ಲೋಕಸಭಾ ಚುನಾವಣೆ ಫಲಿತಾಂಶ 2024: ಉತ್ತರದಲ್ಲಿ ಬಿಜೆಪಿಗೆ ‘ಶೋಭೆ’ ಕರಂದ್ಲಾಜೆ..!

By Kannadaprabha NewsFirst Published Jun 5, 2024, 1:24 PM IST
Highlights

ಶೋಭಾ ಕರಂದ್ಲಾಜೆ ಅವರು 34 ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 9,86,049 ಮತಗಳನ್ನು ಪಡೆಯುವ ಮೂಲಕ ತಮ್ಮ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್‌ಗೌಡ ಅವರ ವಿರುದ್ಧ 2,59,476 ಮತಗಳ ಅಂತರದಿಂದ ಜಯಗಳಿಸಿದರು. ರಾಜೀವ್‌ಗೌಡ ಅವರು 7,26,573 ಮತಗಳನ್ನು ಪಡೆಯುವ ಮೂಲಕ ಪರಾಭವಗೊಳ್ಳಬೇಕಾಯಿತು.
 

ಬೆಂಗಳೂರು(ಜೂ.05):  ಉಡುಪಿ ಚಿಕ್ಕಮಗಳೂರು ಕ್ಷೇತ್ರ ಬದಲಿಸಿ ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕ್ಷೇತ್ರದ ಮತದಾರರು ಕೈಹಿಡಿದಿದ್ದು, ನಿರೀಕ್ಷೆಗೂ ಮೀರಿ 2,59 ಲಕ್ಷ ಮತಗಳಿಗೂ ಹೆಚ್ಚು ಅಂತರದ ಭರ್ಜರಿ ಗೆಲುವು ನೀಡಿದ್ದಾರೆ.

ಇದರೊಂದಿಗೆ ಸತತ 4ನೇ ಬಾರಿ ಬಿಜೆಪಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ತನ್ನ ಭದ್ರಕೋಟೆಯನ್ನು ಮತ್ತಷ್ಟು ಸುಭದ್ರಪಡಿಸಿಕೊಂಡಿದೆ. ಶೋಭಾ ಕರಂದ್ಲಾಜೆ ಅವರು 34 ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 9,86,049 ಮತಗಳನ್ನು ಪಡೆಯುವ ಮೂಲಕ ತಮ್ಮ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ. ಎಂ.ವಿ. ರಾಜೀವ್‌ಗೌಡ ಅವರ ವಿರುದ್ಧ 2,59,476 ಮತಗಳ ಅಂತರದಿಂದ ಜಯಗಳಿಸಿದರು. ರಾಜೀವ್‌ಗೌಡ ಅವರು 7,26,573 ಮತಗಳನ್ನು ಪಡೆಯುವ ಮೂಲಕ ಪರಾಭವಗೊಳ್ಳಬೇಕಾಯಿತು.

Latest Videos

ದೇವೇಗೌಡರ ಕುಟುಂಬದ ವಿರುದ್ಧ ಡಿ.ಕೆ.ಶಿವಕುಮಾರ್‌ಗೆ 3ನೇ ಸೋಲು..!

ನಗರದ ಸೇಂಟ್ ಜೋಸೆಫ್ ಮತ ಎಣಿಕೆ ಕೇಂದ್ರದಲ್ಲಿ ಮಂಗಳವಾರ ನಡೆದ ಕ್ಷೇತ್ರದ ಮತ ಎಣಿಕೆಯಲ್ಲಿ ಒಟ್ಟು 34 ಸುತ್ತಿನ ಮತ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲೇ 39,418 ಮತಗಳನ್ನು ಪಡೆದು 10 ಸಾವಿರ ಮತಗಳ ಮುನ್ನಡೆ ಆರಂಭಿಸಿದ ಶೋಭಾ ಕರಂದ್ಲಾಜೆ ಅವರು ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಅಂತಿಮ ಸುತ್ತಿನ ಮತ ಎಣಿಕೆ ಮುಗಿದಾಗ ಒಟ್ಟು 2.59 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಅಭೂತಪೂರ್ವ ವಿಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಗೆದ್ದು ಪ್ರಧಾನಿ ಮೋದಿ ಸರ್ಕಾರದಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಕೊನೇ ಕ್ಷಣದಲ್ಲಿ ಕ್ಷೇತ್ರದಲ್ಲಿ ‘ಶೋಭಾ ಗೋ ಬ್ಯಾಕ್‌’ ಅಭಿಯಾನ ಎದುರಾದ ಕಾರಣ ಬೆಂಗಳೂರು ಉತ್ತರ ಕ್ಷೇತ್ರಕ್ಕೆ ವಲಸೆ ಬಂದಿದ್ದರು. ಇಲ್ಲಿ ನಿರಾಯಾಸವಾಗಿ ಜಯ ಗಳಿಸಿದ್ದಾರೆ. ಬಿಜೆಪಿ ಗೆಲ್ಲುತ್ತಲೇ ಮತ ಎಣಿಕೆ ಕೇಂದ್ರದ ಹೊರಗೆ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಶೋಭಾ ಕರಂದ್ಲಾಜೆ ಅವರಿಗೆ ಸಹಿ ತಿನಿಸಿ ಸಂಭ್ರಮಿಸಿದರು.

ಕ್ಷೇತ್ರದಲ್ಲಿ ಹಿಡಿತ ಹೊಂದಿದ್ದ ಶೋಭಾಶೋಭಾ ಕರಂದ್ಲಾಜೆ ಅವರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ 2008ರಲ್ಲಿ ಗೆಲವು ಸಾಧಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಆಡಳಿತದ ಚುಕ್ಕಾಣಿ ಹಿಡಿಸಿದ್ದ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಇಂಧನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಹಾಗೆಯೇ 2013ರ ಚುನಾವಣೆಯಲ್ಲಿ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕೆಜೆಪಿಯಿಂದ ರಾಜಾಜಿನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸುರೇಶ್‌ಕುಮಾರ್ ವಿರುದ್ಧ ಸೋಲನುಭವಿಸಿದ್ದರು. ಹೀಗಾಗಿ, ಕಳೆದ 15 ವರ್ಷಗಳಿಂದಲೇ ಬೆಂಗಳೂರು ರಾಜಕಾರಣದಲ್ಲಿ ಹಿಡಿತ ಹೊಂದಿರುವುದು ಕೂಡ ಲೋಕಸಭಾ ಚುನಾವಣೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸತತ 3ನೇ ಬಾರಿ ಬಿಜೆಪಿ ಗದ್ದುಗೆ ಏರಿದ್ದು ಹೇಗೆ?

ಹಿಂದಿನ 3 ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು

2009ರಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಪ್ ಅವರ ವಿರುದ್ಧ ಬಿಜೆಪಿಯಿಂದ ಡಿ.ಬಿ.ಚಂದ್ರೇಗೌಡ ಗೆಲುವು ಸಾಧಿಸಿದ್ದರು. ಆ ನಂತರ 2013 ಮತ್ತು 2019ರಲ್ಲಿ ಡಿ.ವಿ.ಸದಾನಂದಗೌಡ ಅವರು ಗೆಲುವು ಸಾಧಿಸಿದ್ದರು. ನಿರಂತರವಾಗಿ 4ನೇ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದಂತಾಗಿದೆ. 4 ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯೇ ಪರಾಭವಗೊಂಡಿದ್ದಾರೆ.

ಎರಡೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿರುವುದು ಖುಷಿಯ ವಿಚಾರವಾಗಿದೆ. ದೇಶದಲ್ಲಿ ಎನ್‌ಡಿಎ 400ಕ್ಕೂ ಹೆಚ್ಷು ಸ್ಥಾನ ಗಳಿಸುವ ನೀರೀಕ್ಷೆ ಇತ್ತು. ಆದರೆ, ಕಾಂಗ್ರೆಸ್‌ನ ಸುಳ್ಳು ಭರವಸೆಗಳಿಂದಾಗಿ ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಆಂಧ್ರ ಪ್ರದೇಶ ಮತ್ತು ಒರಿಸ್ಸಾ ರಾಜ್ಯದಲ್ಲಿ ನಾವು ಗೆಲವು ಸಾಧಿಸಿರುವುದು ಖುಷಿಯ ವಿಚಾರವಾಗಿದೆ. ದೇಶದಲ್ಲಿ ಮತ್ತೊಂದು ಅವಧಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆ ಆಗಲಿದೆ ಎಂದು  ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.  

click me!