
ಬೆಂಗಳೂರು(ನ.29): ಯಾವುದೇ ಜಾತಿಯನ್ನು ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿಸಬೇಕು ಅಥವಾ ಕೈ ಬಿಡಬೇಕು ಎಂದರೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಅಧ್ಯಯನ ನಡೆಸಿ ವರದಿ ನೀಡಬೇಕು. ಆದರೆ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರುವುದನ್ನೇ ಮರೆತಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಹಿಂದುಳಿದ ವರ್ಗದ ಮೀಸಲಾತಿ ಕಲ್ಪಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿರುವ ಸರ್ಕಾರದ ನಿಲವಿನ ಬಗ್ಗೆ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವುದಕ್ಕೆ ನನ್ನ ವಿರೋಧವೂ ಇಲ್ಲ ಪರವೂ ಇಲ್ಲ. ಸಂವಿಧಾನದ ಅಡಿ ಸೆಕ್ಷನ್ 15, 16 ಹಾಗೂ 347ರ ಅಂಶಗಳನ್ನು ಪರಿಗಣಿಸಿ ಅವುಗಳ ಆಧಾರದ ಮೇಲೆ ಹಿಂದುಳಿದ ವರ್ಗಗಳ ಆಯೋಗವು ವರದಿ ಸಿದ್ಧಪಡಿಸಿ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅದನ್ನು ಬಿಟ್ಟು ನೇರವಾಗಿ ಮಾಡುವುದು ಸರಿಯಲ್ಲ. ಸರ್ಕಾರಕ್ಕೆ ತಮ್ಮ ತಪ್ಪಿನ ಅರಿವಾಗಿಯೇ ನಿರ್ಧಾರದಿಂದ ಹಿಂದೆ ಸರಿದಿರಬಹುದು’ ಎಂದು ಎಂದರು.
‘ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಯಾವುದೇ ಜಾತಿಯವರೂ ಕೇಳಬಹುದು. ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಪ್ರತಿಯೊಬ್ಬರಿಗೂ ಮೀಸಲಾತಿ ಕಲ್ಪಿಸಬೇಕು. ಆದರೆ, ಈ ಮಾನದಂಡಗಳ ಅಡಿ ಅಧ್ಯಯನ ನಡೆಸಿ ಅರ್ಹರಿಗೆ ಮೀಸಲಾತಿ ಕಲ್ಪಿಸಬೇಕು’ ಎಂದರು.
ಬಿಜೆಪಿ ಜೊತೆ ಜೆಡಿಎಸ್ ಒಪ್ಪಂದ: ಸಿದ್ದರಾಮಯ್ಯಗೆ ಸಚಿವ ಅಶೋಕ್ ಟಾಂಗ್
ಎಷ್ಟು ಬೇಗ ತೊಲಗುತ್ತೋ ಒಳ್ಳೇದು!:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನದ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರನ್ನು ಮುಂದುವರೆಸುತ್ತಾರೋ ಅಥವಾ ಕೆಳಗಿಳಿಸುತ್ತಾರೋ ನನಗೆ ಗೊತ್ತಿಲ್ಲ. ಆದರೆ ರಾಜ್ಯ ಬಿಜೆಪಿ ಸರ್ಕಾರ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದು’ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನು ಸಚಿವ ಸಂಪುಟ ವಿಸ್ತರಣೆ ಕುರಿತು ಆರ್. ಶಂಕರ್, ಎಂ.ಟಿ.ಬಿ. ನಾಗರಾಜ್, ಎಚ್. ವಿಶ್ವನಾಥ್ ಅಸಮಾಧಾನದ ಬಗ್ಗೆ ಮಾತನಾಡಿದ ಅವರು, ‘ವ್ಯಾಪಾರ ಮಾಡಿಕೊಂಡು ಹೋಗಿರುವವರು ಅವರು. ಅವರು ಏನು ವ್ಯಾಪಾರ ಮಾಡಿಕೊಂಡು ಹೋಗಿದ್ದರೂ ನಮಗೇನು ಗೊತ್ತು? ಅವರಿಗೇ ಕೇಳಿ’ ಎಂದರು.
ಸಂತೋಷ್ ಬಗ್ಗೆ ಮಾತಾಡಲ್ಲ:
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ವೈಯಕ್ತಿಕ ಸಮಸ್ಯೆ ಏನಿದೆ ಎಂಬುದು ಗೊತ್ತಿಲ್ಲ. ಯಾರಾರಯರದ್ದೋ ಬಂದು ನಮಗೆ ಕೇಳಿದರೆ ಹೇಗೆ ಹೇಳಬೇಕು?’ ಎಂದು ಮರುಪ್ರಶ್ನೆ ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.