ಜಾತಿ ವಿರೋಧಿಸುವ ಸಿದ್ದು ಹೊಸ ಜಾತಿ ಜನಕ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

Published : Sep 16, 2025, 05:32 AM IST
Kageri

ಸಾರಾಂಶ

ಜಾತಿ ವ್ಯವಸ್ಥೆ ತೊಲಗಬೇಕು ಎಂದು ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯ ಈಗ ಹೊಸ ಜಾತಿಗಳ ಸೃಷ್ಟಿಕರ್ತ ಆಗಿದ್ದು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂಬ ಜಾತಿಗಳ ಸೃಷ್ಟಿಸಿ ಗೊಂದಲಮಯ ಆಡಳಿತ ನಡೆಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.

ಹಳಿಯಾಳ (ಸೆ.16): ಜಾತಿ ವ್ಯವಸ್ಥೆ ತೊಲಗಬೇಕು ಎಂದು ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯ ಈಗ ಹೊಸ ಜಾತಿಗಳ ಸೃಷ್ಟಿಕರ್ತ ಆಗಿದ್ದು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂಬ ಜಾತಿಗಳ ಸೃಷ್ಟಿಸಿ ಗೊಂದಲಮಯ ಆಡಳಿತ ನಡೆಸುತ್ತಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದ್ದು, ಅಭಿವೃದ್ಧಿಗೆ ಅನುದಾನವಿಲ್ಲ. ಅಲ್ಪಸಂಖ್ಯಾತರ ಓಲೈಕ ಮೀತಿಮೀರಿದ್ದು, ಸರ್ಕಾರ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಾ ತನ್ನ ಆಡಳಿತ ವೈಫಲ್ಯ ಮರೆಮಾಚುವ ಪ್ರಯತ್ನ ನಡೆಸಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಈ ಹಿಂದೆ ಮಾಡಿದ ಗಣತಿ ಏನಾಯಿತು?

ಈ ಹಿಂದೆ ಹಿಂದುಳಿದ ವರ್ಗದ ಮತಬ್ಯಾಂಕ್‌ ಸೃಷ್ಟಿಸಲು ಕಾಂಗ್ರೆಸ್‌ ಸರ್ಕಾರ ಏನೇನೋ ಮಾಡಿತು. 5 ವರ್ಷ ಸಿಎಂ ಆಗಿದ್ದಾಗಲೂ ಸಿದ್ದರಾಮಯ್ಯ ಏನೂ ಮಾಡಿಲ್ಲ. ₹170 ಕೋಟಿ ಖರ್ಚು ಮಾಡಿ ಸಂಗ್ರಹಿಸಿದ ಜಾತಿಗಣತಿ ವರದಿಯನ್ನು ಕಸದ ಬುಟ್ಟಿಗೆ ಎಸೆಯಲಾಯಿತು. ಕೇಂದ್ರ ಸರ್ಕಾರ 2026ರಲ್ಲಿ ಜನಗಣತಿ ಮಾಡುವುದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಈಗ ಆರಂಭಿಸಲಿರುವ ಗಣತಿಯು ಕೇಂದ್ರ ಸರ್ಕಾರದ ಗಣತಿಯ ಭಾಗವಾಗುವುದಿಲ್ಲ. ರಾಜ್ಯ ಸರ್ಕಾರ ಹಣ ವ್ಯರ್ಥ ಮಾಡುವುದರ ಜತೆಗೆ ಗೊಂದಲ ಸೃಷ್ಟಿಸುತ್ತಿದೆ ಎಂದರು.

ಬೆಳೆಹಾನಿ ಸಮೀಕ್ಷೆ: ರಾಜ್ಯದಲ್ಲಿ ಆಡಳಿತ ಅನ್ನುವುದೇ ಇಲ್ಲ. ಬೆಳೆ ಹಾನಿಯಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸಮೀಕ್ಷೆ ನಡೆಸಲು ರಾಜ್ಯ ಸಕಾರ ಇನ್ನುವರೆಗೂ ಆದೇಶ ಮಾಡಲಿಲ್ಲ. ಸಮೀಕ್ಷೆ ನಡೆಸಿದರೆ ಇನ್ನುವರೆಗೆ ಪರಿಹಾರ ಬರುತ್ತಿತ್ತು. ಆದರೆ ಇವರು ಸಮೀಕ್ಷೆ ಮಾಡುವುದು ಯಾವಾಗ ಪರಿಹಾರ ನೀಡುವುದು ಯಾವಾಗ ಎಂದು ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನಿಸಿದ್ದಾರೆ. ಹಳಿಯಾಳ ತಾಲೂಕಿಗೆ ಪ್ರವಾಸ ಕೈಗೊಂಡ ಅವರು, ಮದನಳ್ಳಿ ಗ್ರಾಮದ ಬಳಿಯ ರಸ್ತೆ ಪಕ್ಷದ ಭತ್ತದ ಗದ್ದೆಗಿಳಿದು ಬೆಳೆಹಾನಿಯ ಪರಿಶೀಲಿಸಿ ರಾಜ್ಯ ಸರ್ಕಾರದ ಜನವಿರೋಧಿ ಆಡಳಿತವನ್ನು ಕಟುವಾಗಿ ಟೀಕಿಸಿದರು. ರಾಜ್ಯ ಸರ್ಕಾರ ತಕ್ಷಣ ಸಂತ್ರಸ್ತ ರೈತರ ನೆರವಿಗೆ ಧಾವಿಸಬೇಕು. ಅವರಿಗಾದ ಬೆಳೆಹಾನಿಯ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಮೇ 15ರಿಂದ ಈವರೆಗೆ ಮಳೆಯಾಗುತ್ತಿದೆ. ಈ ನಿರಂತರ ಮಳೆಯ ಕಾರಣ ನಮ್ಮ ಜಿಲ್ಲೆಯಲ್ಲಿ ಭಾರಿ ಹಾನಿ ಸಂಭವಿಸಿದೆ. ಭತ್ತ, ಕಬ್ಬು, ಮೆಕ್ಕೆಜೋಳ ಹಾಳಾಗಿದೆ. ಅಡಕೆಗೆ, ಶುಂಠಿಗೆ ರೋಗ ಬಂದಿದೆ. ಕಾಳುಮೆಣಸು ಹಾಳಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ತುರ್ತಾಗಿ ಬೆಳೆಹಾನಿಯ ಸಮೀಕ್ಷೆ ಮಾಡಿಸಬೇಕು. ಈ ಮೂಲಕ ನಮ್ಮ ರೈತರಿಗೆ ಬೆಳೆ ವಿಮೆ, ಬೆಳೆಹಾನಿ ಪರಿಹಾರವನ್ನು ನೀಡಲು ಅನುಕೂಲವಾಗುತ್ತದೆ ಎಂದರು. ರಸ್ತೆ, ಸೇತುವೆ, ಸರ್ಕಾರಿ ಕಟ್ಟಡಗಳು ಹಾಳಾಗಿವೆ. ಹಿಂದೆ ಅತಿವೃಷ್ಠಿಯಿಂದಾಗಿ ಹಾನಿ ಸಂಭವಿಸಿದರೆ ರಾಜ್ಯ ಸರ್ಕಾರ ಪರಿಹಾರ ನೀಡುತ್ತಿತ್ತು. ಆದರೆ ಈ ಸರ್ಕಾರದಲ್ಲಿ ಆ ವ್ಯವಸ್ಥೆ ಇಲ್ಲವಾಗಿದೆ. ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್‌ ಅನುದಾನ ಬಿಟ್ಟರೆ ಪರಿಹಾರ ನೀಡಲು ಅಧಿಕಾರಿಗಳ ಬಳಿ ಅನುದಾನವಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ