ವಿಧಾನಸಭೆ ಅಧಿವೇಶನಕ್ಕೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ಧತೆ

By Kannadaprabha NewsFirst Published Aug 7, 2020, 11:47 AM IST
Highlights

ಸೆಪ್ಟೆಂಬರ್‌ 23ರೊಳಗೆ ಅಧಿವೇಶನ ನಡೆಸುವ ಅನಿವಾರ್ಯತೆ| ವಿಧಾನಸೌಧದ ಹೊರಗೆ ನಡೆಸುವ ಆಯ್ಕೆಯೂ ಪರಿಶೀಲನೆ| ಕಳೆದ ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನ| ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಎರಡು ಅಧಿವೇಶನಗಳ ನಡುವೆ ಆರು ತಿಂಗಳುಗಳಿಗಿಂತ ಹೆಚ್ಚಿನ ಸಮಯ ಇರುವಂತಿಲ್ಲ|

ಬೆಂಗಳೂರು(ಆ.07):  ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದರೂ ವಿಧಾನಸಭಾ ಅಧಿವೇಶನವನ್ನು ಸೆಪ್ಟೆಂಬರ್‌ 23ರೊಳಗೆ ಆಯೋಜಿಸುವ ಅನಿವಾರ್ಯತೆಯಲ್ಲಿರುವ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನ ನಡೆಸುವ ಸಾಧ್ಯತೆಗಳ ಬಗ್ಗೆ ವಿಧಾನಸೌಧದಲ್ಲಿ ಪರಿಶೀಲನೆ ಆರಂಭಿಸಿದ್ದಾರೆ. 

ವಿಧಾನಸೌಧದ ಹೊರಗೆ ಅಧಿವೇಶನ ನಡೆಸುವುದು ಸೇರಿದಂತೆ ಅಧಿವೇಶನದಲ್ಲಿ ಪಾಲ್ಗೊಳ್ಳುವವರನ್ನು ಕೊರೋನಾದಿಂದ ರಕ್ಷಿಸಲು ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಗುರುವಾರ ಕಾಗೇರಿ ಅವರು ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ವಿಧಾನಸಭಾ ಸಭಾಂಗಣದಲ್ಲಿ ಪ್ರಸ್ತುತ ಇರುವ ಆಸನ ವ್ಯವಸ್ಥೆಗಳ ನಡುವೆ ಗಾಜಿನ ಕವಚಗಳನ್ನು ಅಳವಡಿಸುವುದು, ಸದನದಲ್ಲಿ ಪಾಲ್ಗೊಳ್ಳುವ ಶಾಸಕರೆಲ್ಲರಿಗೂ ಕಡ್ಡಾಯವಾಗಿ ಮುಖಗವಸು ಒದಗಿಸುವುದು ಹಾಗೂ ಸದನಕ್ಕೆ ಬರುವಾಗ ಮುಖ ರಕ್ಷಕಗಳನ್ನು ಧರಿಸಿ ಬರಬೇಕೆಂದು ಮನವಿ ಮಾಡುವಂತೆ ಅಧಿಕಾರಿಗಳು ಸ್ಪೀಕರ್‌ ಅವರಿಗೆ ಸಲಹೆ ನೀಡಿದರು.

ಮಳೆಗೆ ಕರ್ನಾಟಕ ತತ್ತರ: ಆಸ್ಪತ್ರೆಯಲ್ಲಿ ಕುಳಿತೇ ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ

ಹಾಗೆಯೇ ಲೋಕಸಭೆ, ರಾಜ್ಯ ಸಭೆ ಹಾಗೂ ಇತರೆ ರಾಜ್ಯಗಳಲ್ಲಿನ ವಿಧಾನಸಭೆ ಮತ್ತು ವಿಧಾನಪರಿಷತ್‌ ಕಲಾಪಗಳನ್ನು ಆಯೋಜಿಸಲು ಯಾವ ರೀತಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂಬ ಮಾಹಿತಿ ಪಡೆಯುವಂತೆ ಅಧಿಕಾರಿಗಳಿಗೆ ಸ್ಪೀಕರ್‌ ಅವರು ಸೂಚಿಸಿದರು.

ಮುಂದಿನ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ಜೊತೆಗೆ ಅಧಿವೇಶನ ನಡೆಯುವ ಸ್ಥಳದ ಬಗ್ಗೆ ಚರ್ಚಿಸುವುದಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಳೆದ ಮಾರ್ಚ್‌ನಲ್ಲಿ ವಿಧಾನ ಸಭಾ ಅಧಿವೇಶನ ನಡೆದಿದೆ. ಸಂವಿಧಾನದ ನಿಯಮಗಳಿಗೆ ಅನುಸಾರವಾಗಿ ಎರಡು ಅಧಿವೇಶನಗಳ ನಡುವೆ ಆರು ತಿಂಗಳುಗಳಿಗಿಂತ ಹೆಚ್ಚಿನ ಸಮಯ ಇರುವಂತಿಲ್ಲ. ಆದ್ದರಿಂದ ಸೆ.23 ರೊಳಗೆ ರಾಜ್ಯದ ವಿಧಾನಸಭಾ ಅಧಿವೇಶನ ನಡೆಸುವ ಅನಿವಾರ್ಯತೆ ಎದುರಾಗಿದೆ.
 

click me!