
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಮಾ.3): ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಯಾವ ಪಕ್ಷ ಸೇರುತ್ತಾರೆ ಅನ್ನೋದು ಸದ್ಯದ ಕುತೂಹಲ. ಸುಮಲತಾ ರಾಜ್ಯ ರಾಜಕೀಯಕ್ಕೆ ಬರ್ತಾರೆ ಎನ್ನುವ ಮಾತುಗಳ ನಡುವೆ ಬಿಜೆಪಿ ಪಕ್ಷ ಸೇರುತ್ತಾರೆ ಎನ್ನುವ ಚರ್ಚೆಯೂ ಇದೆ. ಈ ನಡುವೆ ಬಿಜೆಪಿ ಪಕ್ಷದ ಸಭೆಯಲ್ಲಿ ಭಾಗಿಯಾದ ಸಂಸದೆ ಸುಮಲತಾ ಅಂಬರೀಶ್ ಅಚ್ಚರಿ ಮೂಡಿಸಿದರು. ಮಾ. 12 ರಂದು ಬೆಂಗಳೂರು-ಮೈಸೂರು ನೂತನ ದಶಪಥ ಹೆದ್ದಾರಿ ಲೋಕಾರ್ಪಣೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಗೆ ಆಗಮಿಸುತ್ತಿದ್ದು. ಈ ಹಿನ್ನೆಲೆಯಲ್ಲಿ ಇಂದು ಬಿಜೆಪಿ ಮುಖಂಡರ ಸಭೆ ಏರ್ಪಡಿಸಲಾಗಿತ್ತು. ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ಉದ್ಘಾಟನಾ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ನಡೆದ ಸಭೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ನಾರಾಯಣಗೌಡ, ಗೋಪಾಲಯ್ಯ ಹಾಗೂ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಜಿಲ್ಲಾಧ್ಯಕ್ಷ ಸಿಪಿ ಉಮೇಶ್ ಆಗಮಿಸಿದ್ದರು.
ಮಂಡ್ಯ: ಸುಮಲತಾ ಬಿಜೆಪಿ ಸೇರ್ಪಡೆ ಸಾಧ್ಯತೆ ಅಧಿಕ
ಈ ಸಭೆಯಲ್ಲಿ ಭಾಗವಹಿಸಿದ ಸುಮಲತಾ ಅಂಬರೀಶ್ ಬಿಜೆಪಿ ನಾಯಕರ ಜೊತೆ ವೇದಿಕೆ ಹಂಚಿಕೊಂಡರು. ಈ ವೇಳೆ ಕೇಸರಿ ಟವಲ್ ನೀಡಿ ಸುಮಲತಾ ಅವರನ್ನು ಸಭೆಗೆ ಸ್ವಾಗತಿಸಲಾಯಿತು. ಆದರೆ ಕೇಸರಿ ಟವಲ್ ಧರಿಸಿದೆ ಕೈಯಲ್ಲೇ ಹಿಡಿದು ಕುಳಿತ ಸುಮಲತಾ ಪಕ್ಷ ಸೇರ್ಪಡೆಗೂ ಮುನ್ನವೇ ಬಿಜೆಪಿ ಸಭೆಯಲ್ಲಿ ಕಾಣಿಸಿಕೊಂಡು ಕುತೂಹಲ ಕೆರಳಿಸಿದರು.
ಪಕ್ಷ ಸೇರ್ಪಡೆ, ಸ್ಪರ್ಧೆ ಬಗ್ಗೆ ಜನರ ಅಭಿಪ್ರಾಯ ಕೇಳುವೆ: ಸುಮಲತಾ ಅಂಬರೀಶ್
ಬಳಿಕ ಸಭೆಯಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು ಮಂಡ್ಯ ಜಿಲ್ಲೆಯ ವಿಶೇಷತೆ ಗುರುತಿಸಿ ಬರ್ತಿದ್ದಾರೆ. ಮಂಡ್ಯವನ್ನ ಇಂಡಿಯಾ ತಿರುಗಿ ನೋಡುವಂತೆ ಮಾಡಿದ್ದೇವೆ. ಕರ್ನಾಟಕದಲ್ಲಿ ನಡೆದ ರೋಡ್ ಶೋಗಳಿಗಿಂತ ಬೆಸ್ಟ್ ಶೋ ಮಂಡ್ಯದಲ್ಲಿ ಆಗಬೇಕು. ಇಡೀ ದೇಶವೇ ಆ ದಿನವನ್ನ ನೋಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.