'ಏಯ್' ಅಂದ ರೇವಣ್ಣಗೆ ಮರ್ಯಾದೆ ಕೊಟ್ಟು ಮಾತಾಡಿ ಎಂದ ಹಾಸನ ಜಿ.ಪಂ ಅಧ್ಯಕ್ಷೆ

By Suvarna NewsFirst Published Jun 20, 2020, 10:33 PM IST
Highlights

ಸಾಮಾನ್ಯ ಸಭೆಯಲ್ಲಿ ತಮ್ಮ ವಿರುದ್ಧ ಮಾಜಿ ಸಚಿವ ರೇವಣ್ಣ ಏಕ ವಚನ ಪ್ರಯೋಗಿಸಿದ್ದನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ ಘಟನೆ ಹಾಸನ ಜಿಪಂ ಸಭಾಂಗಣದಲ್ಲಿ ನಡೆದಿದೆ.

ಹಾಸನ, (ಜೂನ್.20): ಸಾಮಾನ್ಯ ಸಭೆಯಲ್ಲಿ ಮಾಜಿ ಸಚಿವ ರೇವಣ್ಣ ಏಕ ವಚನ ಪ್ರಯೋಗಿಸಿದ್ದಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ವಿರೋಧ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ. 

ಇಂದು (ಶನಿವಾರ) ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾಜಿ ಸಚಿವ ರೇವಣ್ಣ 15ನೇ ಹಣಕಾಸಿಗೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದರು. ಈ ವೇಳೆ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮ ಮೇಲೆ ಕೇಳಿಬರುತ್ತಿರುವ ಆರೋಪಗಳಿಗೆ ಸಮಜಾಯಿಷಿ ನೀಡಲು ಮುಂದಾದರು. 

ಇದರಿಂದ ಕೆರಳಿದ ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕುರಿತು, 'ಏಯ್ ನೋಡಮ್ಮ ನಾನು ನಿನ್ನನ್ನು ಮಾತನಾಡಿಸುತ್ತಿಲ್ಲ' ಎಂದು ಏಕವಚನದಲ್ಲಿ ಹೇಳಿದರು. ಇದರಿಂದ ಆಕ್ರೋಶಗೊಂಡ ಅಧ್ಯಕ್ಷೆ ಶ್ವೇತಾ ದೇವರಾಜ್, ಮರ್ಯಾದೆ ಕೊಟ್ಟು ಮಾತನಾಡಿಸಿ ಎಂದು ರೇವಣ್ಣ ವಿರುದ್ಧ ತಿರುಗಿ ಬಿದ್ದರು.

ಭಾನುವಾರ ಕಂಕಣ ಸೂರ್ಯಗ್ರಹಣ, ಅವಧಿ ಮುಗಿದ ಬಿಯರ್‌ನಿಂದ ಹೋಗಲಿದೆ ಪ್ರಾಣ; ಜೂ.20ರ ಟಾಪ್ 10 ಸುದ್ದಿ!

ಈ ವೇಳೆ ಮಧ್ಯೆ ಪ್ರವೇಶಿಸಿದ ಭವಾನಿ ರೇವಣ್ಣ, ನೀನು ಮರ್ಯಾದೆ ಕೊಟ್ಟಿದ್ದರಲ್ಲವೆ ಅವರು ಕೊಡೋದು ಎಂದು ಅಧ್ಯಕ್ಷೆಗೆ ತಿರುಗೇಟು ನೀಡುವ ಮೂಲಕ ತಮ್ಮ ಪತಿ ರೇವಣ್ಣ ಪರವಾಗಿ ನಿಂತರು.

ಇದೆಲ್ಲವನ್ನು ನೋಡುತ್ತಾ ಕುಳಿತಿದ್ದ ಎಂಎಲ್‍ಸಿ ಗೋಪಾಲಸ್ವಾಮಿ ತಮ್ಮ ಪಕ್ಷದ ಶ್ವೇತಾ ದೇವರಾಜ್ ಪರವಾಗಿ ಮಾತನಾಡಲು ಮುಂದಾದರು. ತಕ್ಷಣ ರೇವಣ್ಣ ನೀವು ಸುಮ್ಮನಿರಿ ನಾನು ಹೇಳುತ್ತೇನೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿಗೆ ಸೂಚಿಸಿದರು.

ಇದಕ್ಕೆ ಒಪ್ಪದ ಗೋಪಾಲಸ್ವಾಮಿ, ಭವಾನಿ ರೇವಣ್ಣ ಕಡೆ ಕೈ ತೋರಿಸಿ ಅವರು ಮಾತನಾಡಬಹುದಾ ಎಂದು ಜೋರು ಧ್ವನಿಯಲ್ಲಿ ಪ್ರಶ್ನೆಸಿದರು. ಬಳಿಕ ರೇವಣ್ಣ ತಮ್ಮ ಪತ್ನಿಗೆ ಸುಮ್ಮನಿರುವಂತೆ ಸೂಚಿಸಿದರು. 

click me!