
ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದಲ್ಲಿ ಫಡ್ನವೀಸ್ ಮತ್ತು ಡಿಸಿಎಂ ಏಕನಾಥ್ ಶಿಂಧೆ ನಡುವೆ ಬಿರುಕು ಮೂಡಿರುವ ಹೊತ್ತಿನಲ್ಲೇ, ಶಿಂಧೆ ಬಣದ ಶಿವಸೇನೆಯ 20 ಶಾಸಕರಿಗೆ ನೀಡಲಾಗಿದ್ದ ವೈ ಶ್ರೇಣಿಯ ಭದ್ರತೆಯನ್ನು ಸರ್ಕಾರ ಹಿಂದಕ್ಕೆ ಪಡೆದಿದೆ. ಇದು ಮುಂಬರುವ ದಿನಗಳಲ್ಲಿ ಎರಡೂ ಪಕ್ಷಗಳ ನಡುವಿನ ವೈಮನಸ್ಯವನ್ನು ಇನ್ನಷ್ಟು ದೊಡ್ಡ ಮಾಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಗೃಹ ಸಚಿವಾಲಯವು ಬಿಜೆಪಿ, ಎನ್‌ಸಿಪಿ, ಶಿವಸೇನೆಯ ಹಲವು ಶಾಸಕರ ಭದ್ರತೆ ಕಡಿತಗೊಳಿಸಿದ್ದರೂ ಅದರಲ್ಲಿ ಶಿವಸೇನೆಯವರೇ ಅಧಿಕವಿದ್ದಾರೆ. ಇದು ಶಿಂಧೆ ಬಣದ ಆಕ್ರೋಶಕ್ಕೆ ಕಾರಣವಾಗಿದೆ. 2022ರಲ್ಲಿ ಶಿಂಧೆ ಶಿವಸೇನೆಯಿಂದ ಬಂಡಾಯವೆದ್ದು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾಗ ಸರ್ಕಾರದಿಂದ ಪಕ್ಷದ 44 ಶಾಸಕರು ಹಾಗೂ 11 ಲೋಕಸಭಾ ಸದಸ್ಯರಿಗೆ ವೈ ಶ್ರೇಣಿಯ ಭದ್ರತೆ ಒದಗಿಸಲಾಗಿತ್ತು. ಇದೀಗ ಅದನ್ನು ಕಡಿತ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ದೇವೆಂದ್ರ ಫಡ್ನವೀಸ್, ‘ಕಾಲಕಾಲಕ್ಕೆ ನಡೆಯುವ ಭದ್ರತಾ ಪರಿಶೀಲನಾ ಸಮಿತಿಯ ಶಿಫಾರಸಿನನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಿರುಕು ಹೊಸತಲ್ಲ:
ಮೊದಲಿಗೆ ಸಿಎಂ ಪಟ್ಟ ಕೈತಪ್ಪಿದ್ದಕ್ಕೆ ಶಿಂಧೆ ಗರಂ ಆಗಿದ್ದರು, ಬಳಿಕ ಸೂಕ್ತ ಖಾತೆ ನೀಡದೇ ಹೋಗಿದ್ದು ಅವರ ಅಸಮಾಧಾನ ಇನ್ನಷ್ಟು ಹೆಚ್ಚಿಸಿತ್ತು. ಹೀಗಾಗಿ ಇತ್ತೀಚೆಗೆ ನಡೆದ ಎರಡು ಸಚಿವ ಸಂಪುಟ ಸಭೆಗೆ ಶಿಂಧೆ ಗೈರಾಗಿದ್ದರು. ಜೊತೆಗೆ ರಾಯ್‌ಗಢ, ನಾಸಿಕ್‌ಗೆ ಉಸ್ತುವಾರಿ ನೇಮಿಸುವ ಬಗ್ಗೆಯೂ ಶಿಂಧೆ ಹಾಗೂ ಅಜಿತ್ ಪವಾರ್ ನಡುವೆ ವೈಮನಸ್ಯ ಉಂಟಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.