ಮೋದಿ ಗ್ಯಾರಂಟಿಯೆದುರು ಬೇರಾವ ಗ್ಯಾರಂಟಿಯೂ ಇಲ್ಲ: ಕೇಂದ್ರ ಸಚಿವ ಕ್ರಿಶನ್ ಪಾಲ್‌

By Kannadaprabha NewsFirst Published Jan 4, 2024, 2:43 PM IST
Highlights

ದೇಶದ ಭರವಸೆಯು ಪ್ರಧಾನಿ ಮೋದಿಯವರ ಮೇಲಿದೆ. ಹಾಗಾಗಿಯೇ ಇಲ್ಲಿ ಮೋದಿ ಗ್ಯಾರಂಟಿ ಬಿಟ್ಟು ಬೇರೆ ಯಾರ ಗ್ಯಾರಂಟಿಯೂ ನಡೆಯುತ್ತಿಲ್ಲ. ವಿಕಸಿತ ಹಾಗೂ ಶ್ರೇಷ್ಠ ಭಾರತಕ್ಕಾಗಿ ಮೋದಿ ಅವರೊಂದಿಗೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್‌ ಗುರ್ಜರ್ ಕರೆ ನೀಡಿದರು. 

ರಾಮನಗರ (ಜ.04): ದೇಶದ ಭರವಸೆಯು ಪ್ರಧಾನಿ ಮೋದಿಯವರ ಮೇಲಿದೆ. ಹಾಗಾಗಿಯೇ ಇಲ್ಲಿ ಮೋದಿ ಗ್ಯಾರಂಟಿ ಬಿಟ್ಟು ಬೇರೆ ಯಾರ ಗ್ಯಾರಂಟಿಯೂ ನಡೆಯುತ್ತಿಲ್ಲ. ವಿಕಸಿತ ಹಾಗೂ ಶ್ರೇಷ್ಠ ಭಾರತಕ್ಕಾಗಿ ಮೋದಿ ಅವರೊಂದಿಗೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ ಎಂದು ಕೇಂದ್ರ ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್‌ ಗುರ್ಜರ್ ಕರೆ ನೀಡಿದರು. ನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕ ಆಯೋಜಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಸಂಬಂಧ ಜಿಲ್ಲಾ ಕಾರ್ಯಕರ್ತರ ಸಭೆ ಉದ್ಘಾಟಿಸಿದ ಅವರು, ದೇಶವನ್ನು ಶಕ್ತಿಯುತ, ಸ್ವಸ್ಥ ಮತ್ತು ವಿಕಸಿತವನ್ನಾಗಿ ನಿರ್ಮಾಣ ಮಾಡಬೇಕು ಎಂಬುದು ಮೋದಿಯವರ ಸಂಕಲ್ಪವಾಗಿದೆ. ಅದಕ್ಕಾಗಿ ನಾವೆಲ್ಲರೂ ದೇಶದ ನೀತಿ ಮೇಲೆ ಕೆಲಸ ಮಾಡಬೇಕಿದೆ ಎಂದರು.

ಹಿಂದಿನ ಸರ್ಕಾರಗಳ ಯೋಜನೆಗಳು ಕೇವಲ ಕಾಗದಕ್ಕೆ ಸೀಮಿತವಾಗಿದ್ದವು. ಆದರೆ, ಮೋದಿಯವರು ಕೊಟ್ಟ ಗ್ಯಾರಂಟಿಗಳು ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದೇಶದಲ್ಲಿ ಮೋದಿಯವರ ಮೇಲಿನ ವಿಶ್ವಾಸ ವೃದ್ಧಿಯಾಗುತ್ತಿದ್ದು, ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಹೇಳಿದರು. ದೇಶದಲ್ಲಿ 70 ವರ್ಷ ಆಡಳಿತ ನಡೆಸಿದವರೂ ಮಾಡಲಾಗದ ಕೆಲಸವನ್ನು ಮೋದಿ ಸರ್ಕಾರ 9 ವರ್ಷಗಳಲ್ಲಿ ಮಾಡಿ ತೋರಿಸಿದೆ. ಕಾಂಗ್ರೆಸ್ ಸರ್ಕಾರ ಕೇವಲ 3 ಕೋಟಿ ಮನೆಗಳಿಗಷ್ಟೇ ಕೊಳಾಯಿ ಸಂಪರ್ಕ ಕಲ್ಪಿಸಿತ್ತು. ಆದರೆ, ಮೋದಿ ಸರ್ಕಾರ 13.50 ಕೋಟಿ ಮನೆಗಳಿಗೆ ಕೊಳಾಯಿ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದೆ. ಬಡ ಜನರಿಗೆ ಮನೆ ಮಾತ್ರವಲ್ಲದೆ ವಿದ್ಯುತ್ , ಎಲ್ ಪಿಜಿ, ನೀರಿನ ಸಂಪರ್ಕ ಕಲ್ಪಿಸಿಕೊಟ್ಟಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಎಂದು ಕ್ರಿಶನ್ ಪಾಲ್ ಗುರ್ಜರ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಇಬ್ಬರು ಸಚಿವರು, ಶಾಸಕರಿದ್ದ ಕಾರ್‌ಗೆ ಮಧು ಬಂಗಾರಪ್ಪ ಡ್ರೈವರ್‌!

ಮೋದಿ ಸರ್ಕಾರದ ಜನತಾ ಕಲ್ಯಾಣದ ಪ್ರತಿಯೊಂದು ಯೋಜನೆಗಳ ಸಂಪೂರ್ಣ ಮಾಹಿತಿ ಪ್ರತಿಯೊಬ್ಬ ವ್ಯಕ್ತಿಗೂ ತಿಳಿದಿರಬೇಕು ಎಂಬುದೇ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಕೊರೋನಾ ಕಾಲದಿಂದ ಇಲ್ಲಿವರೆಗೂ ಪ್ರಧಾನಮಂತ್ರಿ ಅನ್ನ ಯೋಜನೆಯಲ್ಲಿ ಬಡವರಿಗೆ 5 ಕೆಜಿ ಪಡಿತರ ನೀಡಲಾಗುತ್ತಿದೆ. ಪ್ರತಿಯೊಬ್ಬ ಮಹಿಳೆಯ ಗೌರವ ಕಾಪಾಡುವ ನಿಟ್ಟಿನಲ್ಲಿ 9 ವರ್ಷದಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಿದ್ದಾರೆ ಎಂದರು. ಬಡ ಜನರಿಗಾಗಿ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಿದ್ದಾರೆ. ಇಷ್ಟೇ ಅಲ್ಲದೆ, ಬಡವರಿಗಾಗಿ 10 ಸಾವಿರ ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಇದರಿಂದ ಬಡ ಜನರಿಗೆ 25 ಸಾವಿರ ಕೋಟಿ ಉಳಿತಾಯವಾಗಿದೆ.

ಗರ್ಭಿಣಿಯರಿಗೆ ಮಾತೃವಂದನಾ ಯೋಜನೆ, ಕೃಷಿ ಚಟುವಟಿಕೆಯಲ್ಲಿ ತೊಡಗುವ ಮಹಿಳೆಯರಿಗೆ ಅನುಕೂಲವಾಗುವಂತೆ ಡ್ರೋನ್‌ ಖರೀದಿಸಲು ಶೇ.80ರಷ್ಟು ಸಬ್ಸಿಡಿ ನೀಡಲಾಗುತ್ತಿದ್ದು, ಈ ಗ್ಯಾರಂಟಿಯನ್ನು ಮೋದಿ ಸರ್ಕಾರ ಈಡೇರಿಸಲಿದೆ ಎಂದು ಕ್ರಿಶನ್ ಪಾಲ್‌ ಗುರ್ಜರ್ ಹೇಳಿದರು. ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಗೆಲುವು ಸಾಧಿಸಲಾಗದ (ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ) ಕ್ಷೇತ್ರಗಳಲ್ಲಿಯೂ ವಿಜಯ ಪತಾಕೆ ಹಾರಿಸಲಿದೆ. ಬಿಜೆಪಿಯೊಂದಿಗೆ ಜೆಡಿಎಸ್ ಕೈ ಜೋಡಿಸಿರುವುದು ಶಕ್ತಿಯನ್ನು ವೃದ್ಧಿಸಿದ್ದು, ಯಾರೂ ಎದೆಗುಂದಬಾರದು ಎಂದರು.

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದರೂ ಸೋಲು ಕಂಡಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಂಸತ್ ಚುನಾವಣೆ ಎದುರಿಸಬೇಕಿದೆ. ಇಲ್ಲಿಯವರೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಯಾವವು ಎಂಬ ಗೊಂದಲ ಜನರಲ್ಲಿತ್ತು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಿಂದ ಗೊಂದಲ ನಿವಾರಣೆಯಾಗುತ್ತಿದೆ. ಸಂಸತ್ ಚುನಾವಣೆ ಸನಿಹದಲ್ಲಿಯೇ ರಾಮಮಂದಿರವೂ ಉದ್ಘಾಟನೆಗೊಳ್ಳುತ್ತಿರುವುದು ಬಿಜೆಪಿ ಪಾಲಿಗೆ ವರವಾಗಲಿದೆ ಎಂದು ಪರೋಕ್ಷವಾಗಿ ಹೇಳಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕುಂಠಿತಗೊಂಡು ಭ್ರಷ್ಟಾಚಾರ ಎಲ್ಲೆ ಮೀರಿದೆ. ಅಧಿಕಾರಕ್ಕಾಗಿ ಕಚ್ಚಾಟ ಆರಂಭವಾಗಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಜನರು ಲೋಕಸಭಾ ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ ಎಂದು ಯೋಗೇಶ್ವರ್ ತಿಳಿಸಿದರು.

ಜನ ನಂಬಿರುವುದು ನರೇಂದ್ರ ಮೋದಿ ಗ್ಯಾರಂಟಿ: ಕೇಂದ್ರ ಸಚಿವ ಭಗವಂತ ಖೂಬಾ

ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಗೌಡ, ಯಾತ್ರೆ ಜಿಲ್ಲಾ ಸಂಚಾಲಕ ಭಾರತಿ ಮುಗ್ದಮ್ , ಬಿಜೆಪಿ ಜಿಲ್ಲಾ ಸಹ ಪ್ರಭಾರಿ ವಿಜಯ್ ಕುಮಾರ್, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ಪ್ರಧಾನ ಕಾರ್ಯದರ್ಶಿ ರುದ್ರದೇವರು, ಉಪಾಧ್ಯಕ್ಷ ಸುರೇಶ್, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ, ಶಿವಾನಂದ, ಪದ್ಮನಾಭ, ಚಂದ್ರಶೇಖರ ರೆಡ್ಡಿ , ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಮತ್ತಿತರರು ಉಪಸ್ಥಿತರಿದ್ದರು. ಮೋದಿಯವರು ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮಮಂದಿರ ನಿರ್ಮಾಣ ಮಾಡುವ ಗ್ಯಾರಂಟಿ ನೀಡಿದ್ದರು. ಆದರೆ, ದಿನಾಂಕ ಮಾತ್ರ ಹೇಳಿರಲಿಲ್ಲ. ಈಗ ರಾಮ ಮಂದಿರ ಉದ್ಘಾಟನೆಯ ದಿನಾಂಕ ಎಲ್ಲರಿಗೂ ಗೊತ್ತಾಗಿದೆ. ರಾಮಮಂದಿರ ನಿರ್ಮಾಣದ ಆಶ್ವಾಸನೆ ಈಡೇರಿಸಿದಂತೆ ಪ್ರತಿಯೊಂದು ಗ್ಯಾರಂಟಿಯನ್ನು ಈಡೇರಿಸಲಾಗುವುದು.

click me!