
ಬೆಂಗಳೂರು (ಜು.27): ಹಿಂದಿನ ಸರ್ಕಾರ ರಾಜ್ಯದ ಆರ್ಥಿಕತೆಯನ್ನು ದಿವಾಳಿ ಮಾಡಿದೆ. ಹೀಗಾಗಿ ಸಚಿವರಿಗೂ ಈ ಬಾರಿ ಸಾಕಷ್ಟು ಅನುದಾನ ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಳೆದ ಸರ್ಕಾರಗಳ ತಪ್ಪನ್ನು ಸರಿಪಡಿಸುವುದರ ಜತೆಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾದ ಹೊಣೆಗಾರಿಕೆ ಕಾಂಗ್ರೆಸ್ ಸರ್ಕಾರದ ಮೇಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತಿನಿಂದಾಗಿ ಈ ವರ್ಷ ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ.
ನೀರಾವರಿ ಸಚಿವನಾಗಿ ನನ್ನ ಇಲಾಖೆಗೂ ಅನುದಾನ ಇಲ್ಲದಂತಾಗಿದೆ. ಅದರ ಜತೆಗೆ ಎಲ್ಲ ಸಚಿವರಿಗೂ ಸಮರ್ಪಕ ಅನುದಾನ ದೊರೆಯುತ್ತಿಲ್ಲ. ಈ ಎಲ್ಲದರ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮಾತನಾಡುತ್ತೇವೆ. ಸಚಿವರ ವಿರುದ್ಧ ಶಾಸಕರ ಅಸಮಾಧಾನ ಎಂಬುದು ಸುಳ್ಳು ಎಂದರು. ಬಿಜೆಪಿ ಅವಧಿಯಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವುದು ಗಮನಕ್ಕೆ ಬಂದಿದೆ. ಹುಬ್ಬಳ್ಳಿ ಸೇರಿದಂತೆ ಅನೇಕ ಕಡೆಗಳಲ್ಲಿ ಆ ರೀತಿ ಪ್ರಕರಣ ದಾಖಲಿಸಲಾಗಿದೆ. ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಕ್ಕೆ ನಮ್ಮ ಮೇಲೇ ಹಲವು ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿಕೆಶಿ ರೌಂಡ್ಸ್: ಪರಿಶೀಲನೆ
ಕೆಂಪೇಗೌಡ ಲೇಔಟ್ ಕೆಲಸ ನಾನೇ ಪರಿಶೀಲಿಸುವೆ: ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೂಲಸೌಕರ್ಯ ಕಾಮಗಾರಿ ವಿಳಂಬ ಕುರಿತು ಮುಂದಿನ ವಾರ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭರವಸೆ ನೀಡಿದರು. ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ನಿಯೋಗ ಸಚಿವರನ್ನು ಭೇಟಿ ಮಾಡಿ ಬಡಾವಣೆಯಲ್ಲಿರುವ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಟ್ಟಿತು. ಈ ವೇಳೆ ಎನ್.ಶ್ರೀಧರ್ ಅಧ್ಯಕ್ಷತೆಯ ಎನ್‌ಪಿಕೆಎಲ್ ಮುಕ್ತ ವೇದಿಕೆ ನಿಯೋಗಕ್ಕೆ ಶಿವಕುಮಾರ್ ಅವರು ಈ ಭರವಸೆ ನೀಡಿದರು.
ಬಿಡಿಎ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 13 ವರ್ಷ ಕಳೆದರೂ 1400 ಎಕರೆ ಭೂಸ್ವಾದೀನ ಇನ್ನೂ ಬಾಕಿ ಇಟ್ಟುಕೊಂಡಿದೆ. ಏಳು ವರ್ಷಗಳಿಂದ 26 ಸಾವಿರ ನಿವೇಶನಗಳನ್ನು ಹಂಚಿದ್ದರೂ ಮೂಲಸೌಕರ್ಯಗಳಾದ ಒಳಚರಂಡಿ, ನೀರು, ವಿದ್ಯುತ್ ರಸ್ತೆ ಕೊರತೆಯಿಂದಾಗಿ ಮನೆ ನಿರ್ಮಾಣಕ್ಕೆ ಅಡಚಣೆಯಾಗಿದೆ. ರೇರಾ ಪ್ರಾಧಿಕಾರ, ಕರ್ನಾಟಕ ವಿಧಾನಸಭೆಯ ಅರ್ಜಿಗಳ ಸಮಿತಿ, ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಯಲ್ಲಿ ದೂರುಗಳು ದಾಖಲಾಗಿ ವಿಚಾರಣೆ ನಡೆಯುತ್ತಿವೆ. ಆದರೂ ಈವರೆಗೂ ನಿವೇಶನಗಳ ಮಾಲಿಕರಿಗೆ ಮನೆ ಕಟ್ಟಿಕೊಳ್ಳಲು ಅಗತ್ಯವಾದ ಸೌಕರ್ಯಗಳನ್ನು ಒದಗಿಸುವಲ್ಲಿ ಬಿಡಿಎ ವಿಫಲವಾಗಿದೆ ಎಂದು ವೇದಿಕೆ ಪದಾಧಿಕಾರಿಗಳು ಆರೋಪಿಸಿದರು.
ಶೀಘ್ರ ಹೊಸ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್: ಸಚಿವ ದಿನೇಶ್ ಗುಂಡೂರಾವ್
ಕಾಮಗಾರಿ ಶೀಘ್ರ ಪೂರ್ಣಕ್ಕೆ ಆಗ್ರಹ: 2015ರಲ್ಲಿ ಅನುಮೋದನೆ ಪಡೆದಂತೆ 607.17 ಎಕರೆ ಉದ್ಯಾನವನಗಳು, ತೆರೆದ ಜಾಗ ಮತ್ತು 387.52 ಎಕರೆ ಸಿಎ ಜಾಗಗಳನ್ನು ನಿರ್ಮಿಸಲು ನಿರ್ದೇಶಿಸಬೇಕು. ಮೆಜರ್ ಆರ್ಟಿರಿಯಲ್ ರಸ್ತೆಯನ್ನು ಈ ಮೊದಲು ತಯಾರಿಸಿದ ಮತ್ತು ಅನುಮೋದಿಸಿದ ಡಿಪಿಆರ್‌ನಂತೆ ಕಾರ್ಯಗತಗೊಳಿಸಲು ಸೂಚನೆ ನೀಡಬೇಕು. ಗುತ್ತಿಗೆದಾರರ ಸಮಸ್ಯೆಗಳನ್ನು ಬಗೆಹರಿಸಿ ಬಾಕಿ ಇರುವ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ನಿರ್ದೇಶಿಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.