
ಮಂಡ್ಯ (ಮೇ.09): 2028ರವರೆಗೂ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ, ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಇದ್ದು ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸಲಿದೆ ಎಂದು ಸಿದ್ದು ಪೂರ್ಣಾವಧಿ ಸಿಎಂ ಎಂಬ ಕೂಗನ್ನು ಸಚಿವ ಭೈರತಿ ಸುರೇಶ್ ಮತ್ತೆ ಮುಖ್ಯವಾಹಿನಿಗೆ ತಂದರು. ನಗರದ ಜಿಲ್ಲಾ ಕುರುಬರ ಸಂಘದ ಆವರಣದಲ್ಲಿ ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡಕ್ಕೆ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್ ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಕಾಂಗ್ರೆಸ್ ಎಂಬ ಪರಿಸ್ಥಿತಿ ಇದೆ. ಅವರಿಲ್ಲದಿದ್ದರೆ ಕಾಂಗ್ರೆಸ್ ಇಷ್ಟೊಂದು ಶಾಸಕ ಸ್ಥಾನಗಳನ್ನು ಗೆಲ್ಲಲಾಗುತ್ತಿರಲಿಲ್ಲ. ಸಿದ್ದರಾಮಯ್ಯನವರ ವರ್ಚಸ್ಸು ಉಪ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವನ್ನು ತಂದುಕೊಟ್ಟಿತು. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಪ್ರೀತಿ ತೋರಿಸಿದೆ. ಸಿಎಂ ಆಗುವುದಕ್ಕೆ ಅವರು ಒಂದು ರುಪಾಯಿ ಖರ್ಚು ಮಾಡಲಿಲ್ಲ. ಪಕ್ಷದ ಆಂತರಿಕ ಪ್ರಜಾಪ್ರಭುತ್ವದಡಿ ಲಕೋಟೆಯಲ್ಲಿ ಸಿದ್ದರಾಮಯ್ಯ ಹೆಸರು ಬಂದಿತು ಹಾಗಾಗಿ ಸಿದ್ದರಾಮಯ್ಯ ಇರುವವರೆಗೂ ಕಾಂಗ್ರೆಸ್‌ನೊಳಗೆ ಎಲ್ಲವೂ ಚೆನ್ನಾಗಿರಲಿದೆ ಎಂದರು.
ಆಪರೇಷನ್ ಸಿಂದೂರಕ್ಕೆ ಪ್ರಶಂಸೆ: ಪಹಲ್ಗಾಂನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದಕರ ಕುಕೃತ್ಯಕ್ಕೆ ಪ್ರತೀಕಾರವಾಗಿ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿರುವ ಭಾರತೀಯ ಸೇನೆಯ ಪರಾಕ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ, ಭಾರತೀಯ ಸೇನೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಮೂಲಕ ಶಕ್ತಿ ಪ್ರದರ್ಶನದ ಜೊತೆಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಈ ಮೂಲಕ ಭಯೋತ್ಪಾದನೆ ಮೂಲಕ ಭಾರತದ ಶಾಂತಿಗೆ ಧಕ್ಕೆ ತರಲು ಯತ್ನಿಸಿದರೆ ಉಳಿಗಾಲ ಇಲ್ಲ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ ಎಂದು ತಿಳಿಸಿದ್ದಾರೆ.
ಸಚಿವ ಬೈರತಿ ಸುರೇಶ್ ಫೇಸ್‌ಬುಕ್ ಖಾತೆ ಹ್ಯಾಕ್: ಎಫ್‌ಐಆರ್ ದಾಖಲು
ವಿವಿಧ ಕಾಮಗಾರಿಗಳಿಗೆ ಚಾಲನೆ: ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವ ಬೈರತಿ ಸುರೇಶ್ ಅವರು ಶನಿವಾರ ತಮ್ಮ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ರಾಧಾಕೃಷ್ಣ ದೇವಸ್ಥಾನ ವಾರ್ಡ್‌ನ ನಾಗಶೆಟ್ಟಿಹಳ್ಳಿ ಬಸ್ ನಿಲ್ದಾಣದ ಬಳಿಯ ಬಳ್ಳಾರಿ ಮುಖ್ಯರಸ್ತೆಯಿಂದ ಅಶ್ವತ್ ನಗರ, ಗೆದ್ದಲಹಳ್ಳಿ, ನಾಗಶೆಟ್ಟಿಹಳ್ಳಿ, ಭದ್ರಪ್ಪ ಲೇಔಟ್‌ವರೆಗೆ ಹಾಗೂ ವಿ.ನಾಗೇನಹಳ್ಳಿ ವಾರ್ಡ್‌ನ ಚರ್ಚ್ ಬಳಿ ಹೆಬ್ಬಾಳದಿಂದ ವಿ.ನಾಗೇನಹಳ್ಳಿ, ಕನಕನಗರವರೆಗೆ ಹಾಗೂ ವಿ.ನಾಗೇನಹಳ್ಳಿಯಿಂದ ಸುಲ್ತಾನ್‌ಪಾಳ್ಯವರೆಗೆ 300 ಎಂ.ಎಂ ಆರ್‌ಸಿಸಿ ಒಳಚರಂಡಿ ಪೈಪ್‌ಲೈನ್ ಹಾಗೂ ಕಾವೇರಿ ಕುಡಿಯುವ ನೀರಿನ 300 ಎಂ.ಎಂ ಮತ್ತು 100 ಎಂ.ಎಂ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿದರು. ಈ ವೇಳೆ ಬಿಬಿಎಂಪಿ ಮಾಜಿ ಸದಸ್ಯರು, ಹೆಬ್ಬಾಳ ಹಾಗೂ ಆರ್.ಟಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು, ಪಕ್ಷದ ಮುಖಂಡರು, ಬಿಬಿಎಂಪಿ, ಜಲಮಂಡಳಿಯ ಅಧಿಕಾರಿಗಳು, ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.