
ಬೆಂಗಳೂರು (ಡಿ.27): ಮುಖ್ಯಮಂತ್ರಿಗಳ ಕುರ್ಚಿ ಗೊಂದಲಗಳ ನಡುವೆಯೇ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾತ್ರಿ ದೆಹಲಿಗೆ ತೆರಳಿದ್ದು, ಇದಕ್ಕೂ ಮೊದಲು ಬಿರುಸಿನ ಚಟುವಟಿಕೆ ನಡೆದಿದ್ದು ಕೆಲ ಸಚಿವರ ಜತೆ ಸಮಾಲೋಚನೆ ನಡೆಸಿರುವುದು ಕುತೂಹಲ ಮೂಡಿಸಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಶನಿವಾರ ದೆಹಲಿಯ ಇಂದಿರಾಭವನದಲ್ಲಿ ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿಗೆ ತೆರಳುವ ಮೊದಲು ಕಾವೇರಿ ನಿವಾಸದಲ್ಲಿ ಸಚಿವರಾದ ಸಚಿವರಾದ ಡಾ.ಎಂ.ಸಿ ಸುಧಾಕರ್, ಜಮೀರ್ ಅಹಮದ್ ಖಾನ್, ಚಲುವರಾಯಸ್ವಾಮಿ, ಎಚ್.ಸಿ. ಮಹದೇವಪ್ಪ, ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಸೇರಿ ಹಲವರು ಭೇಟಿ ಮಾಡಿದರು.
ರಾಹುಲ್ ಭೇಟಿ ನಿರೀಕ್ಷೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಯಲ್ಲಿ ಅವಕಾಶ ಸಿಕ್ಕರೆ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ಪುನರ್‌ರಚನೆ ಕುರಿತು ಪ್ರಸ್ತಾಪಿಸುವ ಸಾಧ್ಯತೆಯಿದೆ. ಜತೆಗೆ ಯಾವೆಲ್ಲಾ ವಿಚಾರ ಪ್ರಸ್ತಾಪ ಮಾಡಬಹುದು ಎಂಬ ಕುರಿತು ಸಚಿವರ ಅಭಿಪ್ರಾಯ ಪಡೆದಿದ್ದಾರೆ ಎನ್ನಲಾಗಿದೆ.
ಡಿಕೆಶಿ, ಎಂಬಿಪಾ ಭೇಟಿ ಕುತೂಹಲ: ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಟುವಟಿಕೆಯೂ ಕುತೂಹಲ ಮೂಡಿಸಿದ್ದು, ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಹಾಗೂ ಎಂ.ಬಿ. ಪಾಟೀಲ್ ಅವರು ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಎಂ.ಬಿ. ಪಾಟೀಲ್ ಹಾಗೂ ಡಿ.ಕೆ.ಶಿವಕುಮಾರ್ ಒಟ್ಟಿಗೆ ಆಗಮಿಸಿದರು. ಈ ವೇಳೆ ಡಿ.ಕೆ.ಶಿವಕುಮಾರ್ ಅವರು ಎಂ.ಬಿ. ಪಾಟೀಲ್ ಅವರ ಸದಾಶಿವನಗರ ನಿವಾಸಕ್ಕೆ ತೆರಳಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ವೇಳೆ ಏನು ಚರ್ಚೆ ನಡೆಸಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಖರ್ಗೆ, ಸಿಎಂ ದಿಲ್ಲಿಗೆ ಪ್ರಯಾಣ ಸಿಡಬ್ಲ್ಯೂಸಿ ಸಭೆಯಲ್ಲಿ ಭಾಗಿ: ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಭಾಗವಹಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಿಡಬ್ಲ್ಯೂಸಿ ಸಭೆಯಲ್ಲಿ ಖರ್ಗೆ ಅವರು ಸೇರಿ ರಾಜ್ಯದಿಂದ ಐದು ಮಂದಿ ಭಾಗಿಯಾಗಲಿದ್ದಾರೆ. ದೆಹಲಿಗೆ ತೆರಳುವ ಮೊದಲು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಅಧಿಕಾರ ಹಂಚಿಕೆ ಗೊಂದಲ ಬಗೆಹರಿಯುತ್ತದೆ ನೀವು ಚಿಂತೆ ಮಾಡಬೇಡಿ’ ಎಂದು ಹೇಳಿದ್ದಾರೆ. ಜತೆಗೆ ಸಿಡಬ್ಲ್ಯೂಸಿ ಸಭೆ ಕುರಿತ ಪ್ರಶ್ನೆಗೆ, ಸಿಡಬ್ಲ್ಯೂಸಿ ಸಭೆ ಬಗ್ಗೆ ದೆಹಲಿಯಲ್ಲಿ ಮಾತನಾಡುತ್ತೇನೆ. ಇಲ್ಲಿ ಏಕೆ ಮಾತನಾಡಲಿ ಎಂದರು.
ಶನಿವಾರ ಬೆಳಗ್ಗೆ 10.30 ಗಂಟೆಗೆ ದೆಹಲಿಯ ಇಂದಿರಾಭವನದಲ್ಲಿ ಸಿಡಬ್ಲ್ಯೂಸಿ ಸಭೆ ನಡೆಯಲಿದ್ದು, ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಸಚಿವರೊಂದಿಗೆ ಭೇಟಿ ಮಾಡಲಿದ್ದಾರೆ. ಬಳಿಕ ಸಂಜೆ 4.30 ಗಂಟೆಗೆ ಬೆಂಗಳೂರು ಕಡೆಗೆ ವಾಪಸಾಗಲಿದ್ದಾರೆ. ಉಳಿದಂತೆ ರಾಜ್ಯದಿಂದ ಸಿಡಬ್ಲ್ಯುಸಿ ಸದಸ್ಯರಾದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಶ್ವತ ಆಹ್ವಾನಿತರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಮತ್ತು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಸಿಡಬ್ಲ್ಯುಸಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.