ಸತೀಶ್ ಜಾರಕಿಹೊಳಿ ಹೊಸ ಪ್ರಯತ್ನ : ತೀರ್ಮಾನದಲ್ಲಿ ಕುತೂಹಲ

By Kannadaprabha NewsFirst Published Mar 25, 2021, 7:14 AM IST
Highlights

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಇದೀಗ ಕುತೂಹಲ ಹುಟ್ಟಿಸಿದೆ. ಕಾಂಗ್ರೆಸ್ ಅಭ್ಯರ್ಥಿ ವಿಚಾರವೀಗ ಎಲ್ಲರಲ್ಲಿಯೂ ಕುತೂಹಲ ಸೃಷ್ಟಿಗೆ ಕಾರಣವಾಗಿದೆ. 

ಬೆಂಗಳೂರು (ಮಾ.25):  ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರೇ ಅಭ್ಯರ್ಥಿ ಎಂದು ರಾಜ್ಯ ನಾಯಕರು ಬಹಿರಂಗ ಹೇಳಿಕೆ ನೀಡುತ್ತಿದ್ದರೂ ತಮ್ಮ ಬದಲಾಗಿ ಬೇರೆ ಅಭ್ಯರ್ಥಿಗೆ ಟಿಕೆಟ್‌ ಕೊಡಿಸಲು ಸತೀಶ್‌ ಜಾರಕಿಹೊಳಿ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಮೂಲಗಳ ಪ್ರಕಾರ, ಬೆಳಗಾವಿ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎಂಬುದನ್ನು ಕಾಂಗ್ರೆಸ್‌ ಹೈಕಮಾಂಡ್‌ ಭಾನುವಾರ ಘೋಷಣೆ ಮಾಡಲಿದೆ. ಹೀಗಾಗಿ ಭಾನುವಾರದ ಪಟ್ಟಿಯಲ್ಲಿ ಸತೀಶ್‌ ಹೆಸರು ಇರುತ್ತದೆಯೋ ಅಥವಾ ಇಲ್ಲವೋ ಎಂಬ ಕುತೂಹಲ ನಿರ್ಮಾಣವಾಗಿದೆ.

ಬೆಳಗಾವಿ ಕ್ಷೇತ್ರಕ್ಕೆ ಸತೀಶ್‌ ಜಾರಕಿಹೊಳಿ ಅವರ ಹೆಸರನ್ನು ರಾಜ್ಯ ನಾಯಕರು ಅಂತಿಮಗೊಳಿಸಿ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದಾರೆ. ಬುಧವಾರ ಖುದ್ದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಳಗಾವಿ ಉಪ ಚುನಾವಣೆಯಲ್ಲಿ ಸತೀಶ್‌ ಅವರೇ ಸ್ಪರ್ಧಿ. ಇದಕ್ಕೆ ಹೈಕಮಾಂಡ್‌ ಕೂಡ ಒಪ್ಪಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಫೈನಲ್! .

ಇದರ ಬೆನ್ನಲ್ಲೇ ಸತೀಶ್‌ ಅವರಿಗೆ ಬಿ-ಫಾರಂ ಕೂಡ ವಿತರಿಸಲಾಯಿತು ಎಂಬ ವದಂತಿಯೂ ಹಬ್ಬಿತ್ತು. ಆದರೆ, ಇದನ್ನು ಸತೀಶ್‌ ಜಾರಕಿಹೊಳಿ ಅವರ ಆಪ್ತರು ಸ್ಪಷ್ಟವಾಗಿ ನಿರಾಕರಿಸಿದರು. ಇನ್ನೂ ಹೈಕಮಾಂಡ್‌ನಿಂದ ಅಭ್ಯರ್ಥಿ ಘೋಷಣೆಯಾಗಿಲ್ಲ. ಅಷ್ಟರಲ್ಲೇ ಬಿ-ಫಾರಂ ವಿತರಣೆಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಈ ಆಪ್ತರ ಪ್ರಕಾರ, ರಾಜ್ಯ ರಾಜಕಾರಣದಿಂದ ಹೊರ ಹೋಗಲು ಸತೀಶ್‌ ಅವರಿಗೆ ಮನಸ್ಸಿಲ್ಲ. ಜತೆಗೆ, ರಮೇಶ್‌ ಜಾರಕಿಹೊಳಿ ಪ್ರಕರಣವೂ ಚರ್ಚೆಯಲ್ಲಿರುವ ಈ ಹಂತದಲ್ಲಿ ಚುನಾವಣಾ ಕಣಕ್ಕೆ ಇಳಿಯುವುದು ಸರಿಯಲ್ಲ ಎಂಬುದು ಅವರ ಭಾವನೆ. ಇದನ್ನು ರಾಜ್ಯ ನಾಯಕರ ಮುಂದೆಯೂ ಅವರು ವ್ಯಕ್ತಪಡಿಸಿದ್ದರು. ಇದೀಗ ಹೈಕಮಾಂಡ್‌ನ ಕೆಲ ನಾಯಕರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಅಲ್ಲದೆ, ತಮ್ಮ ಬದಲಾಗಿ ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್‌ನ ಅಧ್ಯಕ್ಷ ವಿನಯ್‌ ನವಲಗಟ್ಟಿಹೆಸರನ್ನು ಅವರು ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ, ರಾಜ್ಯ ನಾಯಕರು ಮಾತ್ರ ಟಿಕೆಟ್‌ ಸತೀಶ್‌ ಜಾರಕಿಹೊಳಿಗೆ ಪಕ್ಕಾ ಆಗಿದೆ ಎಂದೇ ಹೇಳುತ್ತಾರೆ. ಹೀಗಾಗಿ ಹೈಮಾಂಡ್‌ ಭಾನುವಾರ ಹೊರಡಿಸಲಿರುವ ಅಭ್ಯರ್ಥಿ ಪಟ್ಟಿಯಲ್ಲಿ ಸತೀಶ್‌ ಹೆಸರು ಇರುವುದೇ ಎಂಬುದನ್ನು ಕಾದು ನೋಡಬೇಕಿದೆ.

click me!