
ಬೆಂಗಳೂರು(ಏ.20): ಜೆಡಿಎಸ್(JDS) ಜ್ಯಾತ್ಯತೀತತೆಗೆ ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಿರುವ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಅವರೇ, ತಾವು ಬಿಜೆಪಿ ಜತೆ ಎಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಎಚ್.ಡಿ.ದೇವೇಗೌಡರ(HD Devegowda) ಮೇಲೆ ಆಣೆ ಮಾಡಲು ಸಿದ್ಧರಿದ್ದೀರಾ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಸವಾಲು ಹಾಕಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನಿತ್ಯ ನನ್ನ ವಿರುದ್ಧ ನಂಜು ಕಾರುತ್ತಿರುವ ಕುಮಾರಸ್ವಾಮಿಯವರೇ ನೀವೆಲ್ಲಿ ನಿಂತಿದ್ದೀರಿ ಎಂಬುದನ್ನು ಮೊದಲು ಹೇಳಿ. ನಿಮ್ಮದು ಜಾತ್ಯತೀತತೆಗೆ(Secularism) ಬದ್ಧವಾಗಿರುವ ಪಕ್ಷ ಎಂದು ಹೇಳುತ್ತಲೇ ಬಂದಿದ್ದೀರಿ. ಹಾಗಿದ್ದರೆ, ಮುಂದಿನ ದಿನಗಳಲ್ಲಿ ನಿಮ್ಮ ಪಕ್ಷ ಬಿಜೆಪಿಯ(BJP) ಜೊತೆ ಚುನಾವಣಾ ಪೂರ್ವ ಇಲ್ಲವೇ ಚುನಾವಣೋತ್ತರ ಮೈತ್ರಿ(Alliance) ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸಲು ಸಿದ್ಧ ಇದ್ದೀರಾ ಎಂದು ಪ್ರಶ್ನಿಸಿದ್ದಾರೆ.
Karnataka Politics: ಪರ್ಸಂಟೇಜ್ ವ್ಯವಹಾರದ ಪಿತಾಮಹ ಸಿದ್ದರಾಮಯ್ಯ: ಕುಮಾರಸ್ವಾಮಿ
ಇದೇ ವೇಳೆ ವಚನಭಂಗದ ನಿಮ್ಮ ಇತಿಹಾಸವನ್ನು ಕಂಡ ನಾಡಿನ ಜನತೆ ಸುಲಭದಲ್ಲಿ ನಿಮ್ಮನ್ನು ನಂಬಲಾರರು. ನಂಬಿಕೆ ಹುಟ್ಟಿಸಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಿಮ್ಮ ತಂದೆ ಎಚ್.ಡಿ ದೇವೇಗೌಡರ ಮೇಲೆ ಆಣೆ ಮಾಡಿ ಘೋಷಿಸಲು ಸಿದ್ಧ ಇದ್ದೀರಾ? ಬಿಜೆಪಿ ಜೊತೆ ಎಂದೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನೀವು ಘೋಷಿಸಿಬಿಟ್ಟರೆ ನಿಮ್ಮ ಪಕ್ಷ ಬಿಜೆಪಿಯ ’ಬಿ-ಟೀಮ್’ ಎಂಬ ಆರೋಪವನ್ನು ಕೂಡಾ ಸುಳ್ಳು ಎಂದು ಸಾಬೀತು ಮಾಡಿದಂತಾಗುತ್ತದೆ. ನಿಮ್ಮ ಪಕ್ಷದ ಹೆಸರು ಕೂಡಾ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಇಂದು ನಡೆಯುತ್ತಿರುವ ಜಾತ್ಯತೀತತೆ ಮತ್ತು ಕೋಮುವಾದದ ನಡುವಿನ ನಿರ್ಣಾಯಕ ಹೋರಾಟದಲ್ಲಿ ನಾವೆಲ್ಲಿ ನಿಂತಿದ್ದೇವೆ ಎನ್ನುವುದನ್ನು ಜನತೆಗೆ ತಿಳಿಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಗೋಮುಖ ವ್ಯಾಘ್ರರೇ ಸುತ್ತ ಕುಣಿದಾಡುತ್ತಿರುವ ಈ ಸಂದರ್ಭದಲ್ಲಿ ಜನ ಪ್ರತಿಯೊಬ್ಬರನ್ನೂ ಸಂಶಯದಿಂದ ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಸಲಿ ಮುಖವನ್ನು ಜನರ ಮುಂದೆ ತೆರೆದಿಟ್ಟು ಅವರ ವಿಶ್ವಾಸವನ್ನು ಗಳಿಸಿ ನಮ್ಮ ಹೋರಾಟದಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಜನರೇ ತೀರ್ಮಾನಿಸುತ್ತಾರೆ:
ರಾಜ್ಯದಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆ ಮಾತನಾಡದೆ ಎಲ್ಲವನ್ನೂ ಪಕ್ಕಕ್ಕಿಟ್ಟು ನನ್ನ ವಿರುದ್ಧದ ವೈಯಕ್ತಿಕ ನಿಂದನೆ, ವಿಕೃತ ಮನಸ್ಸಿನ ಹಳಹಳಿಕೆ ಮತ್ತು ಸುಳ್ಳುಗಳಿಂದ ಕೂಡಿದ ಅಭಿಯಾನವನ್ನೇ ನೀವು ಮುಂದುವರಿಸುವುದಾದರೆ ಹಾಗೆಯೇ ಮಾಡಿ. ಸಾರ್ವಜನಿಕ ಜೀವನದಲ್ಲಿರುವ ನಮ್ಮನ್ನು - ನಿಮ್ಮನ್ನು ಜನ ನೋಡಿದ್ದಾರೆ. ಅವರೇ ತೀರ್ಮಾನಿಸುತ್ತಾರೆ ಎಂದಿದ್ದಾರೆ.
ಸಿದ್ದರಾಮಯ್ಯಗೆ 4 ಪ್ರಶ್ನೆ ಕೇಳಿದ ಎಚ್‌ಡಿಕೆ
ಬೆಂಗಳೂರು: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟರ್‌ನಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಿದ್ದು, ಅನೈತಿಕ ರಾಜಕಾರಣದ(Politics) ಅಸಲಿ ಅಪ್ಪ ಎಂದು ಜರೆದಿದ್ದಾರೆ.
ಆಪರೇಷನ್ ಕಮಲಕ್ಕೆ(Operation BJP) ಸಹಕರಿಸಿದ್ದಕ್ಕೆ ಸಿಕ್ಕ ಪ್ರತಿಫಲವೆಷ್ಟು? ಆ ಪಾಪದ ಹಣವನ್ನು ಏನು ಮಾಡಿದಿರಿ? ಹ್ಯೂಬ್ಲೆಟ್ ವಾಚ್‌ನ ರಹಸ್ಯವೇನು ಹಾಗೂ ಅರ್ಕಾವತಿ ರೀಡೂ ಬಗ್ಗೆ ಮೌನವೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಧೈರ್ಯವಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಿ. ವಿಷಯಾಂತರ ಬೇಡ ಎಂದೂ ಕುಟುಕಿದ್ದಾರೆ.
Hubli Violence ಬಂಧಿತರು ಅಮಾಯಕರೆಂದು ಎಚ್ಡಿಕೆಗೆ ಹೇಗೆ ಗೊತ್ತು, ಜೋಶಿ ಪ್ರಶ್ನೆ!
ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ ಎಂದು ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿಯೇ ಕಾರ್ಯಕರ್ತರ ಸಾಕ್ಷಿಯಾಗಿ ಕಾಂಗ್ರೆಸ್ ಪಕ್ಷವನ್ನು ದೇಶದಿಂದಲೇ ಕಿತ್ತೊಗೆಯಬೇಕು ಎಂದು ನೀವು ಮಾಡಿದ ಭಾಷಣ ಯಾರಿಗಯ್ಯಾ ಭೂಷಣ? ಮಾತೃಪಕ್ಷವನ್ನೇ ಮುಗಿಸಲು ಹೊರಟಿರುವ ನೀವು ಯಾವ ಟೀಮು? ಈ ರಾಜ್ಯ ಕಂಡ ಅಪ್ರತಿಮ ಸುಳ್ಳುಗಾರ ನೀವು. ಆಶ್ರಯ ಕೊಟ್ಟಪಕ್ಷಕ್ಕೆ ಹಳ್ಳ ತೋಡುತ್ತಿರುವ ನೀವು ಬಿಜೆಪಿ ಬಾಲಂಗೋಚಿ, ಬಿಜೆಪಿಯ ಬೇನಾಮಿ ಆಸಾಮಿ ಎನ್ನುವುದು ಎಲ್ಲರಿಗೂ ಗೊತ್ತು. ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಅಂಕಿಕ ಹಣದ ಅಸಲಿಯತ್ತು ನನಗೂ ಗೊತ್ತು. ನೀವು ರಾಜ್ಯ ಕಂಡ ಗ್ರೇಟ್ ಹಣಕಾಸು ಸಚಿವ. ಪ್ಲಸ್ಸೂ ಮೈನಸ್ಸಿನ ಪ್ರವೀಣ, ಪರ್ಸಂಟೇಜ್ ಪಿತಾಮಹನಷ್ಟೇ ಅಲ್ಲ. ಅನೈತಿಕ ರಾಜಕಾರಣದ ಅಸಲಿ ಅಪ್ಪ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಬಗ್ಗೆ ಮಾತನಾಡಿ, ಅಭ್ಯಂತರ ಇಲ್ಲ. ಡಿವೈಎಸ್‌ಪಿ ಗಣಪತಿ ಬಗ್ಗೆಯೂ ಹೇಳಿ, ಬೇಜಾರಿಲ್ಲ. ಆದರೆ, ಕಲ್ಲಪ್ಪ ಹಂಡೀಭಾಗ್ ಬಗ್ಗೆ ಮಾತನಾಡಿದರೆ ನಿಮ್ಮ ಜಾಣ ಮೌನವೇಕೆ? ಆ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸದೇ ವಿಧಿಯೇ ಇಲ್ಲ. ಪ್ರಾಮಾಣಿಕ ಅಧಿಕಾರಿಯ ದುರಂತ ಅಂತ್ಯ ನಿಮ್ಮನ್ನು ಸುಮ್ಮನೆ ಬಿಡಲ್ಲ. ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ ಐದು ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲಿಯೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈ ಶುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳುಮಾಡಿದಿರಿ ಎಂದು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.