
ಬೆಳಗಾವಿ : ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್ (ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ) ಪ್ರಕ್ರಿಯೆ ವಿಚಾರದಲ್ಲಿ ನಮ್ಮ ಪಕ್ಷ ಎಂದಿಗೂ ರಾಜಕೀಯ ಮಾಡುವುದಿಲ್ಲ. ಆದರೆ, ನಿಜವಾದ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂಬುದೇ ನಮ್ಮ ಏಕೈಕ ಕಾಳಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಂದಗಡದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯದ ಸುಮಾರು 3 ಕೋಟಿ ಮತದಾರರು ಇನ್ನೂ ಮ್ಯಾಪ್ ಆಗಿಲ್ಲವೆಂದು ತಿಳಿಸಿರುವ ಕುರಿತು ಪ್ರತಿಕ್ರಿಯಿಸಿ, ಎಸ್‌ಐಆರ್ ಪ್ರಕ್ರಿಯೆ ಅತ್ಯಂತ ಎಚ್ಚರಿಕೆಯಿಂದ ನಡೆಯಬೇಕು. ಯಾವುದೇ ಅರ್ಹ ಮತದಾರರಿಗೆ ಅನ್ಯಾಯವಾಗದಂತೆ ಕಾರ್ಯ ನಿರ್ವಹಿಸುವಂತೆ ಬಿಎಲ್‌ಒಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸಬೇಕು ಎಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕವೇ ನಡೆಯಬೇಕೆಂಬುದು ಕಾಂಗ್ರೆಸ್‌ನ ಬೇಡಿಕೆ ಆಗಿದೆ ಎಂದರು.
ದೆಹಲಿ ಭೇಟಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ವರಿಷ್ಠರಿಂದ ಕರೆ ಬಂದರೆ ದೆಹಲಿಗೆ ತೆರಳುವೆ ಎಂದರು. ಗಡಿವಿವಾದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರ-ಕರ್ನಾಟಕ ಗಡಿವಿವಾದ ಪ್ರಕರಣ ಸುಪ್ರೀಂಕೋರ್ಟ್ ಮುಂದಿದೆ. ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಅರ್ಜಿಗೆ ಪ್ರತಿಯಾಗಿ ವಾದ ಮಂಡಿಸಲು ಕರ್ನಾಟಕದ ಕಾನೂನು ತಂಡ ಸಿದ್ಧವಾಗಿದೆ. ರಾಜ್ಯದ ಗಡಿಯ ಕುರಿತು ಅರ್ಜಿ ಸಲ್ಲಿಸುವ ಅಧಿಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಇದೆಯೇ ಎಂಬುದೇ ನಮ್ಮ ಮೂಲ ಪ್ರಶ್ನೆ. ಈ ವಿಚಾರ ಮೊದಲು ಇತ್ಯರ್ಥವಾಗಬೇಕು ಎಂದರು.
- ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚನೆ
- ರಾಜ್ಯದಲ್ಲಿ ಮುಂದಿನ ತಿಂಗಳಿನಿಂದ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ನಡೆವ ನಿರೀಕ್ಷೆ ಇದೆ
- ಈ ಹಿನ್ನೆಲೆಯಲ್ಲಿ ಮತದಾರರ ಮ್ಯಾಪಿಂಗ್ ಕೆಲಸವನ್ನು ಚುನಾವಣಾ ಆಯೋಗದ ತಂಡ ನಡೆಸುತ್ತಿದೆ
- ಎಸ್‌ಐಆರ್ ವೇಳೆ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಮತದಾರರ ಕೈಬಿಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು
- ಹೀಗಾಗಿ ಕರ್ನಾಟಕದಲ್ಲಿ ನಡೆಯುವ ಪ್ರಕ್ರಿಯೆ ಬಗ್ಗೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ತನ್ನ ಮುಖಂಡರಿಗೆ ಸೂಚಿಸಿದೆ
- ಈ ಪ್ರಕ್ರಿಯೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ. ಎಚ್ಚರಿಕೆಯಿಂದ ಎಸ್‌ಐಆರ್ ನಡೆಯಲಿ ಎಂದು ಸಲಹೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.