ದು, ಇಷ್ಟೊಂದು ಪರಿಹಾರ ನೀಡುತ್ತಿರುವುದು ಇದೇ ಮೊದಲು. ದೇಶದಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಬೆಳೆ ಹಾನಿ ಪರಿಹಾರ ಕೊಡುವ ತೀರ್ಮಾನವನ್ನು ನಮ್ಮ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ಟಿಕೆಟ್‌ ತಪ್ಪುವ ಬಿಜೆಪಿ ನಾಯಕರು ಕಾಂಗ್ರೆಸ್‌ ಕದ ತಟ್ಟುತ್ತಿದ್ದಾರೆ ಎಂಬ ಸತೀಶ್‌ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದಷ್ಟೇ ಹೇಳಿದರು.

click me!