ಟಿಪ್ಪು ಸುಲ್ತಾನ್ ಏನೆಲ್ಲಾ ಮಾಡಿದ್ರು? ಇತಿಹಾಸ ತೆರೆದಿಟ್ಟ ಸಿದ್ದರಾಮಯ್ಯ

By Suvarna News  |  First Published Nov 10, 2021, 8:29 PM IST

* ಟಿಪ್ಪು ಸುಲ್ತಾನ್ ಇತಿಹಾಸ ತಿಳಿಸಿದ ಸಿದ್ದರಾಮಯ್ಯ
* ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡ ಸಿದ್ದು
* ಬಿಟ್ ಕಾಯಿನ್ ಹಾಗೂ ದಲಿತ ಸಿಎಂ ಬಗ್ಗೆ ಹೇಳಿಕೆ


ಬೆಂಗಳೂರು, (ನ.10): ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್, ಬಿಟ್ ಕಾಯಿನ್ ಹಗರಣ ಹಾಗೂ ದಲಿತ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಪ್ರಾಯಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ.

ಟಿಪ್ಪು ಸುಲ್ತಾನ್ ಇತಿಹಾಸ ತಿಳಿಸಿದ ಸಿದ್ದು
ಟಿಪ್ಪು ಜಾತ್ಯತೀತ ದೊರೆ ಹಾಗೂ ಒಬ್ಬ ಜನನಾಯಕ ಆಗಿದ್ದ. ಟಿಪ್ಪು ಒಬ್ಬ ಹಿಂದೂ ವಿರೋಧಿಯಾಗಿದ್ದರೆ ತನ್ನ ಆಸ್ಥಾನದಲ್ಲಿ ಹಿಂದೂಗಳನ್ನು ದೀವಾನರಾಗಿ, ಮಂತ್ರಿಗಳಾಗಿ ಇಟ್ಟುಕೊಳ್ಳುತ್ತಿದ್ದನೇ? ಎಂದು ಪ್ರಶ್ನಿಸಿದರು.

Tap to resize

Latest Videos

ಟಿಪ್ಪು ಜಯಂತಿಗೆ ಕಾಂಗ್ರೆಸ್ ನಾಯಕ, ಮುಸ್ಲಿಂ ಮುಖಂಡ ಸಿಎಂ‌ ಇಬ್ರಾಹಿಂ ವಿರೋಧ

ಉಳುವವನೇ ಭೂಮಿಯ ಒಡೆಯ ಕಾನೂನನ್ನು ಮೊದಲಿಗೆ ಜಾರಿಗೆ ತಂದಿದ್ದು ಹೈದರಾಲಿ. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ಹೀಗೆ ನಾಡಿಗೆ ಟಿಪ್ಪು ಮತ್ತು ಹೈದರಾಲಿ ಕೊಡುಗೆ ಅಪಾರವಾದುದ್ದು ಎಂದು ತಿಳಿಸಿದರು.

ಶೃಂಗೇರಿ ಸೇರಿ ಹಲವು ಮಠ, ಮಂದಿರಗಳಿಗೆ ಟಿಪ್ಪು ರಕ್ಷಣೆ, ನೆರವು ನೀಡಿರುವುದಕ್ಕೆ ಅಪಾರ ದಾಖಲೆಗಳಿವೆ. ಟಿಪ್ಪು ಎಲ್ಲೆಲ್ಲಿ ಮಸೀದಿ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸುತ್ತಿದ್ದರು ಎನ್ನುವುದಕ್ಕೆ ದಾಖಲೆಗಳಿವೆ.  ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರ್‌ಎಸ್‌ಎಸ್ ಎಂದಾದರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದೆಯೇ? ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಯಾರಾದರೂ ಆರ್‌ಎಸ್‌ಎಸ್ ನವರು ಪ್ರಾಣ ಬಿಟ್ಟ ಉದಾಹರಣೆಗೆ ಇದೆಯಾ? 

ಬ್ರಿಟಿಷರ ವಿರುದ್ಧ ರಾಜಿರಹಿತವಾಗಿ ಹೋರಾಡಿ, ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ. ಇತಿಹಾಸ ಪುರುಷರನ್ನು ಧರ್ಮದ ಆಧಾರದ ಮೇಲೆ ದ್ವೇಷಿಸುವ ಆರ್.ಎಸ್.ಎಸ್ ನವರ ಮಾತುಗಳಿಗೆ "ಐ ಡೋಂಟ್ ಕೇರ್".
ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಹೆಮ್ಮೆ ನಮ್ಮ ಸರ್ಕಾರದ್ದು. ಭಾರತವನ್ನು ದಾಸ್ಯಕ್ಕೆ ದೂಡಿದ ಬ್ರಿಟಿಷರ ಪರವಾಗಿ ನಾವು ಇರಬೇಕೋ? ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಡಿದ ಟಿಪ್ಪು ಸುಲ್ತಾನ್ ಪರವಾಗಿ ಇರಬೇಕೋ?

ನಾಡಿನಲ್ಲಿ ರೇಷ್ಮೆ ಬೆಳೆ ಆರಂಭಿಸಿದ್ದು ಟಿಪ್ಪು ಸುಲ್ತಾನ್. ಆ ಕಾಲದಲ್ಲೇ ವಿದೇಶಿ ವಿನಿಮಯ ಪ್ರಾರಂಭಿಸಿ ವ್ಯಾಪಾರ ವಹಿವಾಟಿಗೆ ಮಹತ್ವ ನೀಡಿದ್ದಲ್ಲದೆ ಜಾತ್ಯತೀತ ಆಡಳಿತ ನೀಡಿ ಹಿಂದೂ ದಿವಾನರನ್ನು , ಮಂತ್ರಿಗಳನ್ನು ನೇಮಿಸಿಕೊಂಡು ಜನ ನಾಯಕ ಎನ್ನಿಸಿಕೊಂಡಿದ್ದರು.
ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಮಾತ್ರ ಈ ದೇಶ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು. ಅಂಥವರ ಮಾತುಗಳ ಬಗ್ಗೆ ಜನ ಜಾಗೃತರಾಗಬೇಕು.

ಬಿಟ್ ಕಾಯಿನ್ ಪ್ರಕರಣ
ಬಿಟ್ ಕಾಯಿನ್ ಹಗರಣದಲ್ಲಿ ಸದ್ದಿಲ್ಲದೆ ಹಣ ತಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಸರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಬೊಮ್ಮಾಯಿ ಅವರು ತಾವು ಜಾರಿಕೊಳ್ಳಲು ಕಾಂಗ್ರೆಸ್ ನಾಯಕರ ಹೆಸರೂ ಇದೆ ಎಂದು ಹಾರಿಕೆ ಉತ್ತರ ನೀಡುವುದು ನಿಲ್ಲಿಸಿ, ಕಾಂಗ್ರೆಸ್ಸಿನವರ ಹೆಸರಿದ್ದರೆ ಅವರ ಹೆಸರನ್ನೂ ಹೇಳಲಿ. ಅವರನ್ನೂ ಬಂಧಿಸಲಿ, ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ದಲಿತ ಸಿಎಂ
ದೇಶದಲ್ಲಿ ಅತಿ ಹೆಚ್ಚು ಮಂದಿ ದಲಿತರು ಮುಖ್ಯಮಂತ್ರಿಗಳಾಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಬಿಜೆಪಿಯಲ್ಲಿ ಯಾರೂ ದಲಿತರೇ ಇಲ್ಲವೇ? ಬಿಜೆಪಿಗೆ ದಲಿತರ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ ಬೊಮ್ಮಾಯಿ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಟಾಂಗ್ ಕೊಟ್ಟರು.

ಕಾಂಗ್ರೆಸ್ ಸರ್ಕಾರ ಇರುವ ಪಂಜಾಬ್‌ನಲ್ಲಿ ನಾವು ದಲಿತರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ರಾಜ್ಯದಲ್ಲಿ ಬಿಜೆಪಿಯವರ ಸರ್ಕಾರ ಇದೆ. ಹೀಗಾಗಿ ಬಿಜೆಪಿಯರವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಈಗಲೂ ಅವಕಾಶ ಇದೆ. ಇನ್ನಾದರೂ ನಾಟಕ ನಿಲ್ಲಿಸಿ, ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದರು. 

click me!