
ಸುವರ್ಣ ವಿಧಾನಸೌಧ (ಡಿ.10): ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ತೊಗರಿ ಬೇಳೆ ಖರೀದಿಗೆ ನಿಗದಿ ಮಾಡಲಾಗಿರುವ ಅವಧಿ ಬದಲಾಯಿಸಿ, ಶೀಘ್ರ ಖರೀದಿ ಪ್ರಕ್ರಿಯೆ ಆರಂಭಿಸಲು ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?: ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ 16.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೇಳೆ ಬಿತ್ತನೆ ಮಾಡಲಾಗಿದ್ದು, 12.60 ಲಕ್ಷ ಮೆಟ್ರಿಕ್ ಟನ್ ತೊಗರಿ ಬೇಳೆ ಉತ್ಪಾದನೆಯ ನಿರೀಕ್ಷೆಯಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ತೊಗರಿ ಪ್ರಮುಖ ಬೆಳೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹5,830 - ₹6,700 ಇದೆ. ಅದೇ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹8,000 ನಿಗದಿ ಮಾಡಲಾಗಿದೆ.
ಅಲ್ಲದೆ, ಡಿಸೆಂಬರ್ ಮತ್ತು ಜನವರಿ ಅವಧಿಯಲ್ಲಿ ತೊಗರಿ ಬೇಳೆ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ತೊಗರಿಬೇಳೆ ಖರೀದಿ ಕೇಂದ್ರ ಆರಂಭಿಸಲು ಸೂಚಿಸಿದೆ. ಈ ಕಾರಣದಿಂದಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಮಾರುಕಟ್ಟೆ ಪ್ರವೇಶಿಸುವ ತೊಗರಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಲಾಗುತ್ತದೆ. ಇದರಿಂದ ಉತ್ಪಾದಕರಿಗೆ ಭಾರೀ ಆರ್ಥಿಕ ನಷ್ಟವುಂಟಾಗಿ, ಕನಿಷ್ಠ ಬೆಂಬಲ ಬೆಲೆಯ ಲಾಭ ದೊರೆಯದಂತಾಗಲಿದೆ ಮತ್ತು ಯೋಜನೆ ಮೇಲೆ ವಿಶ್ವಾಸ ಹೋಗುತ್ತದೆ.
ಈ ಕಾರಣಗಳಿಂದಾಗಿ ರೈತರ ಅನುಕೂಲಕ್ಕಾಗಿ ತೊಗರಿ ಬೇಳೆ ಖರೀದಿ ನೋಡಲ್ ಏಜೆನ್ಸಿಗಳಾದ ನ್ಯಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸಿ, ಖರೀದಿ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಬೇಕು. ಇದು ರೈತರ ಬಗೆಗಿನ ಕಾಳಜಿ ಕುರಿತ ಪ್ರಶ್ನೆಯಾಗಿದೆ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.
- ರಾಜ್ಯದಲ್ಲಿ 16.80 ಲಕ್ಷ ಹೆ.ನಲ್ಲಿ ತೊಗರಿ ಬಿತ್ತನೆ, 12.60 ಲಕ್ಷ ಮೆಟ್ರಿಕ್ ಟನ್ ಬೆಳೆ ನಿರೀಕ್ಷೆ
- ಉತ್ತರ ಕರ್ನಾಟಕ, ಕೋಲಾರ ಚಿಕ್ಕಬಳ್ಳಾಪುರ, ಚಿತ್ರದುರ್ಗದಲ್ಲಿ ತೊಗರಿ ಪ್ರಮುಖ ಬೆಳೆ
- ಎಂಎಸ್‌ಪಿ ಅಡಿಯಲ್ಲಿ ತೊಗರಿಗೆ ಪ್ರತಿ ಕ್ವಿಂಟಲ್‌ಗೆ ₹8000, ಸದ್ಯದ ಬೆಲೆ ₹5830-₹6700
- ಡಿಸೆಂಬರ್, ಜನವರಿಗೆ ರಾಜ್ಯದ ಬೆಳೆ ಮಾರುಕಟ್ಟೆಗೆ, ಖರೀದಿ ಕೇಂದ್ರ ಮಾರ್ಚ್‌ಗೆ ಆರಂಭ
- ಇದರಿಂದ ರಾಜ್ಯದ ತೊಗರಿ ಬೆಳೆಗಾರರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಆತಂಕ
- ರೈತರ ನಷ್ಟವನ್ನು ತಡೆಯಲು ಶೀಘ್ರವೇ ತೊಗರಿ ಖರೀದಿ ಪ್ರಕ್ರಿಯೆ ಆರಂಭಕ್ಕೆ ಪತ್ರಮನವಿ
- ನ್ಯಾಫೆಡ್, ಎನ್‌ಸಿಸಿಎಫ್ ಸಂಸ್ಥೆಗಳು ಶೀಘ್ರ ಖರೀದಿ ಕೇಂದ್ರ ಆರಂಭಿಸಲು ಸಿಎಂ ಆಗ್ರಹ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.