ಚಾಮರಾಜನಗರ ಆಸ್ಪತ್ರೆ ದುರಂತ: ಸಿದ್ದರಾಮಯ್ಯ ಮುಂದೆ ಸತ್ಯ ಒಪ್ಪಿಕೊಂಡ್ರಾ ಡಿಸಿ?

By Suvarna NewsFirst Published May 4, 2021, 2:40 PM IST
Highlights

ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ಮರಣ ಮೃದಂಗ ನಡೆದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. 

ಚಾಮರಾಜನಗರ, (ಮೇ.04): ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ ಮೃತಪಟ್ಟ 24 ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಆಕ್ಸಿಜನ ಕೊರತೆಯಿಂದ 24 ಗಂಟೆಗಳಲ್ಲಿ 24 ಕೊರೋನಾ ಸೋಂಕಿತರು ಮೃತಪಟ್ಟ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು (ಮಂಗಳವಾರ) ಆಸ್ಪತ್ರೆಗೆ ಭೇಟಿ ಅಧಿಕಾರಿಗಳ ಜೊತೆ ಚರ್ಚಿಸಿದರು.

'ಚಾಮರಾಜನಗರದಲ್ಲಿ ಸತ್ತದ್ದು 24 ಅಲ್ಲ, 34 ಮಂದಿ: ಅಧಿಕಾರಿಗಳು ಮಾಹಿತಿ ಮುಚ್ಚಿಟ್ಟಿದ್ದಾರೆ'

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದು, ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಸಂಖ್ಯೆ 24 ಅಲ್ಲ. 28 ಜನರು. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಆಸ್ಪತ್ರೆಯ ಡೀನ್ ನನ್ನ ಮುಂದೆ ಒಪ್ಪಿಕೊಂಡಿದ್ದಾರೆ  ಎಂದು ಬಾಂಬ್ ಸಿಡಿಸಿದರು. 

ನಿನ್ನೆ (ಸೋಮವಾರ) ಆರೋಗ್ಯ ಸಚಿವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವುದು ಕೇವಲ 3 ಮಾತ್ರ ಎಂದು ಹೇಳಿರುವುದು ಶುದ್ಧ ಸುಳ್ಳು.ಚಾಮರಾಜನಗರ ಆಸ್ಪತ್ರೆಯಲ್ಲಿ 28 ಜನರು ಮೃತಪಟ್ಟಿರುವುದು ಆಮ್ಲಜನಕದ ಕೊರತೆಯಿಂದ ಎಂಬುದು ಮಾಹಿತಿ. ಆದರೆ ಆರೋಗ್ಯ ಸಚಿವರು ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಚಾಮರಾಜನಗರ ಆಸ್ಪತ್ರೆ ದುರಂತ: ಆಕ್ಸಿಜನ್‌ನಿಂದ ಸತ್ತಿಲ್ಲ ಎಂದು ಸರ್ಟಿಫಿಕೇಟ್ ಕೊಟ್ಟ ಸಚಿವರು

ಈ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಆಕ್ಸಿಜನ್‌ ಕೊರತೆಯಿಂದ 24 ಜನರು ಸತ್ತಿಲ್ಲ.ಬದಲಾಗಿ ಕೇವಲ 3 ಸಾವನ್ನಪ್ಪಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದರು.

ಇನ್ನು ಈ ಪ್ರಕರಣವನ್ನು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದ್ದು, ಕೆಎಸ್‌ಆರ್‌ಟಿಸಿ ಎಂ.ಡಿ. ಶಿವಯೋಗಿ ಕಳಸದ ಅವರನ್ನ ತನಿಖಾಧಿಕಾರಿಯನ್ನಾಗ ನೇಮಕ ಮಾಡಿದೆ.

click me!