
ಬೆಂಗಳೂರು : 36 ವರ್ಷಗಳ ಬಳಿಕ ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಚಿಂತನೆ ನಡೆಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು(ಕೆಪಿಸಿಸಿ) ಇದಕ್ಕೆ ಪೂರಕವಾಗಿ ಪ್ರಸ್ತುತ ಪರಿಸ್ಥಿತಿಗಳು ಮತ್ತು ಕಾರ್ಯಸಾಧ್ಯತೆಯ ಬಗ್ಗೆ ಸವಿಸ್ತಾರವಾದ ವರದಿ ನೀಡಲು ಇಬ್ಬರು ಸಚಿವರನ್ನು ಒಳಗೊಂಡ ಒಂಬತ್ತು ಸದಸ್ಯರ ಸಮಿತಿ ರಚಿಸಿದೆ.
ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶನಿವಾರ ಈ ಸಮಿತಿ ರಚಿಸಿದ್ದು, ಮುಂದಿನ 15 ದಿನಗಳಲ್ಲಿ ವರದಿ ನೀಡಲು ಸೂಚಿಸಿದ್ದಾರೆ.
ಸಮಿತಿಯ ಸಂಚಾಲಕರನ್ನಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ ಪಾಟೀಲ ಅವರನ್ನು ನೇಮಿಸಲಾಗಿದೆ. ಉಳಿದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ವಿಧಾನ ಪರಿಷತ್‌ನ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಬಸವನಗೌಡ ಬಾದರ್ಲಿ, ಕೆಪಿವೈಸಿಸಿ ಅಧ್ಯಕ್ಷ ಎಚ್.ಎಸ್.ಮಂಜುನಾಥ್, ಎನ್‌ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್ ಸಮಿತಿಯ ಸದಸ್ಯರಾಗಿದ್ದಾರೆ.
ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ಉತ್ತೇಜನಗೊಳ್ಳುತ್ತದೆ, ಶೈಕ್ಷಣಿಕ ಶಿಸ್ತು ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ವಿದ್ಯಾರ್ಥಿ ಸಮೂಹದಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಂದ ವ್ಯಕ್ತವಾದ ಅಭಿಪ್ರಾಯಗಳ ಹಿನ್ನೆಯಲ್ಲಿ ಕೆಪಿಸಿಸಿಯು ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ಮತ್ತೆ ನಡೆಸಲು ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ಪ್ರಸ್ತುತ ಸನ್ನಿವೇಶಗಳನ್ನು ಅಧ್ಯಯನ ಮಾಡಿ ಹಾಗೂ ಚುನಾವಣೆಗಳನ್ನು ನಡೆಸುವ ಕಾರ್ಯಸಾಧ್ಯತೆ ಮತ್ತು ಅಗತ್ಯತೆಯ ಶಿಫಾರಸುಗಳೊಂದಿಗೆ ಸಮಗ್ರ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ.
ಸಮಿತಿಯು ಯಾವ ಯಾವ ಹಂತಗಳಲ್ಲಿ ಚುನಾವಣೆ ನಡೆಸಬಹುದು, ಚುನಾವಣೆಯಿಂದ ಆಗುವ ಸಾಧಕ-ಬಾಧಕಗಳು ಹಾಗೂ ಪರಿಣಾಮಗಳೇನು? ಚುನಾವಣೆಯನ್ನು ಪಕ್ಷದ ಹೆಸರಿನಡಿ ನಡೆಸಬೇಕೆ ಅಥವಾ ಸಿದ್ಧಾಂತದ ಆಧಾರದಲ್ಲಿ ನಡೆಸಬೇಕೇ ಅಥವಾ ವಿದ್ಯಾರ್ಥಿ ಕಲ್ಯಾಣದ ಉದ್ದೇಶದ ರಾಜಕೀಯೇತರ ರಿತಿಯಲ್ಲಿ ನಡೆಸಬೇಕೆ ಎಂಬ ಬಗ್ಗೆ ಸಮಿತಿಯು ವಿವರವಾದ ವರದಿ ನೀಡಬೇಕು. ಜೊತೆಗೆ ಚುನಾವಣೆ ಹಾಗೂ ಉಮೇದುವಾರಿಕೆ ಅರ್ಹತೆ, ಚುನಾವಣಾ ಪ್ರಕ್ರಿಯೆ ಹಾಗೂ ವ್ಯವಸ್ಥೆ ಹೇಗಿರಬೇಕೆಂಬ ಮಾಹಿತಿ, ಚುನಾವಣಾ ವೆಚ್ಚ ಮತ್ತು ಪಾರದರ್ಶಕತೆ, ದೂರುಗಳ ಪರಿಹಾರ ಮತ್ತು ಭದ್ರತಾ ವ್ಯವಸ್ಥೆ, ಜೊತೆಗೆ ಮಹಿಳೆಯರು, ಸಣ್ಣ ಪುಟ್ಟ ಸಮುದಾಯಗಳು ಮತ್ತು ವಿಶೇಷಚೇತನರಿಗೆ ಮೀಸಲಾತಿ, ಸಂಘದ ಅವಧಿ ನಿರ್ಧಾರ ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ವರದಿ ನೀಡಲು ಸೂಚಿಸಲಾಗಿದೆ.
ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ನಡುವೆ ಹಿಂಸಾಚಾರ ಪ್ರಕರಣಗಳು ಹೆಚ್ಚಾದ ಕಾರಣಕ್ಕೆ 1989ರಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಅಂದಿನ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿಷೇಧಿಸಿತ್ತು.
ವಿದ್ಯಾರ್ಥಿ ಚುನಾವಣೆ ಬಗ್ಗೆ ಯಾಕೆ ಮತ್ತೆ ಚಿಂತನೆ ಮಾಡಬಾರದು ಎಂದು ರಾಹುಲ್ ಗಾಂಧಿ ಅವರು ನನಗೆ ಮತ್ತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಪಕ್ಷದ ಹಲವು ನಾಯಕರು ಹಾಗೂ ಕಾರ್ಯಕರ್ತರಿಂದಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಇಂತಹ ಚುನಾವಣೆಯಿಂದ ಹೊಸ ನಾಯಕರನ್ನು ಬೆಳಕಿಗೆ ತರಲು ಸಹಕಾರಿಯಾಗಲಿದೆ.
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.