ಜೆಡಿಎಸ್‌ನ ತವರು, ಭದ್ರಕೋಟೆ ಎಂಬ ಖ್ಯಾತಿಗೆ ಒಳಗಾಗಿರುವುದು ಹಾಸನ ಜಿಲ್ಲೆ. ಪ್ರಸ್ತುತ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್ ಪ್ರತಿನಿಧಿಗಳೇ ಇದ್ದಾರೆ. ಹಾಸನ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದಾರೆ.
ಎಚ್.ಟಿ.ಮೋಹನ್‌ಕುಮಾರ್
ಹಾಸನ (ಡಿ.11): ಜೆಡಿಎಸ್‌ನ ತವರು, ಭದ್ರಕೋಟೆ ಎಂಬ ಖ್ಯಾತಿಗೆ ಒಳಗಾಗಿರುವುದು ಹಾಸನ ಜಿಲ್ಲೆ. ಪ್ರಸ್ತುತ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್ ಪ್ರತಿನಿಧಿಗಳೇ ಇದ್ದಾರೆ. ಹಾಸನ ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದಾರೆ. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. ಹಾಸನ ಜಿಲ್ಲೆಯ ಜೆಡಿಎಸ್ ಮಟ್ಟಿಗೆ ಎಚ್.ಡಿ.ರೇವಣ್ಣ ಅವರೇ ಸುಪ್ರೀಂ. ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ್ದೇ ನಿರ್ಣಾಯಕ ಮತ. ಜಿಲ್ಲೆಯ ಬಹುಸಂಖ್ಯಾತರು ಕೂಡ ಇದೇ ಸಮುದಾಯದವರು. ಲಿಂಗಾಯತರು, ಕುರುಬರು, ಎಸ್ಸಿ, ಎಸ್ಟಿಜನಾಂಗದವರು ನಂತರದ ಸ್ಥಾನದಲ್ಲಿದ್ದಾರೆ. ಹೀಗಾಗಿ, ಈಗಿರುವ ಏಳು ಶಾಸಕರಲ್ಲಿ ಐದು ಶಾಸಕರು ಒಕ್ಕಲಿಗ ಸಮುದಾಯದವರು. ಆಲೂರು-ಸಕಲೇಶಪುರ ಕ್ಷೇತ್ರ ಮೀಸಲಾಗಿರುವುದರಿಂದ ಅಲ್ಲಿರುವ ಎಚ್.ಕೆ.ಕುಮಾರಸ್ವಾಮಿ ಪರಿಶಿಷ್ಟಜಾತಿಗೆ ಸೇರಿದವರಾಗಿದ್ದಾರೆ. ಬೇಲೂರಿನ ಲಿಂಗೇಶ್ ವೀರಶೈವರು.
1. ಹಾಸನ: ಸ್ಪರ್ಧೆಗೆ ಭವಾನಿ ರೇವಣ್ಣ ಉತ್ಸುಕ
ಜಿಲ್ಲಾ ಕೇಂದ್ರವಾಗಿರುವ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚಿನ ಮತದಾರರು ನಗರವಾಸಿಗಳು. ಇಡೀ ಜಿಲ್ಲೆಯಲ್ಲಿ ಇದೊಂದು ಕ್ಷೇತ್ರದಲ್ಲಿ ಮಾತ್ರ ಒಕ್ಕಲಿಗ ಸಮುದಾಯದಲ್ಲಿ ಎಂ (ಮುಳ್ಳು) ಮತ್ತು ಡಿ (ದಾಸ) ಒಕ್ಕಲಿಗ ಎನ್ನುವ ಪಂಗಡಗಳ ನಡುವೆ ಚುನಾವಣೆ ಸಂದರ್ಭದಲ್ಲಿ ಒಡಕುಂಟಾಗುತ್ತದೆ. ಹಾಸನ ನಗರದ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ದಾಸ ಒಕ್ಕಲಿಗರಿದ್ದರೆ, ಉಳಿದಂತೆ ಮುಳ್ಳು ಒಕ್ಕಲಿಗರೇ ಹೆಚ್ಚಿದ್ದಾರೆ. ಪ್ರತಿ ಚುನಾವಣೆಯಲ್ಲೂ ಈ ಒಡಕನ್ನೇ ಅಭ್ಯರ್ಥಿಗಳು ತಮ್ಮ ದಾಳವನ್ನಾಗಿ ಬಳಸಿಕೊಳ್ಳುತ್ತಾರೆ.
undefined
Ticket Fight: ಕೊಡಗಿನ ಎರಡು ಕ್ಷೇತ್ರಗಳಿಗೆ ಆಕಾಂಕ್ಷಿಗಳ ದಂಡು
ಕಳೆದ ಎರಡೂವರೆ ದಶಕದಿಂದಲೂ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಾಬಲ್ಯವಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಜಯಗಳಿಸಿದ್ದಾರೆ. ಇದಕ್ಕೂ ಹಿಂದೆ 25 ವರ್ಷಗಳ ಕಾಲ ಜೆಡಿಎಸ್‌ನ ಎಚ್.ಎಸ್.ಪ್ರಕಾಶ್ ಸತತವಾಗಿ ಗೆದ್ದು ಶಾಸಕರಾಗಿದ್ದರು. ಈ ಬಾರಿ, ಮಾಜಿ ಶಾಸಕ ದಿವಂಗತ ಪ್ರಕಾಶ್ ಅವರ ಪುತ್ರ ಸ್ವರೂಪ್ ಜೆಡಿಎಸ್ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಇನ್ನು ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಕೂಡ ಇಲ್ಲಿ ಸ್ಪರ್ಧಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಸ್ವರೂಪ್ ಅವರು ಎಚ್.ಡಿ.ಕುಮಾರಸ್ವಾಮಿ ಕಡೆಯಿಂದ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದರೆ, ಭವಾನಿ ಅವರನ್ನೇ ಈ ಕ್ಷೇತ್ರದಿಂದ ನಿಲ್ಲಿಸಬೇಕು ಎನ್ನುವ ಹಟ ರೇವಣ್ಣ ಕುಟುಂಬದ್ದಾಗಿದೆ. ಬಿಜೆಪಿಯಿಂದ ಪ್ರೀತಂ ಗೌಡ ಮಾತ್ರವೇ ಏಕೈಕ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಬಾಗೂರು ಮಂಜೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
2. ಬೇಲೂರು: ಗಂಡಸಿ ಶಿವರಾಂ ಒಳ ರಾಜಕೀಯ ಫಲಿಸುತ್ತಾ?
ಬೇಲೂರಲ್ಲಿ ಲಿಂಗಾಯತರದ್ದೇ ಪ್ರಾಬಲ್ಯ. ಹಾಲಿ ಶಾಸಕ ಜೆಡಿಎಸ್‌ನ ಲಿಂಗೇಶ್, ವೀರಶೈವ ಸಮುದಾಯಕ್ಕೆ ಸೇರಿದವರು. ಈ ಬಾರಿಯೂ ಜೆಡಿಎಸ್‌ನಿಂದ ಅವರೇ ಸ್ಪರ್ಧಿಯಾಗಲಿದ್ದಾರೆ. ಇನ್ನು, ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿಡಿತವಿತ್ತು. ಲಿಂಗಾಯತರ ಪ್ರಾಬಲ್ಯದ ನಡುವೆಯೂ ಒಕ್ಕಲಿಗ ಸಮುದಾಯದ ವೈ.ಎನ್.ರುದ್ರೇಶಗೌಡ ಕಾಂಗ್ರೆಸ್‌ನಿಂದ ಗೆಲ್ಲುತ್ತಿದ್ದರು. ಈ ಬಾರಿ, ಕಾಂಗ್ರೆಸ್‌ನಿಂದ ರುದ್ರೇಶಗೌಡರ ಸಹೋದರ ಕೃಷ್ಣೇಗೌಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈವರೆಗೆ ಜೆಡಿಎಸ್‌ನಲ್ಲಿ ಗುರ್ತಿಸಿಕೊಂಡಿದ್ದ ಗ್ರಾನೈಟ್ ರಾಜ್‌ಶೇಖರ್, ಮೂಲತಃ ಅರಸೀಕೆರೆ ತಾಲೂಕಿನವರಾದ ಬಿ.ಶಿವರಾಂ (ಗಂಡಸಿ ಶಿವರಾಂ) ಕೂಡ ಈ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲು ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಇಲ್ಲಿ ವಲಸಿಗರಿಗೆ ಅವಕಾಶ ಕೊಡಬಾರದು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟುಕೊಂಡು ಕೃಷ್ಣೇಗೌಡ ಹಾಗೂ ಗ್ರಾನೈಟ್ ರಾಜ್‌ಶೇಖರ್ ಒಗ್ಗಟ್ಟಾಗಿದ್ದಾರೆ. ಬಿ.ಶಿವರಾಂ ಒಳ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಮಾತುಗಳಿವೆ.
3. ಅರಸೀಕೆರೆ: ಬಿಜೆಪಿ ಟಿಕೆಟ್‌ಗೆ ಎನ್.ಆರ್.ಸಂತೋಷ್ ಲಾಬಿ
ಲಿಂಗಾಯತರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ನಾಯಕರು, ಲಂಬಾಣಿಗಳು, ಒಕ್ಕಲಿಗರು, ಎಸ್ಸಿ, ಎಸ್ಟಿಜನಾಂಗದವರು, ಮುಸ್ಲಿಮರು ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಕೆ.ಎಂ.ಶಿವಲಿಂಗೇಗೌಡ ಕಳೆದ ನಾಲ್ಕು ಅವಧಿಯಿಂದ ಇಲ್ಲಿ ಶಾಸಕರಾಗಿದ್ದಾರೆ. ಜೆಡಿಎಸ್‌ನಿಂದಲೇ ಬಂದಿರುವ ಇವರು ಇದೀಗ ಜೆಡಿಎಸ್ ತೊರೆದು, ಬಿಜೆಪಿ ಇಲ್ಲವೇ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಊಹಾಪೋಹಗಳಿವೆ. ಆದರೆ, ಜೆಡಿಎಸ್ ವರಿಷ್ಠರಾದ ದೇವೇಗೌಡ ಇರುವವರೆಗೂ ನಾನು ಜೆಡಿಎಸ್ ಬಿಡುವುದಿಲ್ಲ ಎಂದು ಸ್ವತಃ ಶಿವಲಿಂಗೇಗೌಡರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ಬಾರಿಯೂ ಜೆಡಿಎಸ್‌ನಿಂದ ಶಿವಲಿಂಗೇಗೌಡರೇ ಪ್ರಬಲ ಟಿಕೆಟ್ ಆಕಾಂಕ್ಷಿ. ಬಿಜೆಪಿಯಿಂದ ಯಡಿಯೂರಪ್ಪ ಅವರ ಆಪ್ತ ಹಾಗೂ ಸಂಬಂಧಿ ಎನ್.ಆರ್.ಸಂತೋಷ್ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನು, ಕಾಂಗ್ರೆಸ್‌ನಿಂದ ಪಟೇಲ್ ಶಿವಪ್ಪ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
4. ಚನ್ನರಾಯಪಟ್ಟಣ: ಬಿಜೆಪಿ ಟಿಕೆಟ್‌ಗೆ ಡಿಮ್ಯಾಂಡ್ ಕಾಣಿಸುತ್ತಿಲ್ಲ
ತೆಂಗಿನ ಸೀಮೆಯ ಚನ್ನರಾಯಪಟ್ಟಣದಲ್ಲಿ ಒಕ್ಕಲಿಗ ಸಮುದಾಯದ ಸಿ.ಎನ್.ಬಾಲಕೃಷ್ಣ ಶಾಸಕ. ಈ ಬಾರಿಯೂ ಅವರಿಗೇ ಜೆಡಿಎಸ್ ಟಿಕೆಟ್. ಹಿಂದೆ ಶ್ರೀಕಂಠಯ್ಯ ಇರುವವರೆಗೆ ತಾಲೂಕಿನಲ್ಲಿ ಕಾಂಗ್ರೆಸ್‌ನ ಪ್ರಾಬಲ್ಯವಿತ್ತು. ಒಂದು ಕಾಲಕ್ಕೆ ಕಾಂಗ್ರೆಸ್‌ನ ನೆಲೆಯಾಗಿದ್ದ ಈ ತಾಲೂಕಿನಲ್ಲಿ ಈಗಲೂ ಸಾಕಷ್ಟುಕಾಂಗ್ರೆಸ್ ನಾಯಕರಿದ್ದಾರೆ. ಜತ್ತೇನಹಳ್ಳಿ ರಾಮಚಂದ್ರು, ಎಂ.ಎ.ಗೋಪಾಲಸ್ವಾಮಿ, ಶಂಕರ್ ಅವರು ಕಾಂಗ್ರೆಸ್ ಟಿಕೆಟ್‌ಗೆ ಶತಾಯಗತಾಯ ಪ್ರಯತ್ನ ನಡೆಸಿದ್ದಾರೆ. ಇನ್ನು, ಈ ಕ್ಷೇತ್ರದಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ವರ್ಚಸ್ಸನ್ನೇನೂ ಬೆಳೆಸಿಕೊಂಡಿಲ್ಲ. ಹೀಗಾಗಿ, ಸ್ವಂತ ವರ್ಚಸ್ಸಿನ ಮೇಲೆ ಟಿಕೆಟ್‌ಗೆ ಲಾಬಿ ನಡೆಸುವಂತಹ ನಾಯಕರು ಯಾರೂ ಕಾಣಿಸುತ್ತಿಲ್ಲ.
5. ಹೊಳೆನರಸೀಪುರ: ರೇವಣ್ಣ ಎದುರು ನಿಲ್ಲುವವರಾರು?
ಹೊಳೆನರಸೀಪುರ ಎಂದರೆ ರೇವಣ್ಣ, ರೇವಣ್ಣ ಎಂದರೆ ಹೊಳೆನರಸೀಪುರ ಎನ್ನುವಷ್ಟರ ಮಟ್ಟಿಗೆ ಎಚ್.ಡಿ.ರೇವಣ್ಣ ಈ ಕ್ಷೇತ್ರವನ್ನು ಆವರಿಸಿಕೊಂಡಿದ್ದಾರೆ. ಒಕ್ಕಲಿಗರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಶಾಸಕರಿಂದ ಹಿಡಿದು ಗ್ರಾಮ ಪಂಚಾಯ್ತಿವರೆಗೆ ಎಲ್ಲಾ ಕಡೆ ಜೆಡಿಎಸ್ ನಾಯಕರೇ ಇದ್ದಾರೆ. ಈ ಬಾರಿಯೂ ಜೆಡಿಎಸ್ ಟಿಕೆಟ್ ಅವರಿಗೇ. ಹಿಂದೆ ಜಿ.ಪುಟ್ಟಸ್ವಾಮಿಗೌಡ ಇರುವವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ನೆಲೆ ಉಳಿಸಿಕೊಂಡಿತ್ತು. ಅವರ ನಂತರದಲ್ಲಿ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿದೆ. ಕಳೆದ ಬಾರಿಯ ಚುನಾವಣೆ ಹೊರತುಪಡಿಸಿ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಯಿಂದ ನಾಮ್‌ಕೆವಾಸ್ತೆ ಅಭ್ಯರ್ಥಿಗಳು ನಿಂತಿದ್ದಾರೆ. ಹಾಗೆಯೇ ಸೋತಿದ್ದಾರೆ. ಆದರೆ, ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಾಗೂರು ಮಂಜೇಗೌಡ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡುವ ಮೂಲಕ 73 ಸಾವಿರ ಮತಗಳನ್ನು ಪಡೆದರಾದರೂ ರೇವಣ್ಣ ಎದುರು ಸೋಲಬೇಕಾಯಿತು. ಅದಾದ ನಂತರ ಬಾಗೂರು ಮಂಜೇಗೌಡ ಹೊಳನರಸೀಪುರದತ್ತ ತಿರುಗಿಯೂ ನೊಡಿಲ್ಲ. ಇನ್ನು, ಬಿಜೆಪಿ ಬಗ್ಗೆ ಗಟ್ಟಿಯಾಗಿ ಮಾತನಾಡುವ ಒಬ್ಬ ನಾಯಕನೂ ಇಲ್ಲಿ ಸಿಗುವುದಿಲ್ಲ. ಹೀಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್‌ಗಳಿಗೆ ಅಷ್ಟಾಗಿ ಆಕಾಂಕ್ಷಿಗಳು ಕಂಡುಬರುತ್ತಿಲ್ಲ.
6. ಅರಕಲಗೂಡು: ಎ.ಮಂಜು ಸ್ಪರ್ಧೆ ಯಾವ ಪಕ್ಷದಿಂದ?
ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಅರಕಲಗೂಡು ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ಕೂಡ ನಿರ್ಣಾಯಕ ಪಾತ್ರ ವಹಿಸುತ್ತವೆ. ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಈ ಬಾರಿಯೂ ಜೆಡಿಎಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸೋತಿರುವ ಕಾಂಗ್ರೆಸ್‌ನ ಎ.ಮಂಜು, ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್‌ಗೆ ಯತ್ನ ನಡೆಸಿದ್ದಾರೆ. ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎ.ಮಂಜು ಬಿಜೆಪಿಗೆ ಹೋಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು ಮತ್ತೆ ಕಾಂಗ್ರೆಸ್‌ಗೆ ಬಂದಿದ್ದಾರೆ. ಹೀಗಾಗಿ, ಎ.ಮಂಜು ಈಗ ಕಾಂಗ್ರೆಸ್ಸಿಗರೋ ಬಿಜೆಪಿಯವರೋ ಎನ್ನುವ ಗೊಂದಲ ಕಾರ್ಯಕರ್ತರಲ್ಲಿದೆ. ಪ್ರಸ್ತುತ ಬಿಜೆಪಿ ಟಿಕೆಟ್‌ಗೆ ಯೋಗಾರಮೇಶ್ ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್‌ಗೆ ಕ್ರಶರ್ ಕೃಷ್ಣೇಗೌಡ ಅವರಿಂದ ಯತ್ನ ನಡೆದಿದೆ. ಆದರೆ, ಇವರಿಬ್ಬರಿಗೂ ಎ.ಮಂಜು ಯಾವ ಪಕ್ಷದಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಾರೆ ಎನ್ನುವ ಗೊಂದಲ ಇದೆ.
Ticket Fight: ಬೀದರ್ ಶಾಸಕರಿಗೆ ಹೊಸ ಸ್ಪರ್ಧಿಗಳ ಸವಾಲ್
7. ಆಲೂರು-ಸಕಲೇಶಪುರ: ಬಿಜೆಪಿ ಟಿಕೆಟ್‌ಗೆ ಪೈಪೋಟಿ
ಕಳೆದ ನಾಲ್ಕು ಅವಧಿಗಳಿಂದ ಇದು ಮೀಸಲು ಕ್ಷೇತ್ರ. ಜೆಡಿಎಸ್‌ನ ಎಚ್.ಕೆ.ಕುಮಾರಸ್ವಾಮಿ ಈ ಕ್ಷೇತ್ರದ ಹಾಲಿ ಶಾಸಕರು. ಮತ್ತೊಮ್ಮೆ ಜೆಡಿಎಸ್ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಈ ಹಿಂದೆ ಇದು ಸಾಮಾನ್ಯ ಕ್ಷೇತ್ರವಾಗಿದ್ದಾಗ ಎಚ್.ಎಂ.ವಿಶ್ವನಾಥ್ ಜೆಡಿಎಸ್ ಶಾಸಕರಾಗಿದ್ದರು. ಆದರೆ, ಅವರೀಗ ಬಿಜೆಪಿಯಲ್ಲಿದ್ದು, ಬಿಜೆಪಿಯಿಂದಲೇ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ, ನಾರ್ವೆ ಸೋಮಶೇಖರ್, ಸಿಮೆಂಟ್ ಮಂಜು ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು. ನಾರ್ವೆ ಸೋಮಶೇಖರ್ ಅವರು ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿ, ಮೂರೂ ಮುಕ್ಕಾಲು ಸಾವಿರ ಮತಗಳಿಂದ ಸೋತಿದ್ದರು. ಇನ್ನು, ಸಿಮೆಂಟ್ ಮಂಜುಗೆ ಹಾಸನದ ಶಾಸಕ ಪ್ರೀತಂ ಗೌಡರ ಅಭಯವಿದೆ. ಇನ್ನು, ಕಾಂಗ್ರೆಸ್‌ನಿಂದ ಮುರಳಿ ಮೋಹನ್, ಡಿ.ಸಿ.ಸಣ್ಣಸ್ವಾಮಿ, ಸಿದ್ದಯ್ಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಇಲ್ಲಿಯೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗಿದೆ.
ಕ್ಷೇತ್ರಗಳ ಬಲಾಬಲ
ಒಟ್ಟು ಕ್ಷೇತ್ರಗಳು: 7
ಜೆಡಿಎಸ್: 6
ಬಿಜೆಪಿ: 1