ಶಾಸಕರ ಅಮಾನತು ನನ್ನೊಬ್ಬನ ನಿರ್ಧಾರವಲ್ಲ: ಸ್ಪೀಕರ್‌ ಯು.ಟಿ.ಖಾದರ್‌ ಸಂದರ್ಶನ

ಹನಿಟ್ರ್ಯಾಪ್‌ ನಂಥ ಗಂಭೀರ ಪ್ರಕರಣವನ್ನು ಮುನ್ಸೂಚನೆ ನೀಡದೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಸ್ಪೀಕರ್‌ ಯು.ಟಿ.ಖಾದರ್‌.

Speaker UT Khader Special Interview Over Suspension of MLAs gvd

- ಗಿರೀಶ್‌ ಗರಗ

ನಾನು ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡುವುದಿಲ್ಲ. ಶಾಸಕರ ಅಮಾನತಿನ ನಿರ್ಧಾರ ನಿಯಮದಂತೆ ಮಾಡಲಾಗಿದೆ. ಇದು ಅವರ ಮೇಲೆ ಯಾವುದೇ ಕೋಪ, ದ್ವೇಷದಿಂದ ತೆಗೆದುಕೊಂಡ ನಿರ್ಧಾರವಲ್ಲ. ಶಾಸಕರ ವರ್ತನೆ ಕುರಿತು ನಾನು ವಿಷಯ ಪ್ರಸ್ತಾಪಿಸಿದೆ, ಅದಕ್ಕೆ ಸದನ ಒಪ್ಪಿಗೆ ಸೂಚಿಸಿತು. ನಾನೊಬ್ಬನೇ ಆ ನಿರ್ಧಾರ ತೆಗೆದುಕೊಂಡಿದ್ದಲ್ಲ. ಇನ್ನು ನಾನು ಯಾವತ್ತೂ ಪ್ರತಿಪಕ್ಷಗಳ ಮಿತ್ರ. ಅವರಿಗೆ ಅಧಿಕಾರವೂ ಇಲ್ಲ, ಇನ್ನು ಸ್ಪೀಕರ್‌ ಕೂಡ ಅವರ ಪರವಾಗಿರದಿದ್ದರೆ ಕಷ್ಟ ಎಂಬ ಭಾವನೆಯಲ್ಲಿರುವವನು. ಅಮಾನತಾದ ಶಾಸಕರು ತಮ್ಮ ನಡವಳಿಕೆಯನ್ನು ಭವಿಷ್ಯದಲ್ಲಾದರೂ ತಿದ್ದಿಕೊಳ್ಳಬೇಕು.

Latest Videos

ಕ್ರಿಯಾಶೀಲ, ಉತ್ಸಾಹಿ ಶಾಸಕ ಯು.ಟಿ.ಖಾದರ್‌ ಫರೀದ್‌ ಸ್ಪೀಕರ್‌ ಆದ ನಂತರ ವಿಧಾನಸಭೆ ಹತ್ತು ಹಲವು ಕಾಸ್ಮೆಟಿಕ್‌ ಬದಲಾವಣೆ ಕಂಡಿದೆ. ವಿಧಾನಸಭೆಗೆ ಆಕರ್ಷಕ ಪ್ರವೇಶದ್ವಾರ ಲಭಿಸಿದೆ. ಶಾಸಕರಿಗಾಗಿ ಉಟೋಪಚಾರ, ಸುಖಾಸನ.. ಅಷ್ಟೇ ಏಕೆ ಮಸಾಜ್‌ ಆಸನಗಳೂ ಬಂದಿವೆ. ಇದರ ಜತೆಗೆ ಶಾಸನಸಭೆ ಬೆಳ್ಳಂಬೆಳಗ್ಗೆ ಆರಂಭವಾಗಿ ತಡರಾತ್ರಿಯವರೆಗೂ ನಡೆಯುವಷ್ಟು ಸಕ್ರಿಯವಾಗಿದೆ. ಇಂಥ ಸ್ಪೀಕರ್‌ ಅವಧಿಯಲ್ಲೇ ಬಜೆಟ್‌ ಅಧಿವೇಶನದ ಅಂತಿಮ ದಿನ 18 ಶಾಸಕರು ಆರು ತಿಂಗಳ ಕಾಲ ಅಮಾನತುಗೊಳ್ಳುವ ಗಂಭೀರ ಘಟನೆಯೂ ನಡೆದು ಹೋಯ್ತು. 

ರಾಘವೇಂದ್ರ ಮಠದ ಆಸ್ತಿ‌ ವಿವಾದ: ಮಧ್ಯರಾತ್ರಿ ಸುಬುಧೇಂದ್ರ ಶ್ರೀಗಳ ವಿರುದ್ಧ ಪ್ರತಿಭಟನೆ

ಸ್ಪೀಕರ್‌ ಅವರ ಈ ಕಠೋರ ನಿರ್ಧಾರದ ಬಗ್ಗೆ ದೇಶಾದ್ಯಂತ ಪರ ವಿರೋಧ ಚರ್ಚೆಗಳು ಆರಂಭಗೊಂಡಿವೆ. ನಿರ್ಧಾರ ಸರಿ ಎಂದು ಸರ್ಕಾರ ಬೆನ್ನುತಟ್ಟುತ್ತಿದ್ದರೆ, ಸರ್ಕಾರದ ಅಣತಿಯಂತೆ ಸ್ಪೀಕರ್‌ ಕೆಲಸ ಮಾಡುತ್ತಿದ್ದಾರೆಂದು ಪ್ರತಿಪಕ್ಷ ಆರೋಪಿಸುತ್ತಿದೆ. ಸದಾ ಶಾಸಕರ ಹಿತ ಕಾಯುವತ್ತಲೇ ಗಮನ ನೀಡುತ್ತಿದ್ದ ಖಾದರ್‌ ಇಂಥ ಕಠಿಣ ನಿಲುವು ಕೈಗೊಳ್ಳಲು ಕಾರಣವೇನು? ಶಾಸಕರ ಬಗ್ಗೆ ಅವರ ನಿಲುವು ಬದಲಾಗುವ ಸಾಧ್ಯತೆಯಿದೆಯೇ ಹಾಗೂ ಹನಿಟ್ರ್ಯಾಪ್‌ ನಂಥ ಗಂಭೀರ ಪ್ರಕರಣವನ್ನು ಮುನ್ಸೂಚನೆ ನೀಡದೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಕೊಟ್ಟಿದ್ದು ಏಕೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಸ್ಪೀಕರ್‌ ಯು.ಟಿ.ಖಾದರ್‌.

* 18 ಶಾಸಕರು, 6 ತಿಂಗಳ ಅಮಾನತು. ಈ ಪರಿ ಕಠೋರ ನಿರ್ಧಾರ ಕೈಗೊಳ್ಳುವ ಅಗತ್ಯವಿತ್ತಾ?
ಅಧಿವೇಶನದ ಕೊನೆಯ ದಿನ ಎಂಬ ಕಾರಣಕ್ಕಾಗಿ ಗದ್ದಲ ಎಬ್ಬಿಸಿ, ಧನವಿನಿಯೋಗ ವಿಧೇಯಕ ಅನುಮೋದನೆಗೆ ತಡೆಯೊಡ್ಡಲಾಯಿತು. ಸಭಾಧ್ಯಕ್ಷರ ಪೀಠದ ಬಳಿ ಬಂದು ಗಲಾಟೆ ಮಾಡಿ, ಪೇಪರ್‌ ಎಸೆಯುವ ಮೂಲಕ ಶಾಸಕರು ಅಗೌರವ ತೋರಿದರು. ಅದಕ್ಕಾಗಿ ಅಮಾನತು ಮಾಡಿದೆ. ಆದರೆ, ರಾಜಕೀಯ ಉದ್ದೇಶದಿಂದ ನನ್ನ ಕ್ರಮದ ವಿರುದ್ಧ ಕೆಲವರು ಮಾತನಾಡುತ್ತಿದ್ದಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಜನಸಾಮಾನ್ಯರು ಮಾತ್ರ ಅಮಾನತಿನ ನಿರ್ಧಾರ ಸ್ವಾಗತಿಸಿದ್ದಾರೆ. ಒಂದು ವೇಳೆ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಜನರೇ ನನ್ನನ್ನು ಪ್ರಶ್ನಿಸುತ್ತಿದ್ದರು. ಆಗ ನನಗೆ ಉತ್ತರ ನೀಡಲು ಸಾಧ್ಯವಾಗುತ್ತಿರಲಿಲ್ಲ.

* ಶಿಕ್ಷೆ ನೀಡಬೇಕಿತ್ತು ನಿಜ. ಆದರೆ, ಇಷ್ಟೊಂದು ದೀರ್ಘ ಅವಧಿಯ ಅಮಾನತು? ನಿಮ್ಮ ಮೇಲೆ ಒತ್ತಡವಿತ್ತು ಅಂಥ ಬಿಜೆಪಿ ಆರೋಪ?
ನಾನು ಯಾರ ಒತ್ತಡಕ್ಕೂ ಮಣಿದು ಕೆಲಸ ಮಾಡುವುದಿಲ್ಲ. ಶಾಸಕರ ಅಮಾನತಿನ ನಿರ್ಧಾರ ನಿಯಮದಂತೆ ಮಾಡಲಾಗಿದೆ. ಇದು ಅವರ ಮೇಲೆ ಯಾವುದೇ ಕೋಪ, ದ್ವೇಷದಿಂದ ತೆಗೆದುಕೊಂಡ ನಿರ್ಧಾರವಲ್ಲ. ಶಾಸಕರ ವರ್ತನೆ ಕುರಿತು ನಾನು ವಿಷಯ ಪ್ರಸ್ತಾಪಿಸಿದೆ, ಅದಕ್ಕೆ ಸದನ ಒಪ್ಪಿಗೆ ಸೂಚಿಸಿತು. ನಾನೊಬ್ಬನೇ ಆ ನಿರ್ಧಾರ ತೆಗೆದುಕೊಂಡಿದ್ದಲ್ಲ. ಇನ್ನು ನಾನು ಯಾವತ್ತೂ ಪ್ರತಿಪಕ್ಷಗಳ ಮಿತ್ರ. ಅವರಿಗೆ ಅಧಿಕಾರವೂ ಇಲ್ಲ, ಇನ್ನು ಸ್ಪೀಕರ್‌ ಕೂಡ ಅವರ ಪರವಾಗಿರದಿದ್ದರೆ ಕಷ್ಟ ಎಂಬ ಭಾವನೆಯಲ್ಲಿರುವವನು. ಅಮಾನತಾದ ಶಾಸಕರು ತಮ್ಮ ನಡವಳಿಕೆಯನ್ನು ಭವಿಷ್ಯದಲ್ಲಾದರೂ ತಿದ್ದಿಕೊಳ್ಳಬೇಕು.

* ಶಾಸಕರು ಕ್ಷಮೆಯಾಚಿಸಿದರೆ?
ಮೊದಲು ಶಾಸಕರಿಗೆ ತಮ್ಮ ತಪ್ಪಿನ ಅರಿವಾಗಬೇಕು. ಆದರೆ, ಇನ್ನೂ ಕೆಲ ಶಾಸಕರು ತಾವು ಮಾಡಿದ್ದು ತಪ್ಪು ಎಂದು ಒಪ್ಪುತ್ತಲೇ ಇಲ್ಲ. ಅವರನ್ನು ಅಮಾನತು ಮಾಡಿ ನಾನೇ ತಪ್ಪು ಮಾಡಿದ್ದೇನೆಂಬ ಭಾವನೆ ಅವರಲ್ಲಿದೆ. ಅವರು ಬಂದು ಕ್ಷಮೆ ಕೇಳಿದರೂ ಸದನ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಅಮಾನತಿಗೆ ಅನುಮೋದನೆ ನೀಡಿದ್ದೂ ಸದನವೇ. ಏನೇ ಆದರೂ ಶಾಸಕರು ತಮ್ಮ ತಪ್ಪಿನ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಬೇಕು.
ಅಮಾನತಿನಿಂದ ಶಾಸಕರ ಅಧಿಕಾರ ಮೊಟಕಾಗಿದೆ. 

* ಅವರ ಕ್ಷೇತ್ರದ ಅಭಿವೃದ್ಧಿ ಮೇಲೆ ಪರಿಣಾಮ ಬೀರುವುದಿಲ್ಲವೇ?
ಪ್ರತಿ ಶಾಸಕರೂ ಆಯ್ಕೆಯಾಗಿ ಬಂದಾಗ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದರಂತೆ ನಡೆದುಕೊಳ್ಳದಿದ್ದರೆ ಅವರಿಗೆ ಶಿಕ್ಷೆಯಾಗಬೇಕಲ್ಲವೇ? ಸಂವಿಧಾನಕ್ಕೆ ಅಗೌರವ ತೋರಿದರೆ ಸಹಿಸಲಾಗುವುದಿಲ್ಲ. ಹೀಗಾಗಿ ನಾನು ಸಭಾಧ್ಯಕ್ಷರ ಪೀಠದಲ್ಲಿ ಕುಳಿತು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕಿತ್ತು. ಅದನ್ನು ಮಾಡಿದ್ದೇನೆ. ಭವಿಷ್ಯದಲ್ಲಿ ಸಭಾಧ್ಯಕ್ಷ ಪೀಠಕ್ಕೆ ಇದಕ್ಕಿಂತ ಹೆಚ್ಚಿನ ಅವಮಾನ ಮಾಡುವುದಕ್ಕೆ ಈಗಲೇ ಕಡಿವಾಣ ಹಾಕಲು ಈ ಕ್ರಮ ಅನಿವಾರ್ಯವಿತ್ತು.

* ನಿಮ್ಮ ತೀರ್ಪಿನ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋದರೆ?
ನ್ಯಾಯಾಲಯಕ್ಕೆ ಹೋಗುವುದು ಶಾಸಕರಿಗೆ ಬಿಟ್ಟ ವಿಚಾರ. ಅವರಿಗೆ ನಾನು ಶುಭ ಹಾರೈಸುತ್ತೇನೆ. ಅವರು ನ್ಯಾಯಾಲಯಕ್ಕೆ ಹೋದರೆ ಬೇಸರವಿಲ್ಲ. ನಾನು ನಿಯಮಕ್ಕನುಗುಣವಾಗಿ, ನನ್ನ ಅಧಿಕಾರ ಬಳಸಿ ಕ್ರಮ ಕೈಗೊಂಡಿದ್ದೇನೆ ಅಷ್ಟೇ.

* ಶಾಸಕರ ಅಮಾನತು ಧೈರ್ಯದ ನಿರ್ಧಾರ ಎಂಬ ನಿಮ್ಮ ಹೇಳಿಕೆಗೆ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ವಿರೋಧಿಸಿದ್ದಾರಲ್ವಾ?
ಹೌದು, ನಾನು ಆ ಪದ ಬಳಸಬಾರದಿತ್ತು. ಕೆ.ಬಿ.ಕೋಳಿವಾಡ ಸೇರಿ ಹಿಂದಿನ ಎಲ್ಲ ಸಭಾಧ್ಯಕ್ಷರು ನನಗಿಂತ ಹಿರಿಯರು ಮತ್ತು ಹೆಚ್ಚಿನ ಅನುಭವ ಹೊಂದಿರುವವರು. ಮಾತನಾಡುವ ಭರದಲ್ಲಿ ನಾನು ಹಾಗೇ ಹೇಳಿದ್ದೇನಷ್ಟೇ, ಯಾರನ್ನೂ ಕಡೆಗಣಿಸಲು ಆ ಪದ ಬಳಸಿಲ್ಲ.

* ಹನಿಟ್ರ್ಯಾಪ್‌ ವಿಚಾರದ ಪ್ರಸ್ತಾವಕ್ಕೆ ಅವಕಾಶ ನೀಡಿದ್ದು ಸರಿಯೇ?
ವಿಷಯದ ಗಂಭೀರತೆ ಅರಿತು ಪ್ರಸ್ತಾಪಕ್ಕೆ ಅವಕಾಶ ನೀಡಿದ್ದೇನಷ್ಟೆ. ಮೊದಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಸಚಿವ ಕೆ.ಎನ್‌.ರಾಜಣ್ಣ ಹೆಸರು ಪ್ರಸ್ತಾಪಿಸಿ ಹನಿಟ್ರ್ಯಾಪ್‌ ವಿಚಾರ ಹೇಳಿದರು. ಅದಕ್ಕೆ ರಾಜಣ್ಣ ವಿವರಣೆ ನೀಡಿದರು. ಪ್ರತಿಪಕ್ಷ ಶಾಸಕರೂ ಆ ಬಗ್ಗೆ ಮಾತನಾಡಿದರು. ಕೊನೆಗೆ ಸರ್ಕಾರದಿಂದ ತನಿಖೆಯ ಉತ್ತರವೂ ದೊರೆಯಿತಷ್ಟೇ. ಸರ್ಕಾರ ಸದನದಲ್ಲಿ ನೀಡಿದ ಮಾತು ಉಳಿಸಿಕೊಳ್ಳಬೇಕು.

* ಸದನಕ್ಕೆ ಬಂದು ಸಮಸ್ಯೆ ಹೇಳಿಕೊಂಡರೂ ಪರಿಹಾರ ಸಿಗುತ್ತಿಲ್ಲ ಅಂತಾರಲ್ಲ ಶಾಸಕರು?
ಸದನದಲ್ಲಿ ಮಾತನಾಡಿದ ಕೂಡಲೇ ಎಲ್ಲವಕ್ಕೂ ಪರಿಹಾರ ಸಿಗುವುದಿಲ್ಲ. ನಾನೂ 5 ಬಾರಿ ಶಾಸಕನಾಗಿದ್ದು, ಈಗಲೂ ಎಲ್ಲ ಕೆಲಸಗಳೂ ಹೇಳಿದ ಕೂಡಲೇ ಆಗುತ್ತದೆ ಎಂದೇನಿಲ್ಲ. ಶಾಸಕರು ಸದನದಲ್ಲಿ ಮಾತನಾಡುವುದು ಸಮಸ್ಯೆಗಳನ್ನು ಸರ್ಕಾರ, ಸಚಿವರ ಗಮನಕ್ಕೆ ತರಲು. ಅದಾದ ನಂತರ ಸಚಿವರು ನೀಡಿದ ಭರವಸೆಗಳು ಈಡೇರಿಸುವವರೆಗೆ ಬೆಂಬಿಡದೆ ಓಡಾಡಬೇಕು. ನಾವೂ ಸರ್ಕಾರಿ ಕಚೇರಿಗಳನ್ನು ಅಲೆದು ಕಷ್ಟಪಟ್ಟಿದ್ದೇವೆ. ಪ್ರಯತ್ನ ಪಟ್ಟರೂ ಕೆಲಸವಾಗದಿದ್ದರೆ, ಭರವಸೆಗಳ ಸಮಿತಿಗೆ ದೂರು ನೀಡಿ, ಕೆಲಸವಾಗುವಂತೆ ಮಾಡಬೇಕು.

* ಅಧಿವೇಶನಕ್ಕೆ ಆಡಳಿತ ಪಕ್ಷದ ಸದಸ್ಯರು, ಸಚಿವರೇ ಹೆಚ್ಚಾಗಿ ಗೈರಾಗುತ್ತಿದ್ದಾರೆ?
ಸಚಿವರು ಸದನಕ್ಕೆ ಬಾರದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಅಧಿವೇಶನಕ್ಕೂ ತೊಡಕುಂಟಾಗುವಂತೆ ಮಾಡುತ್ತಿದ್ದಾರೆ. ಕಲಾಪದ ಅವಧಿಯಲ್ಲಿ ಸಚಿವರು ಸದನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸಚಿವರಿಗೆ ಸೂಚನೆ ನೀಡಿದ್ದಾರೆ. ಆಡಳಿತ ಪಕ್ಷದ ಶಾಸಕರು ಬರುವುದೇ ಇಲ್ಲ ಎನ್ನುವ ಹಾಗಿಲ್ಲ. ವಿಪಕ್ಷದ ಶಾಸಕರಂತೆ ಆಡಳಿತ ಪಕ್ಷದವರೂ ಕಲಾಪಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಸಚಿವರಾದ ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಎಚ್‌.ಕೆ. ಪಾಟೀಲ್‌, ಬಿ.ಎಸ್. ಸುರೇಶ್‌, ಸಂತೋಷ್‌ ಲಾಡ್‌ ನಿರಂತರವಾಗಿ ಕಲಾಪದಲ್ಲಿದ್ದು, ಶಾಸಕರ ಸಮಸ್ಯೆ ಕೇಳುತ್ತಿದ್ದಾರೆ.

* ಹಿಂದಿನ ಸ್ಪೀಕರ್‌ಗಳಿಗಿಂತ ಅತಿ ಹೆಚ್ಚಿನ ಅವಧಿ ಕಲಾಪ ನಡೆಸುತ್ತಿದ್ದೀರಿ. ಇದರಿಂದ ಏನಾದರೂ ಬದಲಾವಣೆಯಾಗಿದೆಯೇ?
ಖಂಡಿತಾ ಹಲವು ಬದಲಾವಣೆಗಳಾಗಿವೆ. ಶಾಸಕರು ಸಂತಸದಿಂದ ಕಲಾಪಕ್ಕೆ ಬರುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಆರಂಭಿಸಿ, ರಾತ್ರಿ 7 ಗಂಟೆಗೆ ಕಲಾಪ ಮುಂದೂಡಿದರೆ ಪ್ರಮುಖ ವಿಷಯಗಳ ಚರ್ಚೆಯೇ ನಡೆಸಲಾಗದು. ಆಗ ಎಲ್ಲ ಶಾಸಕರಿಗೂ ಅವಕಾಶ ಸಿಗುವುದಿಲ್ಲ. ಹೆಚ್ಚಿನ ಅವಧಿ ಕಲಾಪ ನಡೆಸುವುದರಿಂದ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡಲು ಅವಕಾಶ ಸಿಗುತ್ತಿದೆ.

* ಕಲಾಪ ಬೇಗ ಆರಂಭಿಸಿ, ತಡರಾತ್ರಿವರೆಗೆ ನಡೆಸುವುದಕ್ಕೆ ಶಾಸಕರಿಂದಲೇ ವಿರೋಧವಿದೆಯಲ್ಲ?
ಹಾಗೇನಿಲ್ಲ, ಅನೇಕ ಶಾಸಕರು ಬೆಳಗ್ಗೆ ಬೇಗ ಬಂದು, ಕಲಾಪ ಅಂತ್ಯವಾಗುವವರೆಗೆ ಇರುತ್ತಾರೆ. ಅದೇ ಉದಾಸೀನತೆ ತೋರುವವರು ಮಾತ್ರ ಸಮಯದ ಬಗ್ಗೆ ದೂರುತ್ತಿದ್ದಾರಷ್ಟೇ. ಅಧಿವೇಶನದ ಸಂದರ್ಭದಲ್ಲಿ ಶಾಸಕರಿಗೆ ಬೇರೆಲ್ಲ ಕೆಲಸಕ್ಕಿಂತ ಕಲಾಪದಲ್ಲಿ ಹಾಜರಾಗುವುದು ಮುಖ್ಯ. ವರ್ಷದಲ್ಲಿ ಮೂರು ಬಾರಿ ಅಧಿವೇಶನ ನಡೆಸುತ್ತೇವೆ. ಜನರು ತಮ್ಮ ಸಮಸ್ಯೆಯನ್ನು ಸರ್ಕಾರದ ಮುಂದಿಡಲು ಶಾಸಕರು ಶ್ರಮಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

* ಕರಾವಳಿ ಭಾಗದಿಂದ ಬಂದಿರುವ ಸ್ಪೀಕರ್‌ಗೆ ಪ್ರಾದೇಶಿಕ ವ್ಯಾಮೋಹ ಹೆಚ್ಚಿದೆಯೇ?
ನಾನು ತುಳುನಾಡಿನಿಂದ ಬಂದಿದ್ದರೂ ಎಲ್ಲ ಶಾಸಕರಿಗೂ ಸಭಾಧ್ಯಕ್ಷನಾಗಿದ್ದೇನೆ. ನಾವು ಬೆಳೆದು ಬಂದ ರೀತಿ, ನಮ್ಮ ಸಂಸ್ಕೃತಿ ಬಗ್ಗೆ ನನಗೆ ಹೆಚ್ಚಿನ ವ್ಯಾಮೋಹವಿದೆ. ಅದು ಕೆಲವೊಮ್ಮ ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದಾಗಲೂ ಪ್ರದರ್ಶಿಸಿದ್ದುಂಟು. ಅದನ್ನು ಅಲ್ಲಗಳೆಯುವುದಿಲ್ಲ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ನಮ್ಮ ತುಳುನಾಡಿನ ಸಂಸ್ಕೃತಿ. ಅದರಂತೆ ನಾನು ಕೆಲಸ ಮಾಡುತ್ತಿದ್ದೇನೆ. ನಾನು ವ್ಯಾಮೋಹಿಯಾಗಿದ್ದರೂ ಯಾರಿಗೂ ಅನ್ಯಾಯ ಮಾಡದೆ ಎಲ್ಲರಿಗೂ ನ್ಯಾಯ ಕೊಡಿಸುತ್ತಿದ್ದೇನೆ.

* ವಿಧಾನಸೌಧವನ್ನು ಸಾರ್ವಜನಿಕರಿಗೆ ತೆರೆದುಕೊಳ್ಳುವಂತೆ ಮಾಡಿದ್ದೀರಿ. ಇನ್ನಷ್ಟು ಹೊಸ ಯೋಜನೆಗಳಿವೆಯೇ?
ವಿಧಾನಸೌಧ ಜನರಿಗೆ ತಿಳುವಳಿಕೆ ನೀಡುವ ಕೇಂದ್ರವಾಗಿಸುವ ಆಸೆಯಿದೆ. ಶಾಸಕರು, ಅಧಿಕಾರಿಗಳು, ಮಾಧ್ಯಮದವರಿಗೆ ವಿಧಾನಸೌಧ ಮನೆಯಿದ್ದಂತೆ. ಅದೇ ಹೊರಗಿನಿಂದ ಬರುವವರಿಗೆ ವಿಧಾನಸೌಧದ ಬಗ್ಗೆ ಕುತೂಹಲವಿದೆ. ಒಮ್ಮೆ ಒಳಗೆ ನೋಡಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿಯೇ, ಸ್ವಲ್ಪ ಬದಲಾವಣೆ ತರುತ್ತಿದ್ದೇನೆ. ವಿಧಾನಸೌಧಕ್ಕೆ ಶಾಶ್ವತ ದೀಪಾಲಂಕಾರ ಮಾಡಿಸಲಾಗುತ್ತಿದೆ. ವಿಧಾನಸೌಧಕ್ಕೆ ಭಾನುವಾರದಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವಂತೆಯೂ ಸರ್ಕಾರಕ್ಕೆ ಸೂಚಿಸಿದ್ದೇನೆ. ಮೈಸೂರು ಅರಮನೆಯಂತೆ ವಿಧಾನಸೌಧವೂ ಆಕರ್ಷಣೀಯವಾಗಬೇಕು.

ರಾಜ್ಯದಲ್ಲೇ ಅತಿ ಹೆಚ್ಚು 361 ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ಚೆನ್ನಮ್ಮ ವಿವಿಯಲ್ಲಿ ತೀವ್ರ ಸಿಬ್ಬಂದಿ ಕೊರತೆ

* ಸಚಿವ ಸಂಪುಟ ಪುನಾರಚನೆಯಾದರೆ, ನೀವು ಸಚಿವ ಸ್ಥಾನದ ಆಕಾಂಕ್ಷಿಯಂತೆ?
ನನ್ನ ರಾಜಕೀಯ ಚಾನಲ್‌ ಸ್ಥಗಿತಗೊಂಡಿದೆ. ಈಗೇನಿದ್ದರೂ ಸ್ಪೀಕರ್‌ ಚಾನಲ್‌ ಮಾತ್ರ ತೆರೆದುಕೊಂಡಿದೆ. ರಾಜಕೀಯವಾಗಿ ಏನು ನಡೆಯುತ್ತಿದೆ ಎಂಬ ಮಾಹಿತಿಯೇ ನನಗಿಲ್ಲ. ಹೀಗಾಗಿ ಸಚಿವ ಸಂಪುಟ ಪುನಾರಚನೆಯಂತಹ ವಿಷಯಗಳು ನನಗೆ ತಿಳಿದಿಲ್ಲ.

vuukle one pixel image
click me!