
ಮಂಡ್ಯ (ಜೂ.08): ಕಾವೇರಿ ಆರತಿಗೆ ರಾಜ್ಯಸರ್ಕಾರ 100 ಕೋಟಿ ರು. ಖರ್ಚು ಮಾಡುವುದಕ್ಕೆ ನನ್ನ ವಿರೋಧವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಮೈಷುಗರ್ ಪ್ರೌಢಶಾಲೆ ಆವರಣದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಕಾವೇರಿ ಆರತಿಗೆ 100 ಕೋಟಿ ರು. ಯಾಕೆ ಬೇಕು? ನಮ್ಮ ಪುಟ್ಟರಾಜು ಕೆರೆತೊಣ್ಣೂರಿನಲ್ಲಿ ಇಂತಹ ಕಾರ್ಯಕ್ರಮ ಮಾಡಿದಾಗ ಎಷ್ಟು ಖರ್ಚಾಯಿತು ಎಂದು ಕೇಳಿ. ಇಷ್ಟೊಂದು ಬೃಹತ್ ಮೊತ್ತ ವೆಚ್ಚ ಮಾಡುವುದು ಏತಕ್ಕೆ? 100 ಕೋಟಿ ರು. ಖರ್ಚು ಮಾಡುವುದಕ್ಕೆ ನನ್ನ ವಿರೋಧ ಇದೆ ಎಂದರು.
ಸರ್ಕಾರದಿಂದ ಗಂಟೆಗೊಂದು ನಿರ್ಧಾರ: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ವಿಚಾರದಲ್ಲಿ ರಾಜ್ಯ ಸರ್ಕಾರ ಗಂಟೆ ಗಂಟೆಗೊಂದು ನಿರ್ಧಾರ ಮಾಡುತ್ತಿದೆ. ಅಂತಿಮವಾಗಿ ಏನು ಮಾಡುತ್ತದೆ ಎಂಬುದನ್ನು ನೋಡಬೇಕು. ಮೊದಲು ಮ್ಯಾಜಿಸ್ಟ್ರಿಯಲ್ ತನಿಖೆ ಎಂದರು. ಆಮೇಲೆ ನ್ಯಾಯಾಂಗ ತನಿಖೆ, ಅದಾದ ಮೇಲೆ ಸಿಐಡಿಗೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಅಂತಿಮವಾಗಿ ಯಾವ ತನಿಖೆ ವರದಿ ಪಡೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಟೀಕಿಸಿದರು. ಇದನ್ನು ಸರ್ಕಾರ ಎನ್ನಲು ಆಗುತ್ತದೆಯೇ? ಯಾವುದೇ ತೀರ್ಮಾನ ಮಾಡಿದರೆ ಸ್ಪಷ್ಟತೆ ಇರಬೇಕು.
ಅಧಿಕಾರಿಗಳ ತಪ್ಪು ಏನಿತ್ತು?: ಎಫ್‌ಐಆರ್‌ನಲ್ಲಿ ಅಧಿಕಾರಿಗಳು ಕರ್ತವ್ಯ ಲೋಪ ಆಗಿಲ್ಲ ಎಂದು ಉಲ್ಲೇಖ ಮಾಡಿದ್ದಾರೆ. ಸರ್ಕಾರದ ಸಂಪೂರ್ಣ ವಿಫಲತೆ ಕಣ್ಣಿಗೆ ಕಟ್ಟಿದಂತಿದೆ. ಪಹಲ್ಗಾಂ, ಪ್ರಯಾಗ್‌ರಾಜ್‌ನಲ್ಲಿ ಸಂಭವಿಸಿದ ಘಟನೆಗಳನ್ನು ಹೇಳುತ್ತಿದ್ದಾರೆ. ಆ ಘಟನೆಗಳಿಗೂ ಇದಕ್ಕೂ ಏನು ಸಂಬಂಧ? ಇಲ್ಲಿ ಇವರು ಮಾಡಿರುವ ತಪ್ಪಿಗೆ ಪಹಲ್ಗಾಂ, ಪ್ರಯಾಗ್‌ರಾಜ್ ವಿಚಾರ ತರುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮುಂಬೈ ಮೇಲೆ ಉಗ್ರರ ದಾಳಿ ಆಯಿತಲ್ಲ, ಆಗ ಸಿಂಗ್ ಅವರು ರಾಜೀನಾಮೆ ನೀಡಿದ್ದರಾ? ಕೇವಲ ಸಿಎಂ, ಡಿಸಿಎಂ ವರ್ಚಸ್ಸು ಹೆಚ್ಚಿಸಿಕೊಳ್ಳಲಿಕ್ಕೆ ಮಾಡಿದ ಶೋ ಇದು ಎಂದು ಅವರು ಟೀಕಾಪ್ರಹಾರ ನಡೆಸಿದರು.
ಕುಮಾರಸ್ವಾಮಿ ತಮ್ಮ ಆರೋಗ್ಯ ನೋಡಿಕೊಳ್ಳಲಿ ಎಂದು ಹೇಳಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವರು, ನನ್ನ ಆರೋಗ್ಯವನ್ನು ದೇವರು ನೋಡಿಕೊಳ್ಳುತ್ತಾನೆ. ಮಂಡ್ಯ ಜನರ ಹಾರೈಕೆಯಿಂದ ನನಗೆ ಏನೂ ಆಗೋಲ್ಲ. ನಾನು ಯಾವುದೇ ಒತ್ತಡದಲ್ಲಿ ಇಲ್ಲ. ಅವರೇ ಒತ್ತಡದಲ್ಲಿ ಇದ್ದಾರೆ ಎಂದು ಟಾಂಗ್ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.