Siddaramotsava: ಸಿದ್ದು ಹುಟ್ಟುಹಬ್ಬಕ್ಕೆ 7000ಕ್ಕೂ ಅಧಿಕ ಬಸ್‌!

By Govindaraj SFirst Published Aug 2, 2022, 4:30 AM IST
Highlights

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ದಾವಣಗೆರೆಗೆ ತೆರಳಲು ರಾಜ್ಯಾದ್ಯಂತ ಬರೋಬ್ಬರಿ ಏಳು ಸಾವಿರಕ್ಕೂ ಅಧಿಕ ಬಸ್‌ಗಳು ಬುಕ್ಕಿಂಗ್‌ ಆಗಿವೆ. 

ಬೆಂಗಳೂರು (ಆ.02): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ದಾವಣಗೆರೆಗೆ ತೆರಳಲು ರಾಜ್ಯಾದ್ಯಂತ ಬರೋಬ್ಬರಿ ಏಳು ಸಾವಿರಕ್ಕೂ ಅಧಿಕ ಬಸ್‌ಗಳು ಬುಕ್ಕಿಂಗ್‌ ಆಗಿವೆ. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ 3 ರಿಂದ 6 ಸಾವಿರ ಕಾರ್ಯಕರ್ತರು ಅದರಲ್ಲೂ ಕಾಂಗ್ರೆಸ್‌ ಪ್ರಭಾವ ಹೆಚ್ಚಿರುವ ಕ್ಷೇತ್ರಗಳಿಂದ 10 ಸಾವಿರಕ್ಕೂ ಅಧಿಕ ಜನರು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆ ಪ್ರತಿ ತಾಲೂಕುಗಳಿಂದ ಕನಿಷ್ಠ 30 ರಿಂದ 50 ಬಸ್‌ಗಳು ಬುಕ್ಕಿಂಗ್‌ ಮಾಡಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆಯ ಒಂದು ಸಾವಿರಕ್ಕೂ ಅಧಿಕ ಬಸ್‌ ಸೇರಿ, 5000ಕ್ಕೂ ಅಧಿಕ ಖಾಸಗಿ ಬಸ್‌ಗಳನ್ನು ಬುಕ್ಕಿಂಗ್‌ ಆಗಿವೆ ಎನ್ನಲಾಗಿದೆ.

ಕೆಎಸ್‌ಆರ್‌ಟಿಸಿ 1300 ಬಸ್‌, 2 ಕೋಟಿ ಆದಾಯ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದಲೇ ಒಂದು ಸಾವಿರಕ್ಕೂ ಅಧಿಕ ವಿಶೇಷ ಬಸ್‌ಗಳು ಬುಕ್ಕಿಂಗ್‌ ಆಗಿವೆ. ಈ ಪೈಕಿ ಕೆಎಸ್‌ಆರ್‌ಟಿಸಿಯಿಂದ 700, ವಾಯವ್ಯ ಕರ್ನಾಟಕ ಸಾರಿಗೆಯಿಂದ 400, ಕಲ್ಯಾಣ ಕರ್ನಾಟಕ ಸಾರಿಗೆಯಿಂದ 200ಕ್ಕೂ ಅಧಿಕ ಬಸ್‌ ದಾವಣಗೆರೆಗೆ ತೆರಳುತ್ತಿವೆ. ಈ ಮೂಲಕ ಸಂಸ್ಥೆಗೆ ಒಂದರಿಂದ ಎರಡು ಕೋಟಿ ರು. ಆದಾಯ ಬರಲಿದೆ ಎಂದು ಸಾರಿಗೆ ಸಂಸ್ಥೆಗಳ ಅಧಿಕಾರಿಗಳು ತಿಳಿಸಿದ್ದಾರೆ.

Latest Videos

ಸಿದ್ದರಾಮೋತ್ಸವ ಬ್ಯಾನರ್‌ನಲ್ಲಿ ಬಿಜೆಪಿ ಶಾಸಕ ರಾಜೂಗೌಡ ಭಾವಚಿತ್ರ: ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

ದಾವಣಗೆರೆಯತ್ತ 30000 ವಾಹನ ದಂಡು: ಬಸ್‌ಗಳು ಮಾತ್ರವಲ್ಲದೆ ಸಾಕಷ್ಟುಲಾರಿ, ಟೆಂಪೋ, ಕ್ರೂಜರ್‌, ಕಾರ್‌ಗಳನ್ನು ಬುಕ್ಕಿಂಗ್‌ ಮಾಡಲಾಗಿದೆ. ಕಾಂಗ್ರೆಸ್‌ನ ಗ್ರಾಮಪಂಚಾಯ್ತಿ ಸದಸ್ಯನಿಂದ ಹಿಡಿದು ಜಿಲ್ಲಾ ಪಂಚಾಯ್ತಿ ಸದಸ್ಯರು ತಮ್ಮದೇ ಸ್ವಂತ ವಾಹನದಲ್ಲಿ ಆಪ್ತರೊಂದಿಗೆ ತೆರಳಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆ ಬುಧವಾರ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ 30 ಸಾವಿರಕ್ಕೂ ಅಧಿಕ ವಾಹನಗಳು ದಾವಣಗೆರೆಗೆ ತೆರಳುವ ಸಾಧ್ಯತೆಗಳಿವೆ.

ಬೀದರ್‌ನಿಂದ ಹೊರಡಲಿದೆ ವಿಶೇಷ ರೈಲು: ಬೀದರ್‌ನಿಂದ ದಾವಣಗೆರೆಗೆ ವಿಶೇಷ ರೈಲು ಕಲ್ಪಿಸಲಾಗಿದೆ. ಮಂಗಳವಾರ (ಆಗಸ್ಟ್‌ 2) ಮಧ್ಯಾಹ್ನ 2ಕ್ಕೆ ಬೀದರ್‌ನಿಂದ ಹೊರಡುವ ರೈಲು ಬುಧವಾರ ಬೆಳಿಗ್ಗೆ 5.30ಕ್ಕೆ ದಾವಣಗೆರೆ ತಲುಪಲಿದೆ. ಬುಧವಾರ ಸಂಜೆ 6ಕ್ಕೆ ದಾವಣಗೆರೆಯಿಂದ ಹೊರಟು ಗುರುವಾರ ಬೆಳಿಗ್ಗೆ 10.30ಕ್ಕೆ ಬೀದರ್‌ ತಲುಪಲಿದೆ. ಈ ರೈಲು ಗುಂತಕಲ್‌, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲಿದೆ.

ಸಿದ್ದು ಜನ್ಮದಿನ ಖಾಸಗಿ ಕಾರ್ಯಕ್ರಮ: ಡಿ.ಕೆ.ಶಿವಕುಮಾರ್‌

ಅಭಿಮಾನಿಗಳಿಗೆ 38000 ಕೊಠಡಿ ಮೀಸಲು: ದೂರದ ಊರುಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಕಾರ್ಯಕರ್ತರಿಗೆ, ಅತಿಥಿಗಳಿಗೆ ತಂಗಲು ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ಜಿಲ್ಲೆಗಳ ಪ್ರಮುಖ ನಗರ, ಪಟ್ಟಣಗಳ ಐಶಾರಾಮಿ ಹೋಟೆಲ್‌, ರೆಸಾರ್ಚ್‌, ಹೋಂ ಸ್ಟೇ, ಲಾಡ್ಜ್‌ಗಳ ರೂಂಗಳನ್ನು ಮಂಗಳವಾರ ಮತ್ತು ಬುಧವಾರಕ್ಕೆ ಬುಕ್ಕಿಂಗ್‌ ಮಾಡಲಾಗಿದೆ. ಜತೆಗೆ ದಾವಣಗೆರೆ ಜಿಲ್ಲೆಗಳಲ್ಲಿರುವ ಕುರುಬ ಸೇರಿದಂತೆ ವಿವಿಧ ಸಮುದಾಯಗಳ ಮಠಗಳು, ಧರ್ಮ ಛತ್ರಗಳು, ಕಲ್ಯಾಣ ಮಂಟಪಗಳಲ್ಲಿಯೂ ಕೂಡಾ ಕಾರ್ಯಕರ್ತರು ತಂಗಲು ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 38 ಸಾವಿರ ರೂಂಗಳನ್ನು ಬುಕ್ಕಿಂಗ್‌ ಮಾಡಲಾಗಿದೆ ಎಂದು ಆಯೋಜನಕರು ತಿಳಿಸಿದ್ದಾರೆ.

click me!