ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ, 13 ಅಂಶಗಳು ಉಲ್ಲೇಖ

Published : Aug 19, 2020, 05:25 PM ISTUpdated : Aug 19, 2020, 06:39 PM IST
ಯಡಿಯೂರಪ್ಪಗೆ ಪತ್ರ ಬರೆದ ಸಿದ್ದರಾಮಯ್ಯ, 13 ಅಂಶಗಳು ಉಲ್ಲೇಖ

ಸಾರಾಂಶ

ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪಗೆ ಮತ್ತೊಂದು ಪತ್ರ ಬರೆದಿದ್ದಾರೆ. ಏನದು ಪತ್ರ..? ಪತ್ರದಲ್ಲೇನಿದೆ..? ಎನ್ನುವುದು ಈ ಕೆಳಗಿನಂತಿದೆ ನೋಡಿ 

ಬೆಂಗಳೂರು, (ಆ.19): ನಗರದ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. 

'ಬಿಜೆಪಿ ಸ್ಪಷ್ಟವಾಗಿ ಎರಡು ಗುಂಪುಗಳಾಗಿ ಒಡೆದುಹೋಗಿದೆ'

13 ಅಂಶಗಳನ್ನೊಳಗೊಂಡ ಪತ್ರ ಬರೆದಿರುವ ಸಿದ್ದರಾಮಯ್ಯ, ಹಲವು ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗಾದ್ರೆ ಸಿದ್ದು ಬರೆದ ಪತ್ರದಲ್ಲೇನಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಮಾನ್ಯ ಶ್ರೀ ಯಡಿಯೂರಪ್ಪ ರವರೆ,

"

ಬೆಂಗಳೂರಿನ ಕೆ.ಜೆ.ಹಳ್ಳಿ ಮತ್ತು ಡಿ.ಜಿ.ಹಳ್ಳಿ ವ್ಯಾಪ್ತಿಯಲ್ಲಿ ಆಗಸ್ಟ್ 11 ರಂದು ನಡೆದ ಘಟನೆಗಳಿಗೆ ಸರ್ಕಾರದ ವೈಫಲ್ಯವೇ ನೇರ ಕಾರಣ. ಗುಪ್ತಚರ ಇಲಾಖೆಯ ವೈಫಲ್ಯವೂ ಇದರಲ್ಲಿ ಎದ್ದು ಕಾಣುತ್ತಿದೆ. ಸರ್ಕಾರ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವುದು ಬಿಟ್ಟು ವಿರೋಧ ಪಕ್ಷವಾದ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದೆ. 

1) ಡಿ.ಜೆ.ಹಳ್ಳಿಯ ಘಟನೆಯ ನೈತಿಕ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು.  ಆಡಳಿತ ಕೇಂದ್ರದ ಕೈಯಳತೆ ದೂರದಲ್ಲಿರುವ ಈ ಪ್ರದೇಶದಲ್ಲಾದ ಅನಾಹುತವನ್ನು ನಿಭಾಯಿಸಲು ಆಗಲಿಲ್ಲವೆಂದರೆ ಸರ್ಕಾರ ಯಾಕಿರಬೇಕು. ಪ್ರವಾದಿಯವರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರ ಕುರಿತು ದೂರು ಬಂದ ತಕ್ಷಣ ಪೊಲೀಸರು ಕ್ರಮ ಕೈಗೊಂಡಿದ್ದರೆ ಈ ಅನಾಹುತಕ್ಕೆ ಅವಕಾಶ ಇರುತ್ತಿರಲಿಲ್ಲ. 

2) ಪ್ರವಾದಿಯವರ ಬಗೆಗೆ ಕೆಟ್ಟ ಚಿತ್ರ ರಚಿಸಿ ನವೀನ್ ಎಂಬ ಹುಡುಗನಿಗೆ ಕೊಟ್ಟವರಾರು? ಆ ಚಿತ್ರಗಳು ಸೋಷಿಯಲ್ ಮೀಡಿಯಾಗಳಿಗೆ ಬಿತ್ತರಿಸಲು ಕಾರಣರಾದವರು ಯಾರ್ಯಾರು ? ಇದರ ಹಿಂದೆ ದೊಡ್ಡ ಪಿತೂರಿ ಇದ್ದಂತಿದೆ.  ಈ ಕುರಿತು ಸಮರ್ಪಕವಾದ ತನಿಖೆಯಾಗಬೇಕು. 

3) ಪ್ರಾಮಾಣಿಕರು, ದಕ್ಷರು ಅನ್ನಿಸಿಕೊಂಡ ಹಲವು ಪೊಲೀಸ್ ಅಧಿಕಾರಿಗಳನ್ನು ‘ನಾನ್ ಎಕ್ಸಿಕ್ಯೂಟಿವ್’ ಹುದ್ದೆಗಳಲ್ಲಿ ಕೂರಿಸಿದ್ದೀರಿ. ಭ್ರಷ್ಟರು, ಅಸೂಕ್ಷ್ಮರು ಆದ ಹಲವರಿಗೆ ಆಯಕಟ್ಟಿನ ಹುದ್ದೆಗಳನ್ನು ನೀಡಲಾಗಿದೆ. ಹೀಗಾಗಿ  ಸೂಕ್ಮವಾದ ಇಂಥ ಘಟನೆಗಳನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. 

4) ಘಟನೆ ನಡೆದಿರುವುದು ಅತ್ಯಂತ ಸೂಕ್ಷ್ಮ ಪ್ರದೇಶದಲ್ಲಿ (ಈ ಹಿಂದೆಯೂ ಈ ಪ್ರದೇಶಗಳಲ್ಲಿ ಸಮಸ್ಯೆಗಳಾಗಿದ್ದವು) ಮತ್ತು ಘಟನೆಗೆ ಕಾರಣವಾದ ವಿಷಯವೂ ಅತ್ಯಂತ ಸೂಕ್ಷ್ಮವಾಗಿತ್ತು. ಇದನ್ನು ನಿರ್ಲಕ್ಷಿಸಲು ಕಾರಣವೇನು?

5) ಶಾಸಕರ ಮನೆಯನ್ನು, ಪೊಲೀಸ್ ಠಾಣೆಯನ್ನು ರಕ್ಷಿಸಿಕೊಳ್ಳಲಾಗದ ಸರ್ಕಾರದಿಂದ ರಾಜ್ಯದ ಜನರಿಗೆ ಯಾವ ರಕ್ಷಣೆಯನ್ನು ನೀಡಲು ಸಾಧ್ಯ? ಇದರ ಜವಾಬ್ದಾರಿಯನ್ನು ಸರ್ಕಾರ ಹೊರುವುದನ್ನು ಬಿಟ್ಟು  ತಲೆಕೆಟ್ಟ. ಹುಡುಗರ ಮೇಲೆ ಹೊರಿಸಿ ತಮ್ಮ ಸರ್ಕಾರ ಅತ್ಯಂತ ಸಮರ್ಥವಾಗಿದೆ ಎಂದು ಹೇಳುವುದು ಅತ್ಯಂತ ದುಷ್ಟ ಮತ್ತು ನಿರ್ಲಜ್ಜ ರಾಜಕಾರಣದ ಪರಮಾವಧಿಯ ನಿಲುವು. 

6) ಗೃಹ ಸಚಿವರನ್ನು ಭೇಟಿಯಾದ ಕರಾವಳಿಯ ಕೋಮುವಾದಿಯೊಬ್ಬನಿಗೆ, ಸಚಿವರು ನಿಮ್ಮ ಮೇಲಿನ ಎಲ್ಲಾ ಪ್ರಕರಣ ವಾಪಸ್ಸು ತೆಗೆದುಕೊಳ್ಳುತ್ತೇವೆಂದು ಹೇಳುವ ಮಾತುಕತೆಯೊಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದು ನಿಜವೇ ಆಗಿದ್ದರೆ ಸಮಾಜದ ಸ್ವಾಸ್ಥ್ಯವನ್ನು ನಿಮ್ಮ ಸರ್ಕಾರ ಕಾಪಾಡಲು ಸಾಧ್ಯವೆ? 

7) ನೀವು ಅಧಿಕಾರಕ್ಕೆ ಬಂದ ಮೇಲೆ ಎಷ್ಟು ಜನರನ್ನು ಕಮ್ಯುನಲ್ ಗೂಂಡಾಗಳೆಂದು ಗುರುತಿಸಿದ್ದೀರಿ? ಎಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡಿದ್ದೀರಿ? ಈ ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಸಂಘಟನೆಗಳನ್ನು ನಿಷೇಧಿಸುವ ತಾಕತ್ತನ್ನು ನೀವು ಪ್ರದರ್ಶಿಸಲು ಸಾಧ್ಯವೆ? ನಿಮ್ಮ ಕಡತದಲ್ಲಿನ ದಾಖಲೆಗಳ ಪ್ರಕಾರ ನಿಮ್ಮದೇ ಪಕ್ಷದ ಅಂಗ ಸಂಘಟನೆಗಳು ಕಮ್ಯುನಲ್ ಚಟುವಟಿಕೆಗಳಲ್ಲಿ ತೊಡಗಿ ಅಸಂಖ್ಯಾತ ಪ್ರಕರಣಗಳಿವೆ. ಈ ಎಲ್ಲರ ಮೇಲೆಯೂ ನಿರ್ದಾಕ್ಷಿಣ್ಯವಾಗಿ ಕ್ರಮವಹಿಸಿ ನಾವು ಈ ವಿಷಯದಲ್ಲಿ ನಿಮ್ಮ ಜೊತೆ ಇರುತ್ತೇವೆ. 

8) ಹಿಂದೆ ಮುಂದೆ ನೋಡದೆ ಜನರನ್ನು ಧರ್ಮದ ಆಧಾರದ ಮೇಲೆ ದೊಂಬಿಯೆಬ್ಬಿಸಲು ಪ್ರಯತ್ನಿಸಿದ ಶೃಂಗೇರಿಯ ಜೀವರಾಜ್ ಅವರ ಮೇಲೂ ಪ್ರಕರಣ ದಾಖಲಿಸಿ ಕ್ರಮವಹಿಸಿ. ಶೃಂಗೇರಿಯಲ್ಲಿ ಆರೋಪಿ ಪತ್ತೆಯಾಗುವ ಮೊದಲೇ ಅಪರಾಧಿಗಳು ಯಾರು ಎಂದು ಬಿ.ಜೆ.ಪಿ. ತೀರ್ಮಾನಿಸಿತ್ತು. ಬಡ ತರಕಾರಿ ವ್ಯಾಪಾರಿಗಳು/ಬೀದಿ ಬದಿಯ ವ್ಯಾಪಾರಿಗಳೇ ಈ ಕೃತ್ಯ ಮಾಡಿರುವುದೆಂದು ಅವರ ತಲೆಗೆ ಅಪರಾಧÀವನ್ನು ಕಟ್ಟಲಾಗಿತ್ತು. ಮಸೀದಿಯಲ್ಲಿ ಸಿ.ಸಿ.ಟಿವಿಗಳು ಇರದಿದ್ದರೆ ಬಜರಂಗದಳದ ಮಾಜಿ ಕಾರ್ಯಕರ್ತನ ಬದಲಿಗೆ ಇನ್ಯಾರೋ ಇರುತ್ತಿದ್ದರು. 

9) ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟ ಮಾಡಿದವರಿಂದ ನಷ್ಟ ವಸೂಲು ಮಾಡುವುದು ಒಳ್ಳೆಯ ವಿಚಾರವೇ. ಆದರೆ ಇದು ಒಂದು ಗುಂಪಿಗೆ, ಒಂದು ಘಟನೆಗೆ ಮಾತ್ರ ಸಂಬಂಧಿಸಿರಬಾರದು. ಹಾಗೆ ಮಾಡುವುದಾದರೆ ಪೂರ್ವಾನ್ವಯಗೊಳಿಸಬೇಕು. ಕಳೆದ ಮೂವತ್ತು ವರ್ಷಗಳಿಂದೀಚೆಗೆ ಕಮ್ಯುನಲ್ ಮತ್ತಿತರ ಗಲಭೆಗಳಲ್ಲಿ ಮಾಡಿರುವ ಹಾನಿಯ ನಷ್ಟವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕೆಂದು ಆಗ್ರಹಿಸುತ್ತೇನೆ.

10) ಆಡಳಿತ ಪಕ್ಷವೊಂದು ಸತ್ಯ ಶೋಧನಾ ತಂಡ ರಚಿಸುವುದು ಪ್ರಜಾಪ್ರಭುತ್ವದ ಭೀಕರ ಅಪಹಾಸ್ಯದಂತೆ ಕಾಣುತ್ತಿದೆ. ಆಡಳಿತ ಪಕ್ಷವೊಂದು ಸತ್ಯ ಶೋಧನೆ ಮಾಡುತ್ತೇನೆಂದು ಹೊರಟರೆ ಅದು ತನಿಖೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

11) ನಿಮ್ಮ ಸರ್ಕಾರಕ್ಕೆ ಪೊಲೀಸರ ಮೇಲೆ ನಂಬಿಕೆ ಇಲ್ಲವೆ?  ನಿಮ್ಮ ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲದಿದ್ದರೆ ಅವರಿಗೆ ಜನರ ತೆರಿಗೆಯ ಹಣದಲ್ಲಿ ಸಂಬಳ, ಸಾರಿಗೆ ಮುಂತಾದ ಸವಲತ್ತುಗಳನ್ನು ಯಾಕೆ ಕೊಡತ್ತಿದ್ದೀರಿ? ಮುಲಾಜಿಲ್ಲದೆ ಅವರನ್ನು ಮನೆಗೆ ಕಳಿಸಿ.

12) ಘಟನೆಯಲ್ಲಿ ಎಸ್‍ಡಿಪಿಐ ಪಾತ್ರ ಇದೆ ಎಂದು ಹೇಳಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಯಾವ ಸಂಘಟನೆಯೇ ತಪ್ಪು ಮಾಡಿದ್ದರೂ ಸಮರ್ಪಕವಾದ ತನಿಖೆ ನಡೆಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇನೆ. 

13) ಈ ಘಟನೆಯ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕಾದರೆ ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಗಳಿಂದಲೇ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. 

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,

(ಸಿದ್ದರಾಮಯ್ಯ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ
ಉತ್ತರ ಕರ್ನಾಟಕಕ್ಕೆ ಕೊಟ್ಟ ಭರವಸೆ ಈಡೇರಿಕೆ ಬಗ್ಗೆ ಶ್ವೇತಪತ್ರ ಹೊರಡಿಸಿ: ಆರ್‌.ಅಶೋಕ್‌