
ಬೆಂಗಳೂರು (ಫೆ.16): ‘ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಬಿಜೆಪಿ ಸರ್ಕಾರವು ರಾಜ್ಯದ ಖಜಾನೆ ಲೂಟಿಗೆ ಮುಂದಾಗಿದ್ದು, ಸಚಿವ ಸ್ಥಾನ ವಂಚಿತ ಹಾಗೂ ಅಸಮಾಧಾನಿತ ಶಾಸಕರ ಮನವೊಲಿಸಲು ಒಂದರಿಂದ ಎರಡು ಸಾವಿರ ಕೋಟಿ ರು. ಅನುದಾನ ಹಂಚಿ ಕಮಿಷನ್ ಪಡೆಯಲು ಪ್ರೇರೇಪಿಸುತ್ತಿದೆ. ತನ್ಮೂಲಕ ವಿವಿಧ ಇಲಾಖೆಗಳಲ್ಲಿ ಕೋಟ್ಯಂತರ ರು. ಮೊತ್ತದ ಅಕ್ರಮ ಟೆಂಡರ್ ಹಗರಣ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಮಾಡಿದೆ.
ಗುರುವಾರ ತುರ್ತು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಗಂಭೀರ ಆರೋಪ ಮಾಡಿದ್ದು, ಈ ಅಕ್ರಮ ಟೆಂಡರ್ ಮುಖ್ಯಮಂತ್ರಿಯವರ ಕಚೇರಿಯಲ್ಲೇ ತೀರ್ಮಾನವಾಗುತ್ತಿದೆ ಎಂದು ದೂರಿದ್ದಾರೆ. ಅಸಮಾಧಾನಿತ ಶಾಸಕರಿಗೆ ಅಕ್ರಮವಾಗಿ ಭಾರೀ ಮೊತ್ತದ ಅನುದಾನ ಹಂಚಲಾಗಿದೆ. ಅಲ್ಲದೆ ತಮಗೆ ಇಚ್ಛೆ ಬಂದ ಗುತ್ತಿಗೆದಾರರಿಗೆ ಟೆಂಡರ್ ಕಾರ್ಯಾದೇಶ ನೀಡಿ ಕಮಿಷನ್ ವಸೂಲಿಗೆ ಅವಕಾಶ ನೀಡಲಾಗಿದೆ. ತನ್ಮೂಲಕ ಬೃಹತ್ ಪ್ರಮಾಣದ ಭ್ರಷ್ಟಾಚಾರದಲ್ಲಿ ಸರ್ಕಾರ ತೊಡಗಿದೆ.
ಬಿಜೆಪಿಯವರಂತೆ ಅಮಾಯಕರ ಬಲಿಕೊಟ್ಟು ರಾಜಕಾರಣ ಮಾಡಿಲ್ಲ: ಎಚ್‌ಡಿಕೆ
ಈ ಬಗ್ಗೆ ಕಾನೂನು ಹೋರಾಟ ನಡೆಸುವ ಜತೆಗೆ ಸದನದಲ್ಲೂ ಪ್ರಸ್ತಾಪಿಸಲಾಗುವುದು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲಾ ಟೆಂಡರ್ ರದ್ದು ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ. ನೀರಾವರಿ ನಿಗಮಗಳಲ್ಲಿ ಒಂದೇ ದಿನ 18 ಸಾವಿರ ಕೋಟಿ ರು. ಮೊತ್ತದ ಟೆಂಡರ್‌ಗಳಿಗೆ ಅನುಮೋದನೆ ನೀಡಿರುವುದು ಅಕ್ರಮ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿಶೇಖರ್ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಕಚೇರಿಯಿಂದಲೇ ಅಕ್ರಮ: ಸಿದ್ದರಾಮಯ್ಯ ಮಾತನಾಡಿ, ಚುನಾವಣೆಗೆ ಹಣ ಲೂಟಿ ಹೊಡೆಯಲು ಟೆಂಡರ್ ಮೊತ್ತವನ್ನು ಬೇಕಾಬಿಟ್ಟಿಹೆಚ್ಚಿಸಿದ್ದಾರೆ. ಯಾರು ಹೆಚ್ಚು ಕಮಿಷನ್ ಕೊಡುತ್ತಾರೋ ಅವರಿಗೆ ಟೆಂಡರ್ ನೀಡುತ್ತಿದ್ದಾರೆ. ಜತೆಗೆ ಬಿಲ್ ಪಾವತಿಯಲ್ಲೂ ಇದೇ ಕ್ರಮ ಅನುಸರಿಸಲಾಗುತ್ತಿದೆ. ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 20,000 ಕೋಟಿ ರು. ಬಾಕಿ ಬಿಲ್ ಇದೆ. 10% ಕಮಿಷನ್ ಕೊಟ್ಟವರಿಗೆ ಕಾರ್ಯಾದೇಶ, ಬಿಲ್ ಪಾವತಿ ಆಗುತ್ತಿದೆ. ಇದು ಮುಖ್ಯಮಂತ್ರಿಗಳ ಕಚೇರಿಯಿಂದಲೇ ಆರಂಭವಾಗಿದೆ ಎಂದು ಆರೋಪಿಸಿದರು.
ಎಲ್ಲಾ ಟೆಂಡರ್ ರದ್ದು: ಸರ್ಕಾರ ಹಾಗೂ ಗುತ್ತಿಗೆದಾರರು, ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಕಾನೂನುಬಾಹಿರ ಕೆಲಸ ಮಾಡಿದರೆ ಮುಂದೆ ನೀವು ಸಿಕ್ಕಿಹಾಕಿಕೊಳ್ಳುತ್ತೀರಿ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ನಮ್ಮ ಪಕ್ಷ ಮುಂದೆ ಅಧಿಕಾರಕ್ಕೆ ಬರಲಿದ್ದು, ನಾವು ತನಿಖಾ ಆಯೋಗ ರಚನೆ ಮಾಡಿ ಎಲ್ಲವನ್ನೂ ತನಿಖೆ ಮಾಡಿಸಿ, ಯಾರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಜತೆಗೆ ಕಳೆದ 6 ತಿಂಗಳ ಎಲ್ಲಾ ಟೆಂಡರ್ ರದ್ದುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದುಪ್ಪಟ್ಟು ಮೌಲ್ಯದ ಟೆಂಡರ್ ಅಂದಾಜು: ಡಿ.ಕೆ. ಶಿವಕುಮಾರ್ ಮಾತನಾಡಿ, ಈ ಸರ್ಕಾರದ ಅವಧಿ ಇನ್ನು ಒಂದು ತಿಂಗಳು ಮಾತ್ರ. ಹೀಗಾಗಿ ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್‌ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. 500 ಕೋಟಿ ರು. ಮೌಲ್ಯದ ಟೆಂಡರ್ ಇದ್ದರೆ ಅದರ ಅಂದಾಜು ಮೊತ್ತವನ್ನು 1000 ಕೋಟಿಯಷ್ಟು ಮಾಡಿಸಿ ಸಾರ್ವಜನಿಕರ ಹಣ ಲೂಟಿ ಹೊಡೆಯುತ್ತಿದ್ದಾರೆ.
ಗೂಳಿಹಟ್ಟಿಶೇಖರ್ ಅವರೇ ಒಂದೇ ದಿನ 18 ಸಾವಿರ ಕೋಟಿ ರು. ಅಕ್ರಮ ಟೆಂಡರ್ ನೀಡಿರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 4,200 ಕೋಟಿ ರು.ಗಳ ಟೆಂಡರ್‌ನಲ್ಲಿ ಪಾರದರ್ಶಕತೆ ಇಲ್ಲ ಎಂದೂ ಹೇಳಿದ್ದಾರೆ. ಕೇವಲ 7 ದಿನಗಳ ಅಲ್ಪಾವಧಿಯಲ್ಲೇ ಟೆಂಡರ್ ನೀಡುತ್ತಿದ್ದಾರೆ. ಶಾಸಕರುಗಳಿಗೆ ಇದರ ಉಸ್ತುವಾರಿ ವಹಿಸಿ, ಅವರೇ ಗುತ್ತಿಗೆದಾರರನ್ನು ಗುರುತಿಸಿ ಟೆಂಡರ್ ನೀಡುವ ಜವಾಬ್ದಾರಿ ನೀಡಲಾಗಿದೆ ಎಂದು ಗೂಳಿಹಟ್ಟಿಶೇಖರ್ ಬರೆದಿರುವ ಪತ್ರದ ಪ್ರತಿ ಪ್ರದರ್ಶಿಸಿದರು.
ಕೊಟ್ಟ ಮಾತಿನಂತೆ ನಡೆಯದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ
ಜಮೀನು ಸ್ವಾಧೀನಕ್ಕೆ ಮೊದಲೇ ಟೆಂಡರ್: ಹಣ ಲೂಟಿ ಹೊಡೆಯಲು ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಉದಾಹರಣೆಗೆ ಶಿವರಾಮ ಕಾರಂತ ಲೇಔಟ್ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಳ್ಳದೇ ಟೆಂಡರ್ ಕರೆಯಲಾಗಿದೆ. ಅಲ್ಲದೆ ಮುಂಗಡವಾಗಿ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಇನ್ನು ಬೆಂಗಳೂರು ನಗರದಲ್ಲಿ ಯಾವುದಾದರೂ ಕೆಲಸ ಆಗಬೇಕಾದರೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡೀಲ್ ಆಗುತ್ತಿವೆ. ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಸರ್ಕಾರ 7100 ಕೋಟಿ ವೆಚ್ಚ ಮಾಡಿರುವುದಾಗಿ ತಿಳಿಸಿದ್ದು, ಯಾವ ರಸ್ತೆ ಗುಂಡಿ ಮುಕ್ತವಾಗಿದೆ ಎಂದು ಕಿಡಿ ಕಾರಿದರು.
ಮುಂದಿನ ಚುನಾವಣೆಯಲ್ಲಿ ಪ್ರತಿ ಓಟಿಗೆ 6 ಸಾವಿರ ರು. ನೀಡುತ್ತೇವೆ ಎಂದು ಬಿಜೆಪಿಯ ಮಾಜಿ ಸಚಿವರು ಹೇಳಿದ್ದರು. ಇದಕ್ಕೆ ಅಗತ್ಯವಿರುವ ಸಾವಿರಾರು ಕೋಟಿ ರು. ಹಣವನ್ನು ಸರ್ಕಾರಿ ಖಜಾನೆಯಿಂದ ಕೊಳ್ಳೆ ಹೊಡೆಯಲು ಮುಂದಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಈ ಎಲ್ಲಾ ಅಕ್ರಮಗಳನ್ನೂ ಬಯಲಿಗೆಳೆಯಲಿದೆ.
-ರಣದೀಪ್ ಸುರ್ಜೆವಾಲಾ, ರಾಜ್ಯ ಕಾಂಗ್ರೆಸ್ ಉಸ್ತುವಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.