ವಿಧಾನಸಭೆ ಸಭಾಧ್ಯಕ್ಷರಿಗೆ ಅವಮಾನ ಮಾಡುವಂತಹ ಯಾವುದೇ ಹೇಳಿಕೆ ಹಿಂದೆಯೂ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ, ಆದರೆ ಸಭಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಕಾಂಗ್ರೆಸ್ ನೀಡಿದೆ ಎಂದು ಹೇಳಿರುವುದಾಗಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ (ಡಿ.14): ವಿಧಾನಸಭೆ ಸಭಾಧ್ಯಕ್ಷರಿಗೆ ಅವಮಾನ ಮಾಡುವಂತಹ ಯಾವುದೇ ಹೇಳಿಕೆ ಹಿಂದೆಯೂ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ, ಆದರೆ ಸಭಾಧ್ಯಕ್ಷ ಸ್ಥಾನವನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಕಾಂಗ್ರೆಸ್ ನೀಡಿದೆ ಎಂದು ಹೇಳಿರುವುದಾಗಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ ನೀಡಿದ್ದಾರೆ. ಪ್ರಶ್ನೋತ್ತರ ವೇಳೆ, ‘ಮುಸ್ಲಿಂ ಸ್ಪೀಕರ್‌ಗೂ ಬಿಜೆಪಿಗರು ಇಂದು ನಮಸ್ಕಾರ ಮಾಡುತ್ತಿದ್ದಾರೆ’ ಎಂಬ ತಮ್ಮ ಮಾತಿಗೆ ಬಿಜೆಪಿ ಸದಸ್ಯರು ವ್ಯಕ್ತಪಡಿಸಿದ ಆಕ್ಷೇಪಕ್ಕೆ ಉತ್ತರಿಸಿದರು.
ತೆಲಂಗಾಣ ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸಭೆಯೊಂದರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಆ ಸಮುದಾಯಕ್ಕೆ ಎಷ್ಟು ಅನುಕೂಲವಾಗಲಿದೆ ಎಂದು ಸಂಶಯ ವ್ಯಕ್ತಪಡಿಸಿದಾಗ ತಾವು ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಷ್ಟು ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದೆ, ಅದರಲ್ಲಿ ಗೆದ್ದವರು ಎಷ್ಟು ಎಂಬುದನ್ನು ತಿಳಿಸಿದೆ. ಈ ಪೈಕಿ ಸಚಿವರು, ರಾಜಕೀಯ ಕಾರ್ಯದರ್ಶಿ, ವಿಧಾನಸಭೆ ಮುಖ್ಯ ಸಚೇತಕ ಹಾಗೂ ಸಭಾಧ್ಯಕ್ಷರನ್ನಾಗಿ ಮುಸ್ಲಿಂ ಸಮುದಾಯವರನ್ನು ಮಾಡಲಾಗಿದೆ, ಬಿಜೆಪಿ ಸೇರಿದಂತೆ ಎಲ್ಲ ಶಾಸಕರು ಸಭಾಧ್ಯಕ್ಷರಿಗೆ ಗೌರವ ಕೊಡುತ್ತಾರೆ ಎಂದು ಹೇಳಿದ್ದೇನೆ ಎಂದರು.
ರಾಜ್ಯ ಬಿಜೆಪಿ ಮೇಲೆ ಹೈಕಮಾಂಡ್ ಬೇಸರ ಆಗಿರೋದು ನಿಜ: ಈಶ್ವರಪ್ಪ
ಸಭಾಧ್ಯಕ್ಷರಿಗೆ ಬಿಜೆಪಿ ಶಾಸಕರು ಸಹ ಸಲಾಂ ಎಂದು ಹೇಳುತ್ತಾರೆ ಎಂದು ಹೇಳಿಯೇ ಇಲ್ಲ, ಸುಮ್ಮನೆ ತಮ್ಮ ಮೇಲೆ ಆಪಾದನೆ ಹೊರಿಸುವ ಕೆಲಸವನ್ನು ಬಿಜೆಪಿ ಸದಸ್ಯರು ಮಾಡುವುದು ಸರಿಯಲ್ಲ. ನಾವು ಎಂದೂ ಕೂಡಾ ಸಭಾಧ್ಯಕ್ಷ ಸ್ಥಾನಕ್ಕೆ ಅಗೌರವ ತೋರಿಸಿಲ್ಲ, ಮುಂದೆಯೂ ತೋರಿಸಿಲ್ಲ ಎಂದರು. ಬಿಜೆಪಿ ಸದಸ್ಯರು ಸಭಾಧ್ಯಕ್ಷರಿಗೆ ಅಸ್ಸಲಾಮು ವಾಲೆಕುಂ ಸಲಾಂ ಎಂದು ಹೇಳುತ್ತಾರೆ ಎಂದು ಹೇಳಿರುವುದನ್ನು ಸಾಬೀತು ಪಡಿಸಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಒಂದು ಹಂತದಲ್ಲಿ ಸಚಿವ ಜಮೀರ್ ಅಹಮದ್ ಏರಿದ ದನಿಯಲ್ಲಿ ಹೇಳಿದರು. ಜಮೀರ್ ಪರವಾಗಿ ಕಾಂಗ್ರೆಸ್‌ನ ಎಲ್ಲ ಶಾಸಕರು ಒಗ್ಗ ಟ್ಟಾಗಿ ನಿಂತು ಬೆಂಬಲಿಸಿದರು. ಬಿಜೆಪಿ ಸಭಾತ್ಯಾಗದ ಬಳಿಕ ಸಚಿವರು ಪ್ರಶ್ನೋತ್ತರ ಕಲಾಪದಲ್ಲಿ ಭಾಗಿಯಾದರು
ಜಮೀರ್ ರಾಜೀನಾಮೆಗಾಗಿ ಬಿಜೆಪಿ ನಡೆಸುತ್ತಿದ್ದ ಧರಣಿ ವಾಪಸ್: ಸಭಾಧ್ಯಕ್ಷ ಸ್ಥಾನ ಕುರಿತ ವಸತಿ ಸಚಿವ ಜಮೀಜ್ ಅಹ್ಮದ್ ಖಾನ್ ನೀಡಿದ ಹೇಳಿಕೆ ಹಿನ್ನೆಲೆಯಲ್ಲಿ ರಾಜೀನಾಮೆಗೆ ಪಟ್ಟು ಹಿಡಿದು ಧರಣಿ ಮುಂದುವರಿಸಿದ ಬಿಜೆಪಿ-ಜೆಡಿಎಸ್ ಸದಸ್ಯರು, ಚರ್ಚೆಗೆ ಅವಕಾಶ ನೀಡುವುದಾಗಿ ಸರ್ಕಾರ ಅಶ್ವಾಸನೆ ನೀಡಿದ ಬಳಿಕ ಧರಣಿಯನ್ನು ವಾಪಸ್ ಪಡೆದರು. ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ-ಜೆಡಿಎಸ್ ಸದಸ್ಯರು ಜಂಟಿಯಾಗಿ ಬಾವಿಗಿಳಿದು ಧರಣಿಯನ್ನು ಮುಂದುವರಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್ ಪೀಠಕ್ಕೆ ಅಗೌರವ ತೋರಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳು ಸೋಮವಾರದಿಂದ ಧರಣಿ ಆರಂಭಿಸಿದವು. ಮಂಗಳವಾರವೂ ಮುಂದುವರಿಸಿದಾಗ ಸರ್ಕಾರ ಮನವೊಲಿಕೆ ಮಾಡಿದ್ದರಿಂದ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ನಿಯಮಾವಳಿ ಪ್ರಕಾರ ನೋಟಿಸ್ ನೀಡಿದರೆ ಸರ್ಕಾರ ಚರ್ಚೆಗೆ ಸಿದ್ಧವಿದೆ. ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ಸಮಸ್ಯೆಗಳ ಕುರಿತು ಹೆಚ್ಚಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯ ಇದೆ.
ರಾಷ್ಟ್ರದ ಅಭಿವೃದ್ಧಿಗೆ ನರೇಂದ್ರ ಮೋದಿ ಬೇಕು: ಮಾಜಿ ಸಚಿವ ವಿ.ಸೋಮಣ್ಣ ಅಭಿಮತ
ಹೀಗಾಗಿ ಪ್ರತಿಭಟನೆಯನ್ನು ಕೈಬಿಟ್ಟು ಸಮಸ್ಯೆಗಳ ಬಗ್ಗೆ ಚೆಳಕು ಚೆಲ್ಲಬೇಕು ಎಂದು ಮನವಿ ಮಾಡಿದರು. ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕು ಎಂಬ ಅಭಿಲಾಷೆಯನ್ನು ನಾವು ಸಹ ಹೊಂದಿದ್ದೇವೆ. ಪೀಠಕ್ಕೆ ಅಗೌರವವಾದರೆ ಕಳಂಕ ಬರಲಿದೆ ಎಂಬ ಕಾರಣಕ್ಕಾಗಿ ಪ್ರಸ್ತಾಪಿಸಲಾಗಿತೇ ಹೊರತು ಬೇರಾವುದೇ ಉದ್ದೇಶ ಇಲ್ಲ. ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಸ್ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.