ಎಸ್. ಗಿರೀಶ್ ಬಾಬು
ಬೆಂಗಳೂರು (ನ.4) : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸ್ಪರ್ಧೆಯ ಕ್ಷೇತ್ರ ಯಾವುದು ಎಂಬ ಬಗ್ಗೆ ಇನ್ನೂ ತುಟಿ ಬಿಚ್ಚದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೇ ನವೆಂಬರ್ 13ರಂದು ಜನರ ನಾಡಿ ಮಿಡಿತ ಅರಿಯಲು ಮುಂದಾಗಿದ್ದಾರೆ.
undefined
ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವಿದೆ: ಸಿದ್ದರಾಮಯ್ಯ
ಕೋಲಾರದಿಂದಲೇ ಸ್ಪರ್ಧಿಸಿ ಎಂಬ ಜಿಲ್ಲೆಯ ಕಾಂಗ್ರೆಸ್ ನಾಯಕರ ತೀವ್ರ ಒತ್ತಡ ಹಿನ್ನೆಲೆಯಲ್ಲಿ ನ.13ರಂದು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶವೊಂದನ್ನು ನಡೆಸಲು ಮುಂದಾಗಿರುವ ಸಿದ್ದರಾಮಯ್ಯ ಅವರು ಅದೇ ದಿನ ಕೋಲಾರದ ಪ್ರಸಿದ್ಧ ಕುರುಡು ಮಲೆ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಿದ್ದಾರೆ. ಅಲ್ಲದೆ, ಜಿಲ್ಲೆಯ ಒಕ್ಕಲಿಗರ ಆರಾಧ್ಯ ದೈವ ಹಾಗೂ ಮಾಜಿ ಸಚಿವ ಕೃಷ್ಣ ಬೈರೇಗೌಡರ ಮನೆ ದೇವರಾದ ಸೀತಿ ಬೆಟ್ಟ(ಕಾಲಭೈರವ ದೇವಾಲಯ)ದಲ್ಲೂ ಪೂಜೆ ಮಾಡಿಸಲಿದ್ದಾರೆ. ಜತೆಗೆ, ಚಚ್‌ರ್ ಹಾಗೂ ಮಸೀದಿಯೊಂದಕ್ಕೆ ಭೇಟಿ ನೀಡಲಿದ್ದು, ಅನಂತರ ಸಮಾವೇಶವೊಂದರಲ್ಲೂ ಪಾಲ್ಗೊಳ್ಳಲಿದ್ದಾರೆ.
ಸಿದ್ದರಾಮಯ್ಯ ಹೀಗೆ ಕೋಲಾರದಲ್ಲಿ ಟೆಂಪಲ್ ರನ್ ಹಾಗೂ ಸಮಾವೇಶ ಆಯೋಜಿಸಿರುವುದನ್ನು ಕೋಲಾರ ರಂಗಪ್ರವೇಶ ಎಂದೇ ಅವರ ಆಪ್ತರು ಬಣ್ಣಿಸುತ್ತಾರೆ. ಹಾಗಂತ ಅವರು ಕೋಲಾರದಲ್ಲಿ ಸ್ಪರ್ಧಿಸುವುದು ನಿಶ್ಚಯವಾಗಿದೆಯೇ ಎಂದು ಪ್ರಶ್ನಿಸಿದರೆ ಈ ವಿಚಾರದ ಬಗ್ಗೆ ಸಿದ್ದರಾಮಯ್ಯ ಏನನ್ನೂ ಹೇಳುತ್ತಿಲ್ಲ ಎಂದೇ ಆಪ್ತರು ಹೇಳುತ್ತಾರೆ.
ಆದರೆ, ಕೋಲಾರ ಅಥವಾ ವರುಣಾ ಕ್ಷೇತ್ರ ಈ ಎರಡು ಕ್ಷೇತ್ರಗಳ ಪೈಕಿ ಒಂದನ್ನು ಸಿದ್ದರಾಮಯ್ಯ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬುದು ಅವರ ಅಂಬೋಣ. ಹೀಗೆ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಅವರಲ್ಲಿ ಗೊಂದಲ ಮೂಡಲು ಕಾರಣ ಅವರ ವಿರುದ್ಧ ಒಗ್ಗೂಡಿರುವ ವಿರೋಧಿ ಶಕ್ತಿಗಳು.
ಕಳೆದ ಚುನಾವಣೆಯಲ್ಲಿ ತಮ್ಮ ನೆಚ್ಚಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಲು ವಿರೋಧಿ ಶಕ್ತಿಗಳು ಒಂದಾಗಿದ್ದೇ ಕಾರಣ ಎಂಬುದನ್ನು ಅನುಭವದಿಂದ ಬಲ್ಲ ಸಿದ್ದರಾಮಯ್ಯ ಅವರಿಗೆ ತಾವು ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಬಿಂಬಿತವಾಗಿರುವ ಅರಿವು ಇದೆ. ಹೀಗಾಗಿ ತಮ್ಮ ಸೋಲಿನ ಸೂತ್ರ ರೂಪಿಸಲು ವಿರೋಧಿ ಶಕ್ತಿಗಳು ಖಚಿತವಾಗಿ ಒಗ್ಗೂಡುತ್ತವೆ ಎಂಬ ಬಗ್ಗೆ ಅವರಿಗೆ ಅನುಮಾನವಿಲ್ಲ. ಹೀಗಾಗಿಯೇ ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದ ಬದಲಿಗೆ ಸಮೀಪದ ಕ್ಷೇತ್ರದ ಅನ್ವೇಷಣೆಯನ್ನು ಸಿದ್ದರಾಮಯ್ಯ ಆರಂಭಿಸಿದ್ದರು. ಆಗ ವರುಣಾ, ಕೋಲಾರ, ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರಗಳ ಆಯ್ಕೆ ಅವರ ಮುಂದಿತ್ತು.
ಮುಸ್ಲಿಂ ಬಾಹುಳ್ಯ ಕ್ಷೇತ್ರವಾದ ಚಾಮರಾಜಪೇಟೆಯಲ್ಲಿ ಸ್ಪರ್ಧೆ ಬೇಡ ಎಂಬ ನಿರ್ಧಾರವನ್ನು ಸಿದ್ದರಾಮಯ್ಯ ಅವರೇ ತೆಗೆದುಕೊಂಡಿದ್ದರು. ಇದಕ್ಕೆ ಕಾರಣ ಮುಸ್ಲಿಂ ಮತ ಬಾಹುಳ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸಿದ್ದರಾಮಯ್ಯ ಅವರಿಗೆ ಹಿಂದು ಮತಗಳ ಮೇಲೆ ನಂಬಿಕೆಯಿಲ್ಲ ಎಂದು ಬಿಂಬಿಸಲು ಬಿಜೆಪಿಗೆ ಅವಕಾಶ ಸಿಗುತ್ತದೆ ಎಂಬುದು. ಹೀಗಾಗಿ ಕೋಲಾರ ಹಾಗೂ ವರುಣಾ ಕ್ಷೇತ್ರ ಪ್ರಧಾನ ಆಯ್ಕೆಯಾದವು.
ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹಾಲಿ ಶಾಸಕರಾಗಿರುವ ವರುಣಾ ಸಿದ್ದರಾಮಯ್ಯ ಅವರ ಮೂಲ ಕ್ಷೇತ್ರ. ಇಲ್ಲಿ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಕುಟುಂಬದವರು ವರುಣಾವನ್ನೇ ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಲಿಂಗಾಯತ ಮತ ಬಾಹುಳ್ಯವುಳ್ಳ ಈ ಕ್ಷೇತ್ರದಲ್ಲಿ ಈ ಬಾರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಜತೆಗೆ, ತಮ್ಮ ಪುತ್ರ ಭವಿಷ್ಯ ಕಂಡುಕೊಂಡಿರುವ ಕ್ಷೇತ್ರಕ್ಕೆ ತಾವು ಹೋಗಬೇಕೋ ಅಥವಾ ಬೇಡವೋ ಎಂಬ ಗೊಂದಲ ಸಿದ್ದರಾಮಯ್ಯ ಅವರಿಗೆ ಇದ್ದಂತಿದೆ.
ಇನ್ನು ಕೋಲಾರ ಅತ್ಯಂತ ಪ್ರಶಸ್ತ ಕ್ಷೇತ್ರ. ಇಲ್ಲಿಂದಲೇ ಸ್ಪರ್ಧಿಸಬೇಕು ಎಂದು ಆಪ್ತರು ಹಾಗೂ ಕೋಲಾರ ಕಾಂಗ್ರೆಸ್ ನಾಯಕರು ಒತ್ತಡ ನಿರ್ಮಾಣ ಮಾಡಿದ್ದಾರೆ. ಒಕ್ಕಲಿಗರು ಈ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರೂ ಕುರುಬರು ಹಾಗೂ ಇತರೆ ಹಿಂದುಳಿದ ವರ್ಗದವರು ಉತ್ತಮ ಸಂಖ್ಯೆಯಲ್ಲಿದ್ದಾರೆ. ಇದಲ್ಲದೆ, ಮುಸ್ಲಿಮರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಕ್ಷೇತ್ರದ ಬಗ್ಗೆ ಹೈದರಾಬಾದ್ ಮೂಲದ ಎನ್‌ಪಿಎ ಪೊಲಿಟಿಕಲ್ ಅನಾಲಿಸಿಸ್ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಅದರ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಅದರ ಪ್ರಕಾರ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಿದರೆ ಎಲ್ಲ ಜಾತಿ ವರ್ಗದ ಬೆಂಬಲ ಸಿಗುತ್ತದೆ. ಒಟ್ಟಾರೆ, ಶೇ.63ರಷ್ಟುಬೆಂಬಲ ಸಿದ್ದರಾಮಯ್ಯ ಅವರಿಗೆ ಇದೆ ಎಂದು ವರದಿ ನೀಡಿದೆ.
ಬಿಜೆಪಿ ಸರ್ಕಾರದಿಂದ ಜನಕಲ್ಯಾಣ ಸಾಧ್ಯವಿಲ್ಲ; ಸಿದ್ದರಾಮಯ್ಯ
ಈ ಅಂಶ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದ ನಾಡಿ ಮಿಡಿತವನ್ನು ಪ್ರತ್ಯಕ್ಷ ನೋಡಲು ಪ್ರೇರಣೆ ನೀಡಿದ್ದು, ಇದರ ಪರಿಣಾಮವಾಗಿ ನ.13ರಂದು ಅವರು ಕೋಲಾರದಲ್ಲಿ ಟೆಂಪಲ್ ರನ್ ಹಾಗೂ ಸಮಾವೇಶ ಆಯೋಜಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.