
ಕೊಪ್ಪಳ (ಜು.19): ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರು ಕೇಂದ್ರ ಎನ್‌ಡಿಎ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದರೆ ಕೇಂದ್ರ ಸರ್ಕಾರಕ್ಕೆ ಏನಾಗುತ್ತದೆ ಎಂಬುವುದರ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುತ್ತಿಲ್ಲವೆಂದು ಪ್ರಶ್ನಿಸಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್, ಕೇಂದ್ರ ಸರ್ಕಾರ ಐಸಿಯುನಲ್ಲಿದೆ. ಆದರೂ ಸಹ ಬಿಜೆಪಿ ನಾಯಕರು ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಿದೆ ಎಂದು ಹೇಳುತ್ತಿದ್ದಾರೆಂದು ಕಿಡಿಕಾರಿದರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಿಎಂ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕುರಿತು ಮಾತನಾಡುವುದನ್ನು ಬಿಡಲಿ.
ಅದನ್ನು ಕಾಂಗ್ರೆಸ್ ಹೈಕಮಾಂಡ್ ನೋಡಿಕೊಳ್ಳುತ್ತದೆ. ರಾಜ್ಯದಲ್ಲಿ 136 ಶಾಸಕರೊಂದಿಗೆ ಸರ್ಕಾರ ಸುಭದ್ರವಾಗಿದೆ ಎಂದರು. ಸಿಎಂ ಬದಲಾವಣೆ ಕುರಿತು ಹೈಕಮಾಂಡ್ ಮಾತನಾಡದಂತೆ ಹೇಳಿರುವುದರಿಂದ ನಾನೇನು ಮಾತನಾಡುವುದಿಲ್ಲ ಎಂದ ಅವರು, ಸುಖಾಸುಮ್ಮನೇ ಸಿಎಂ ಬದಲಾವಣೆ, ರಾಜ್ಯ ಉಸ್ತುವಾರಿ ಸುರ್ಜೇವಾಲ ಸೂಪರ್ ಸಿಎಂ ಎಂದೆಲ್ಲ ಆಡಿಕೊಳ್ಳುವುದನ್ನು ಬಿಡಬೇಕು. ತಮ್ಮ ಪಕ್ಷದಲ್ಲಿ ಏನೇನು ಆಗುತ್ತಿದೆ ಎನ್ನುವುದನ್ನು ಮೊದಲು ತಿಳಿದುಕೊಂಡು ಮಾತನಾಡಲಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಪಕ್ಷದಲ್ಲಿ ಶಿಸ್ತು ತರಲು ಸುರ್ಜೇವಾಲ ಅವರು ಶಾಸಕರು ಮತ್ತು ಸಚಿವರೊಂದಿಗೆ ಮಾತನಾಡಿದ್ದಾರೆ. ಅದಕ್ಕೆ ಸೂಪರ್ ಸಿಎಂ ಎನ್ನುವುದು ಸರಿಯಲ್ಲ. ಹೈಕಮಾಂಡ್ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದರು. ತಮ್ಮನ್ನು ವಿಶ್ವಆರ್ಥಿಕ ಸಲಹೆಗಾರ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಬಿರುದುಕೊಟ್ಟಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವರು, ನಾನು ವೈಯಕ್ತಿಕ ವಿಷಯಗಳ ಕುರಿತು ಮಾತನಾಡುವುದಿಲ್ಲ. ಸೈದ್ಧಾಂತಿಕ ವಿಚಾರವನ್ನು ಅವರು ಪ್ರಸ್ತಾಪ ಮಾಡಿದ್ದರೆ ಮಾತನಾಡಬಹುದು ಎಂದರು.
ಕಾರ್ಮಿಕ ಇಲಾಖೆಯಲ್ಲಿ ಅಕ್ರಮ ನಡೆದಿದೆ ಎಂದು ಸಾರ್ವತ್ರಿಕವಾಗಿ ಆರೋಪ ಮಾಡುವುದಿಲ್ಲ. ನಿಖರವಾಗಿ ಆರೋಪ ಮಾಡಿದರೆ ಖಂಡಿತ ಕ್ರಮ ವಹಿಸಲಾಗುವುದು ಎಂದ ಲಾಡ್, ಧರ್ಮಸ್ಥಳದ ಘಟನೆ ಕುರಿತು ಸರ್ಕಾರ ಯಾರ ಬೆಂಬಲಕ್ಕೂ ನಿಂತಿಲ್ಲ. ಕಾನೂನಾತ್ಮಕವಾಗಿ ಏನಾಗಿದೆ ಎಂದು ವಿಚಾರಿಸಲಾಗುತ್ತಿದೆ. ವಿನಾಕಾರಣ ರಾಜ್ಯ ಸರ್ಕಾರವನ್ನು ಎಳೆದು ತರುವುದು ಸರಿಯಲ್ಲ ಎಂದರು. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಭಯ್ಯಾಪುರ, ಪ್ರಧಾನ ಕಾರ್ಯದರ್ಶಿ ಕೃಷ್ಠ ಇಟ್ಟಂಗಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ನಗರಸಭೆ ಸದಸ್ಯ ಅಕ್ಬರ್ ಪಾಷಾ, ಮುತ್ತು ಕುಷ್ಟಗಿ, ಗುರುರಾಜ ಹಲಿಗೇರಿ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.