
ಕಳೆದ ವರ್ಷ ಐಪಿಎಲ್ ಪಂದ್ಯದ ವೇಳೆ ಮೃತಪಟ್ಟ 11 ಮಂದಿಗೆ ಈ ಬಾರಿ ಗೌರವಾರ್ಥವಾಗಿ 11 ವಿಶೇಷ ಸೀಟುಗಳನ್ನು ರಿಸರ್ವ್ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳಿದ್ದು, ಅದೇ ಇನ್ನೊಂದೆಡೆ, ಪುಕ್ಕಟೆ ಸೀಟಿಗಾಗಿ ಶಾಸಕರ ಗುದ್ದಾಟ ನಡೆಯುತ್ತಿದೆ. ಟಿಕೆಟ್ಗೆ ಹಣ ಕೊಡುವುದು ಆಗಲ್ಲ ಎಂದಿರೋ ಈ ಶಾಸಕರು ಫ್ರೀ ಫ್ರೀಗಾಗಿ ಹಾತೊರೆದು ಕೊನೆಗೂ ಅದನ್ನು ಗಿಟ್ಟಿಸಿಕೊಂಡಿದ್ದಾರೆ. ಐಪಿಎಲ್ ಕ್ರಿಕೆಟ್ ಪಂದ್ಯಾಟ ವೀಕ್ಷಿಸಲು ಶಾಸಕರಿಗೆ ಮೂರು ಉಚಿತ ಟಿಕೆಟ್ ಕೊಡುವ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಕೈಗೊಂಡಿದ್ದಾರೆ. ಇದೊಂದು ಅಸಭ್ಯ, ಅಸಹ್ಯ ಎಂದು ಇದಾಗಲೇ ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೇಳಿದ್ದರು. ಕಳೆದ ವರ್ಷ ಇದೇ ಐಪಿಎಲ್ ಪಂದ್ಯದ ಸಂದರ್ಭದಲ್ಲಿ ನಡೆದ ದುರಂತದಲ್ಲಿ 11 ಜನ ಅಮಾಯಕರು ಪ್ರಾಣ ಕಳೆದುಕೊಂಡ ಘಟನೆಯ ಆಕ್ರಂದನ ಇಂದಿಗೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ. ಆ ನೋವಿನ ನಡುವೆ ನಾವು ಐಪಿಎಲ್ ಟಿಕೆಟ್‌ಗಾಗಿ ಸದನದಲ್ಲಿ ಪಟ್ಟು ಹಿಡಿಯುವುದು ನಮ್ಮನ್ನು ಜನರ ದೃಷ್ಟಿಯಲ್ಲಿ ಇನ್ನಷ್ಟು ಕನಿಷ್ಠರನ್ನಾಗಿಸುತ್ತದೆ ಎಂದು ಹೇಳಿದ್ದರು.
ಜನಸಾಮಾನ್ಯರ ಅದೆಷ್ಟೋ ಗಂಭೀರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ವರ್ಷಾನುಗಟ್ಟಲೆ ಪರಿಹಾರ ಸಿಗುವುದಿಲ್ಲ. ಆದರೆ ಶಾಸಕರ ಸೌಲಭ್ಯ, ಟಿಕೆಟ್ ವಿಚಾರ ಬಂದಾಗ 24 ಗಂಟೆಯೊಳಗೆ ಸ್ಪಂದಿಸುವ ಉತ್ಸುಕತೆಯನ್ನು ಸರ್ಕಾರ ತೋರಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯ ಹಾಗೂ ಜನಪ್ರತಿನಿಧಿಗಳ ಬಗ್ಗೆ ತಿರಸ್ಕಾರ ಮೂಡುವಂತೆ ಮಾಡಿದೆ ಎಂದಿದ್ದರು. ಈ ಎಲ್ಲಾ ಹಿನ್ನೆಲೆಯಲ್ಲಿ ಹಾಗೂ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ, ಸರ್ಕಾರ ಅಥವಾ ಕೆಎಸ್‌ಸಿಎ ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ನಿರಾಕರಿಸುತ್ತಿದ್ದೇನೆ. ಆದ್ದರಿಂದ ದಯವಿಟ್ಟು ಮುಂಬರುವ ಐಪಿಎಲ್ ಪಂದ್ಯಗಳಿಗೆ ಸಂಬಂಧಿಸಿದಂತೆ ನನ್ನ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರು.
ಇದರ ಬೆನ್ನಲ್ಲೇ ಇದೀಗ ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ನಲ್ಲಿ ಕಾಂಗ್ರೆಸ್ಸಿಗನ ಕಾರ್ಯಕರ್ತನೊಬ್ಬ ಕರೆ ಮಾಡಿರುವ ಬಗ್ಗೆ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಹೀಗೊಂದು ವಿಚಿತ್ರ ಮೊಬೈಲ್ ಕರೆ ನನಗೆ ಬಂದಿತ್ತು. ಆಹಾ.. ಎಂತಹ ಕರೆ ಅಂತೀರಿ! ಕರೆ ಮಾಡಿದವರ ಹೆಸರು ಸಂದೀಪ್ ಎಂದು. ಮಿಸ್ಡ್ ಕಾಲ್ ಲಿಸ್ಟ್ ಅಲ್ಲಿದ್ದ ಆ ನಂಬರ್ ಗೆ ನಾನು ಮರುಕರೆ ಮಾಡಿ ಕನ್ನಡದಲ್ಲಿ ಮಾತನಾಡಿದಾಗ ಅವರು ಇಂಗ್ಲೀಷಿನಲ್ಲಿ ತಮ್ಮ ಪರಿಚಯ ಹೇಳಿಕೊಂಡಿದ್ದು ಹೀಗೆ.
" ನನ್ನ ಹೆಸರು ಸಂದೀಪ್ ಎಂದು. ನಿಮ್ಮ( ಸುರೇಶ್ ಕುಮಾರ್ ) ಮೊಬೈಲ್ ನಂಬರ್ ನನಗೆ ಶ್ರೀ ರೇವಂತ ರೆಡ್ಡಿ ಅವರ ಆಫೀಸಿಂದ ದೊರಕಿತು. ( ರೇವಂತ್ ರೆಡ್ಡಿ ಎಂದರೆ ತೆಲಂಗಾಣ ಮುಖ್ಯಮಂತ್ರಿ ). ನಾನು ಕಾಂಗ್ರೆಸ್ ಕಾರ್ಯಕರ್ತ ಹಾಗೂ ರೇವಂತರ ರೆಡ್ಡಿ ಅವರ ಸಂಬಂಧಿ. ನನಗೆ ಐಪಿಎಲ್ ಟಿಕೆಟ್ ಬೇಕಿತ್ತು. ದಯವಿಟ್ಟು ಸಹಾಯ ಮಾಡುವಿರಾ ಎಂಬುದು ಆ ಕರೆಯ ಸಾರಾಂಶ.
ನಾನು ಅವರಿಗೆ ಮಾರುತ್ತರ ಕೊಟ್ಟೆ " ನನಗೆ ಐಪಿಎಲ್ ಟಿಕೆಟ್ ಬೇಡ. ನನ್ನ ಹೆಸರಿನಲ್ಲಿ ಯಾರಿಗೂ ಟಿಕೆಟ್ ಕೊಡುವುದು ಬೇಡ. ಈ ವಿಐಪಿ ಸಂಸ್ಕೃತಿಗೆ ಕೊನೆ ಹಾಡಬೇಕು " ಎಂದು ನಾನು ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ದಯವಿಟ್ಟು ಈ ವಿಚಾರ ನನ್ನ ಜೊತೆ ಮಾತನಾಡಬೇಡಿ ಎಂದೆ. ಪಾಪ, ತುಂಬಾ ನಿರಾಶರಾದ ಅವರು ಫೋನ್ ಕರೆ ಕಟ್ ಮಾಡಿದರು. ನನಗೂ ನಗು ಬಂತು. ನಕ್ಕುಬಿಟ್ಟೆ. ಅಬ್ಬಾ.. IPL ಮಾಯೆ ತೆಲಂಗಾಣದವರನ್ನು ನನಗೆ ಫೋನಾಯಿಸುವಂತೆ ಮಾಡಿತು ಎಂದು ಸುರೇಶ್ ಕುಮಾರ್ ಬರೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.