
ಚಿಕ್ಕಮಗಳೂರು (ಮೇ.28) ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ರಾಜೀನಾಮೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗಳ ನಡುವೆ ಅಹಿಂದ ಒಕ್ಕೂಟ ಕಾಂಗ್ರೆಸ್ ಪಕ್ಷದ ನಿರ್ಧಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸಿದ್ದರಾಮಯ್ಯ ರಾಜೀನಾಮೆ ಕುರಿತಂತೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅಹಿಂದ ಮುಖಂಡ ಪುಟ್ಟೇಗೌಡ, 'ರಾತ್ರೋರಾತ್ರಿ ಸಿಎಂ ಬದಲಾವಣೆ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ಕಾಂಗ್ರೆಸ್‌ಗೆ ಚೆನ್ನಾಗಿ ಗೊತ್ತಿದೆ. ಕಾಂಗ್ರೆಸ್ ಭವಿಷ್ಯ ಸುರಕ್ಷಿತವಾಗಿರಬೇಕಾದರೆ ಸಿದ್ದರಾಮಯ್ಯರಿಗೆ ಇನ್ನೂ ಎರಡು ವರ್ಷ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು.
ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಗೌರವಯುತವಾಗಿ ಇನ್ನೂ ಎರಡು ವರ್ಷ ಅಧಿಕಾರ ನೀಡಬೇಕು ಎಂದು ಪುಟ್ಟೇಗೌಡ ಹೇಳಿದರು. ಒಂದು ವೇಳೆ ಈಗಲೇ ನಾಯಕತ್ವ ಬದಲಾವಣೆ ಮಾಡಿದರೆ, ಅದರ ಪರಿಣಾಮವನ್ನು ಕಾಂಗ್ರೆಸ್ ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ. ಈಗ ಕಾಂಗ್ರೆಸ್ ಇಟ್ಟಿರೋ ಹೆಜ್ಜೆ ತಕ್ಕ ಪಾಠ ಕಲಿಯುತ್ತೆ ಎಂದು ಎಚ್ಚರಿಸಿದರು.
ಹಳೆಯ ಇತಿಹಾಸ ನೆನಪಿಸಿದ ಅಹಿಂದ ನಾಯಕರು
ಕಾಂಗ್ರೆಸ್‌ನ ಹಿಂದಿನ ರಾಜಕೀಯ ಘಟನೆಗಳನ್ನು ಉಲ್ಲೇಖಿಸಿದ ಪುಟ್ಟೇಗೌಡ, ಈ ಹಿಂದೆ ಬಂಗಾರಪ್ಪ, ದೇವರಾಜ್ ಅರಸು, ವೀರಪ್ಪಮೊಯ್ಲಿಯನ್ನು ರಾತ್ರೋರಾತ್ರಿ ತೆಗೆದಿದ್ರು. ಆಗ ಕಾಂಗ್ರೆಸ್ ಏನಾಗಿದೆ ಅನ್ನೋದು ಅದರ ಕಣ್ಮುಂದೆಯೇ ಅದರ ಇತಿಹಾಸ ಇದೆ. ಆ ತಪ್ಪು ಮತ್ತೆ ಮರುಕಳಿಸಬಾರದು ಎಂದು ಅಹಿಂದ ಮತ್ತು ಹಿಂದುಳಿದ ವರ್ಗಗಳು ಎಚ್ಚರಿಸುತ್ತಿವೆ ಎಂದರು.
ಕಾಂಗ್ರೆಸ್‌ಗೆ ಪರೋಕ್ಷ ಎಚ್ಚರಿಕೆ
ನಾವು ಕಾಂಗ್ರೆಸ್‌ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಇಂತಹ ನಿರ್ಧಾರಗಳ ನಂತರ ಪಕ್ಷದ ಪರಿಸ್ಥಿತಿ ಏನಾಗುತ್ತದೆ ಎಂಬುದು ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯರನ್ನು ಗೌರವಯುತವಾಗಿ ಮುಂದುವರಿಸಬೇಕು ಎಂಬ ಒತ್ತಾಯದ ಜೊತೆಗೆ, ಅಹಿಂದ ಸಮುದಾಯದ ಭಾವನೆಗಳನ್ನು ಕಡೆಗಣಿಸಬಾರದು ಎಂದು ಕಾಂಗ್ರೆಸ್ ನಾಯಕತ್ವಕ್ಕೆ ಪರೋಕ್ಷ ಸಂದೇಶ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.