
ಬೆಂಗಳೂರು (ಜು.16): ಪರಿಶಿಷ್ಟ ಜಾತಿ/ಪಂಗಡದ ನೌಕರರಿಗೆ ಮುಂಬಡ್ತಿ ನೀಡಲು ನಿಗದಿ ಮಾಡಲಾಗಿರುವ ಸರ್ಕಾರ ರೋಸ್ಟರ್ ಬಿಂದುವನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮಲ್ಲಿಕಾರ್ಜುನ ಖರ್ಗೆ, ಎಸ್ಸಿ/ಎಸ್ಟಿ ನೌಕರರು, ಅಧಿಕಾರಿಗಳಿಗೆ ಮುಂಬಡ್ತಿ ನೀಡುವುದಕ್ಕೆ ಸಂಬಂಧಿಸಿ ಸರ್ಕಾರ ಈಗಾಗಲೇ ರೋಸ್ಟರ್ ಬಿಂದು ನಿಗದಿ ಮಾಡಲಾಗಿದೆ. ಆದರೆ, ಕೆಲ ಇಲಾಖೆ ಹಿರಿಯ ಅಧಿಕಾರಿಗಳು ಅದನ್ನು ಪಾಲಿಸದೆ ಮುಂಬಡ್ತಿ ನೀಡುತ್ತಿದ್ದಾರೆ.
ಇದರಿಂದ ಎಸ್ಸಿ/ಎಸ್ಟಿ ಅಧಿಕಾರಿ, ನೌಕರರಿಗೆ ಅನ್ಯಾಯವಾಗುವಂತಾಗುತ್ತಿದೆ. ಈ ಕುರಿತು ಎಸ್ಸಿ/ಎಸ್ಟಿ ನೌಕರ ಸಂಘದ ಪದಾಧಿಕಾರಿಗಳು ಈಗಾಗಲೇ ನಿಮಗೆ ದೂರನ್ನು ನೀಡಿದ್ದಾರೆ. ಇದೀಗ ಸಂಘದ ಪದಾಧಿಕಾರಿಗಳು ಎಸ್ಸಿ/ಎಸ್ಟಿ ನೌಕರರಿಗೆ, ಅಧಿಕಾರಿಗಳಿಗೆ ಮುಂಬಡ್ತಿ ವಿಚಾರದಲ್ಲಾಗುತ್ತಿರುವ ಸಮಸ್ಯೆಗಳ ಕುರಿತು ನಗೂ ಪತ್ರದ ಮೂಲಕ ದೂರು ನೀಡಿದ್ದಾರೆ. ಅದರಂತೆ ಸರ್ಕಾರ ನಿಗದಿ ಮಾಡಿರುವ ರೋಸ್ಟರ್ ಬಿಂದುವಿನಂತೆ ಮುಂಬಡ್ತಿ ನೀಡದ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸರ್ಕಾರದ ಆದೇಶ ಪಾಲಿಸುವಂತೆ ಸೂಚಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಅಸಮಾಧಾನ ಉಂಟಾಗಿ ಸರ್ಕಾರದ ಕೆಲಸಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಎಸ್ಸಿ/ಎಸ್ಟಿ ನೌಕರರು, ಅಧಿಕಾರಿಗಳ ಮುಂಬಡ್ತಿ ವಿಚಾರದಲ್ಲಾಗುತ್ತಿರುವ ಲೋಪ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ತಿಳಿಸಿದ್ದಾರೆ.
ನೌಕರರಿಗೆ ಅನ್ಯಾಯ ಆಗಿದ್ದರೆ ಇಲಾಖೆ ಕ್ರಮ: ಮಹದೇವಪ್ಪಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಅನ್ಯಾಯ ಆಗಿದ್ದರೆ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ। ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಮಂಗಳವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಅನ್ಯಾಯ ಆಗಿದ್ದರೆ ವಿಜಿಲೆನ್ಸ್ ವಿಂಗ್ ಇದ್ದು, ಸಮಸ್ಯೆಗಳ ಬಗ್ಗೆ ಪರಿಶೀಲಿಸಲಿದೆ. ಈ ಬಗ್ಗೆ ನನ್ನ ಗಮನಕ್ಕೂ ಬಂದಿದ್ದು, ಮುಖ್ಯಮಂತ್ರಿಗೆ ಹೇಳಿದ್ದೇನೆ.
ಈ ಸಂಬಂಧ ಎಐಸಿಸಿ ಅಧ್ಯಕ್ಷರು ಮುಖ್ಯಮಂತ್ರಿಗೆ ಪತ್ರ ಬರೆದಿರುವ ವಿಚಾರ ನನಗೆ ಗೊತ್ತಿಲ್ಲ ಎಂದರು. ಸಿಗಂದೂರು ಸೇತುವೆ ಉದ್ಘಾಟನೆ ಆಹ್ವಾನ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, ಶತಮಾನಗಳಿಂದ ಜನರು ಲಾಂಚ್‌ನಲ್ಲಿ ಹೋಗುತ್ತಿದ್ದರು. ಸೇತುವೆ ಆಗಿರುವುದು ಖುಷಿ ವಿಚಾರ. ನಾವು ಗಣತಂತ್ರ ವ್ಯವಸ್ಥೆಯಲ್ಲಿದ್ದೇವೆ. ನಾನೇ ಮಾಡಿದ್ದು ಎನ್ನುವ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಸೇತುವೆಗೆ ಡಿಪಿಆರ್ ಮಾಡಿದ್ದು ರಾಜ್ಯ ಸರ್ಕಾರ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಮಾಡುವುದು ತಪ್ಪು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.