'ರಾಜ್ಯದಲ್ಲಿ ಮತ್ತೆ ಚುನಾವಣೆ : BSY ಕುರ್ಚಿ ಬಿಡ್ಬೇಕಾಗುತ್ತೆ'

By Kannadaprabha News  |  First Published Oct 25, 2019, 10:10 AM IST

ರಾಜ್ಯದಲ್ಲಿ ಶೀಘ್ರ ಉಪ ಚುನಾವಣೆ ನಡೆದು ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರ ಬಿಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. 


ಬೆಂಗಳೂರು[ಅ.25]:  ರಾಜ್ಯದಲ್ಲಿ ಶೀಘ್ರವೇ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳ ಸೋಲು ನಿಶ್ಚಿತ. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ರಾಜೀನಾಮೆ ಕೊಡಬೇಕಾದ ಸ್ಥಿತಿ ಬರುತ್ತದೆ. ಹಾಗಂತ ನಾವು ಮತ್ತ ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದಿಲ್ಲ. ಜೆಡಿಎಸ್‌ ಜತೆ ಈಗಾಗಲೇ ಅನುಭವಿಸಿ ಸಾಕಾಗಿದೆ. ಹೀಗಾಗಿ ಮರು ಚುನಾವಣೆಗೆ ಹೋಗುತ್ತೇವೆ.

ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಯಿದು.

Tap to resize

Latest Videos

undefined

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡು ರಾಜ್ಯಗಳಲ್ಲಿ ಪಕ್ಷಾಂತರಿಗಳಿಗೆ ಸೋಲುಂಟಾಗಿದೆ. ಮೋದಿ ಮ್ಯಾಜಿಕ್‌ ನಡೆದಿಲ್ಲ. ಹೀಗಾಗಿ ರಾಜ್ಯದಲ್ಲೂ ಉಪ ಚುನಾವಣೆ ನಡೆದಾಗ ಮೋದಿ ಮ್ಯಾಜಿಕ್‌ ನಡೆಯುವುದಿಲ್ಲ ಹಾಗೂ ಪಕ್ಷಾಂತರಿಗಳನ್ನು ಜನ ತಿರಸ್ಕರಿಸುತ್ತಾರೆ. ಹೀಗಾಗಿ, ಬಿಜೆಪಿ ಮತ್ತೆ ಬಹುಮತ ಕಳೆದುಕೊಂಡು ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಬರಲಿದೆ ಎಂದು ಅವರು ಭವಿಷ್ಯ ನುಡಿದರು.

ಯಡಿಯೂರಪ್ಪ ಅವರ ಸರ್ಕಾರ ಪತನದ ನಂತರ ಜೆಡಿಎಸ್‌ ಜತೆ ಸರ್ಕಾರ ರಚಿಸಲು ಅವಕಾಶವಿದ್ದರೂ ನಾವು ಸರ್ಕಾರ ರಚಿಸುವುದಿಲ್ಲ. ಜೆಡಿಎಸ್‌ ಜತೆ ಈಗಾಗಲೇ ಅನುಭವಿಸಿ ಸಾಕಾಗಿದೆ. ಹೀಗಾಗಿ ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳದೆ ಮರು ಚುನಾವಣೆಗೆ ಹೋಗುತ್ತೇವೆ. ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೇರೆ ರಾಜ್ಯಗಳ ಫಲಿತಾಂಶ ಯತಾವತ್ತಾಗಿ ರಾಜ್ಯದಲ್ಲೂ ಉಂಟಾಗುತ್ತದೆ ಎಂದು ಹೇಳುವುದಿಲ್ಲ. ಆದರೆ ಬಿಜೆಪಿ ನಾಯಕರು ಕುದುರೆ ವ್ಯಾಪಾರ ಮಾಡಿ ಶಾಸಕರನ್ನು ಖರೀದಿ ಮಾಡಿದ್ದರಿಂದ ಉಪ ಚುನಾವಣೆ ಬರುತ್ತಿದೆ. ಈ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಮತದಾನದ ದಿನ ಅನರ್ಹ ಶಾಸಕರಿಗೆ ಜನ ಬುದ್ಧಿ ಕಲಿಸಲಿದ್ದಾರೆ ಎಂದರು.

ಈ ಜನ್ಮದಲ್ಲಿ‌ ಮರೆಯಲಾರೆ. ನಿಮ್ಮ ಸಹವಾಸ ನಮಗೂ ಸಾಕು' HDK ದಿಢೀರ್ ಟ್ವೀಟ್...

ಕಟೀಲ್ ಗೆ ಪ್ರಬುದ್ಧತೆ ಇಲ್ಲ:  ಹೈಕಮಾಂಡ್‌ ಕೈ-ಕಾಲು ಹಿಡಿದು ಪ್ರತಿಪಕ್ಷ ನಾಯಕರಾಗಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು.

ಕಟೀಲ್‌ ಅಂಥಹವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ‘ಅವನು ಚೈಲ್ಡಿಶ್‌ ರೀತಿ, ಪ್ರಬುದ್ಧತೆÜಯೇ ಬಂದಿಲ್ಲ. ಅಂತಹವರ ಬಗ್ಗೆ ಮಾತನಾಡುವುದು ವ್ಯರ್ಥ’ ಎಂದರು.

ಪಕ್ಷ ಹಾಳು ಮಾಡಿದವರ

ವಾಪಸು ಸೇರಿಸಿಕೊಳ್ಳಲ್ಲ:  ಉಪ ಚುನಾವಣೆಗೆ ನ್ಯಾಯಾಲಯ ತೀರ್ಪು ನೋಡಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಅನರ್ಹರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ. ಈ ಬಗ್ಗೆ ಸದನದಲ್ಲೇ ಸ್ಪಷ್ಟವಾಗಿ ಹೇಳಿದ್ದೇನೆ. ಪಕ್ಷ ಹಾಳು ಮಾಡಿದವರನ್ನು ವಾಪಸು ಸೇರಿಸಿಕೊಳ್ಳುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಡಿಕೆಶಿಗೆ ಸ್ಥಾನಮಾನ: ಹೈಕಮಾಂಡ್‌ ನಿರ್ಧಾರ

ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಬಿಡುಗಡೆಯಾದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗೆ ಪ್ರತಿಕ್ರಿಯಿಸಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ನಮ್ಮ ಪಕ್ಷದ ನಾಯಕರು. ಅವರಿಗೆ ಯಾವ ಸ್ಥಾನ ನೀಡಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಪಕ್ಷದ ತೀರ್ಮಾನಗಳನ್ನು ಎಲ್ಲರೂ ಸ್ವಾಗತಿಸುತ್ತಾರೆ ಎಂದರು.

ಅಕ್ಟೋಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!