
ಬೆಂಗಳೂರು (ಏ.20): ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯಲ್ಲಿನ ಕಾಮಗಾರಿಗಳಿಗೆ ಸಂಬಂಧಿಸಿ ಗುತ್ತಿಗೆದಾರರಿಗೆ ಪಾರದರ್ಶಕವಾಗಿ ಬಿಲ್ ಪಾವತಿಸಲಾಗಿದ್ದು, ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ತಾರತಮ್ಯ ಹಾಗೂ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂಬುದು ಸುಳ್ಳು. ಗುತ್ತಿಗೆದಾರರ ಸಂಘದಿಂದ ಮಾಡಲಾಗಿರುವ ಆರೋಪ ಆಧಾರರಹಿತ. ಗುತ್ತಿಗೆದಾರರೊಂದಿಗೆ ಈಗಾಗಲೇ ಸಭೆ ನಡೆಸಿ ಅವರಲ್ಲಿದ್ದ ಗೊಂದಲಗಳನ್ನು ನಿವಾರಿಸಲಾಗಿದೆ.
ಕಳೆದೆರಡು ವರ್ಷಗಳಲ್ಲಿ 1,566 ಗುತ್ತಿಗೆದಾರರ ಬಿಲ್ ಪಾವತಿಸಲಾಗಿದೆ. ಈ ಬಿಲ್ ಪಾವತಿಯಲ್ಲಿ ಯಾವುದೇ ವಿಶೇಷ ಶಿಫಾರಸು ಪತ್ರ (ಎಲ್‌ಒಸಿ) ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ಸರ್ಕಾರ ಹಣಕಾಸು ಲಭ್ಯತೆ ಇಲ್ಲದೆ ಆರಂಭಿಸಿದ 12,693 ಕೋಟಿ ರು. ಮೌಲ್ಯದ 15,549 ಕಾಮಗಾರಿಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ಹಳೇ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಹಿಂದಿನ ಸರ್ಕಾರ ಅನುದಾನ ಮೀಸಲಿಡದ ಕಾರಣಕ್ಕಾಗಿ ಸಮಸ್ಯೆಯಾಗಿತ್ತು. ಆದರೂ, ಗುತ್ತಿಗೆದಾರರಿಗೆ ಹಣ ಪಾವತಿಸಲು ಮುಖ್ಯಮಂತ್ರಿ ಅವರು ಹೆಚ್ಚಿನ ಅನುದಾನ ಮಂಜೂರು ಮಾಡಿದ್ದಾರೆ.
ಹಿಂದಿನ ಸರ್ಕಾರದ ಬಾಕಿ ಇದ್ದ ಬಿಲ್‌ಗಳ ಪೈಕಿ 639 ಗುತ್ತಿಗೆದಾರರಿಗೆ ಪೂರ್ಣಪ್ರಮಾಣದಲ್ಲಿ ಹಾಗೂ 1,361 ಗುತ್ತಿಗೆದಾರರಿಗೆ ಭಾಗಶಃ ಹಣ ಪಾವತಿಸಲಾಗಿದೆ ಎಂದರು. ನಮ್ಮ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿಸುವಲ್ಲಿ ಯಾವುದೇ ಹಸ್ತಕ್ಷೇಪವಾಗಿಲ್ಲ. ಕಾಮಗಾರಿಗಳು ಸಕಾಲದಲ್ಲಿ ಮುಗಿಯಬೇಕು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎನ್ನುವುದು ನಮ್ಮ ಉದ್ದೇಶ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದೇವೆ. ಯಾವುದೇ ಗುತ್ತಿಗೆದಾರ ಹಣ ಬಿಡುಗಡೆಯಾಗಿಲ್ಲ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಘವನ್ ಇದ್ದರು.
ಬಯಲುಸೀಮೆ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಸರ್ಕಾರ ಬದ್ದ: ಸಚಿವ ಬೋಸರಾಜು
ಗುತ್ತಿಗೆದಾರ ಆರೋಪ ಸುಳ್ಳು: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಕುಟುಂಬಸ್ಥರು ಸರ್ಕಾರದ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರ ಅಧ್ಯಕ್ಷ ಮಂಜುನಾಥ ಮಾಡಿರುವ ಆರೋಪವೇ ನೂರಕ್ಕೆ ನೂರು ಸುಳ್ಳಾಗಿದೆ ಎಂದು ಸಚಿವ ಬೋಸರಾಜು ಪುತ್ರ, ಕಾಂಗ್ರೆಸ್ ಮುಖಂಡ ರವಿ ಬೋಸರಾಜು ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕಿದರು. ನಗರದಲ್ಲಿ ಮಾತನಾಡಿ, ಹಸ್ತಕ್ಷೇಪ ಅಂದರೆ ಏನು? ಎಂಬುವುದನ್ನು ಮಂಜುನಾಥ ಹೇಳಬೇಕು. ಸಚಿವರ ಮನೆಯಲ್ಲಿ ನಾನು ಇರುತ್ತೇನೆ ನಿತ್ಯ ನೂರಾರು ಜನರು ಬಂದು ಹೋಗುತ್ತಾರೆ. ಸಚಿವರು ಇಲ್ಲದ ಸಮಯದಲ್ಲಿ ಜನರು ತಮ್ಮ ಅಹವಾಲುಗಳನ್ನು ನಮಗೆ ನೀಡುತ್ತಾರೆ. ಹೀಗೆ ಹತ್ತು ಹಲವು ರೀತಿಯಲ್ಲಿ ಮನವಿಗಳನ್ನು ತೆಗೆದುಕೊಂಡು ಸಚಿವರ ಕಚೇರಿಗೆ ಕಳುಹಿಸಿಕೊಡುತ್ತೇವೆ. ಇಲ್ಲವೇ ಅವರ ಆಪ್ತ ಸಹಾಯಕರಿಗೆ ನೀಡುತ್ತೇವೆ ಇದನ್ನು ಹಸ್ತಕ್ಷೇಪವೆಂದು ಗಂಭೀರವಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.