
ಬೆಂಗಳೂರು, (ಮೇ.07): ಸಿಎಂ ಆಗಲು 2,500 ಕೋಟಿ ರೂ., ಸಚಿವರಾಗಲು 100 ಕೋಟಿ ರೂ. ಸಿದ್ಧವಿಟ್ಟುಕೊಳ್ಳಬೇಕು ಎಂಬುದಾಗಿ ದಿಲ್ಲಿಯಿಂದ ಬಂದಿದ್ದ ಕೆಲವರು ಹೇಳಿದ್ದರು' ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿಕೆ ಸರಕಾರ ಹಾಗೂ ಬಿಜೆಪಿಗೆ ತೀವ್ರ ಮುಜುಗರಕ್ಕೀಡು ಮಾಡಿದೆ. ನಾನಾ ಆರೋಪ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷದ ನಾಯಕರುಗಳು ಸರಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ಇನ್ನು ಈ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ತಮ್ಮನ್ನು ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ದೆಹಲಿಯವರು ಕೇಳಿದ್ದರು ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರ ಆರೋಪ ಗಂಭೀರ ಸ್ವರೂಪದ್ದಾಗಿದ್ದು ಸೂಕ್ತ ತನಿಖೆಯಿಂದ ಮಾತ್ರ ಇದರ ಹಿಂದಿನ ಸತ್ಯಾಸತ್ಯತೆ ಬಹಿರಂಗವಾಗಲು ಸಾಧ್ಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
2,500 ಕೋಟಿ ರೂ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಗ್ ಶಾಕ್!
ಯತ್ನಾಳ್ ಆರೋಪದ ಬಗ್ಗೆ ತನಿಖೆ ನಡೆಸದೆ ಇದ್ದರೆ ಬಿಜೆಪಿ ನಾಯಕರಿಗೆ ಸಾವಿರಾರು ಕೋಟಿ ರೂಪಾಯಿ ತೆತ್ತು ಮುಖ್ಯಮಂತ್ರಿಯಾಗಿರುವುದನ್ನು ಬಸವರಾಜ ಬೊಮ್ಮಾಯಿ ಅವರೇ ಒಪ್ಪಿಕೊಂಡಂತಾಗುತ್ತದೆ. ಅದರ ನಂತರ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರುವ ಯಾವ ನೈತಿಕತೆ ಇರುವುದಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡುತ್ತಿರುವುದನ್ನು ಕೇಳಿದರೆ ಅವರ ಬಳಿ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಅಗಾಧವಾದ ಮಾಹಿತಿ ಇದ್ದಂತೆ ಕಾಣುತ್ತಿದೆ. ಅವರನ್ನು ತನಿಖೆ ನಡೆಸಿ ಆ ಮಾಹಿತಿಯನ್ನು ಪಡೆದರೆ ತನಿಖೆಯೂ ಸಲೀಸಾಗುತ್ತದೆ, ಸತ್ಯವೂ ಹೊರಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಯಲ್ಲಿ ಮುಖ್ಯಮಂತ್ರಿಯನ್ನು ಶಾಸಕಾಂಗ ಪಕ್ಷ ಆಯ್ಕೆ ಮಾಡುತ್ತದೆ ಎಂದು ಜನ ತಿಳಿದುಕೊಂಡಿದ್ದರು. ಇದು ಹರಾಜಿನ ಮೂಲಕ ಮಾರಾಟವಾಗುವ 'ಪೇಮೆಂಟ್ ಸೀಟು' ಎನ್ನುವುದು ಶಾಸಕ ಯತ್ನಾಳ್ ಆರೋಪದಿಂದ ಬಯಲಾಗಿದೆ. ಈ ಸೀಟಿಗಾಗಿ ಹಿಂದಿನ ಮತ್ತು ಈಗಿನ ಮುಖ್ಯಮಂತ್ರಿಗಳು ಎಷ್ಟು ದುಡ್ಡು ಕೊಟ್ಟಿದ್ದಾರೆ ಎನ್ನುವುದೂ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಈ 'ಪೇಮೆಂಟ್ ಸೀಟುಗಳು' ಕೇವಲ ಮುಖ್ಯಮಂತ್ರಿ ಕುರ್ಚಿಗೆ ಸೀಮಿತವಾಗಿಲ್ಲ, ಸಚಿವ ಸ್ಥಾನಗಳನ್ನೂ ಈ ರೀತಿ ಹರಾಜು ಕೂಗಲಾಗಿದೆ ಎನ್ನುವ ಆರೋಪ ಇದೆ. ಬಿಜೆಪಿಗೆ ಪಕ್ಷಾಂತರ ಮಾಡಿದ ಶಾಸಕರು ಯಾರಿಗೆ ಮತ್ತು ಎಷ್ಟು ದುಡ್ಡು ಸಂದಾಯ ಮಾಡಿದ್ದಾರೆ ಎನ್ನುವುದೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರರಿಂದ 40% ಕಮಿಷನ್ ವಸೂಲಿ, ಪಿಎಸ್ ಐ ಮತ್ತಿತರ ಹುದ್ದೆಗಳ ನೇಮಕದ ಅಕ್ರಮ ವ್ಯವಹಾರ, ಆರೋಗ್ಯ ಇಲಾಖೆಯ ಭ್ರಷ್ಟಾಚಾರವೂ ಸೇರಿದಂತೆ ಎಲ್ಲ ಹಗರಣಗಳಿಗೂ ಯತ್ನಾಳ್ ಮಾಡಿರುವ ಆರೋಪಕ್ಕೂ ನೇರವಾದ ಸಂಬಂಧ ಇದೆ. ಇವೆಲ್ಲವುಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಮುಖ್ಯಮಂತ್ರಿ ಮತ್ತು ಸಚಿವರಾಗಲು ಪೇಮೆಂಟ್ ಮಾಡಿದವರು ಅದರ ವಸೂಲಿಗಾಗಿಯೇ ಈಗ ಕಮಿಷನ್ ದಂದೆ ಮತ್ತು ಅಕ್ರಮ ವ್ಯವಹಾರಕ್ಕೆ ಇಳಿದಿದ್ದಾರೆ. ಇದರಿಂದ ಒಬ್ಬ ಅಮಾಯಕ ಜೀವ ಕಳೆದುಕೊಂಡ, ಸಾವಿರಾರು ಅಮಾಯಕರು ಭವಿಷ್ಯ ಕಳೆದುಕೊಂಡರು. (ಪಿಎಸ್ ಐ ಹಗರಣ) ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಹೊಸದೇನಲ್ಲ. ಕಳೆದ ಎರಡು ವರ್ಷಗಳಿಂದ ಇವರು ತಮ್ಮದೇ ಪಕ್ಷದ ಮುಖ್ಯಮಂತ್ರಿಗಳು, ಸಚಿವರು ಮತ್ತು ನಾಯಕರ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಮೌನವಾಗಿರುವುದು ಸಮ್ಮತಿಯ ಸೂಚನೆಯೇ? ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.