ತೈಲ ಬೆಲೆ ಏರಿಕೆಗೆ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸದ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಸಚಿವ ಸಂತೋಷ್ ಲಾಡ್

Published : Apr 01, 2026, 07:27 PM IST
Minister Santosh Lad

ಸಾರಾಂಶ

ಇಂಧನ ತೈಲ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ತೈಲ ಸಂಗ್ರಹಣಾ ವೈಫಲ್ಯವೇ ಕಾರಣ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ. ಅಲ್ಲದೆ, ಖಾಸಗಿ ಕಂಪನಿಗಳು ಗ್ಯಾಸ್ ದರ ಹೆಚ್ಚಿಸಿದ್ದು, ಶೆಲ್ ಬಂಕ್‌ಗಳಲ್ಲಿ ದರ ಇಳಿಸಲು ಸೂಚಿಸಿರುವುದಾಗಿ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.

ಧಾರವಾಡ (ಏ.01): ದೇಶದಲ್ಲಿ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿರುವುದೇ ದಿನೇ ದಿನೇ ಎಲ್‌ಪಿಜಿ (LPG), ಪೆಟ್ರೋಲ್ ಮತ್ತು ಡೀಸೆಲ್ ಇಂಧನ ತೈಲ ಬೆಲೆಗಳ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧಾರವಾಡದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಮ್ಮ ದೇಶದಲ್ಲಿ 2014ರಲ್ಲಿ ಯುಪಿಎ ಸರ್ಕಾರವಿದ್ದಾಗ ದೇಶದಲ್ಲಿ 5.3 ಮಿಲಿಯನ್ ಮೆಟ್ರಿಕ್ ಟನ್ ತೈಲ ಸಂಗ್ರಹಣಾ ಸಾಮರ್ಥ್ಯವಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಳೆದ 12 ವರ್ಷಗಳಲ್ಲಿ ಈ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಸಂಗ್ರಹಣೆಯನ್ನು 6 ಮಿಲಿಯನ್ ಮೆಟ್ರಿಕ್ ಟನ್ ಅಧಿಕ ಮಾಡಬೇಕು ಎಂದು ಯೋಜಿಸಿದ್ದರು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ' ಎಂದು ಟೀಕಿಸಿದರು.

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಈಗಾಗಲೇ ಒಂದು ವರ್ಷಕ್ಕೆ ಬೇಕಾಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಂಡಿವೆ. ಆದರೆ ಭಾರತದಲ್ಲಿ ಅಂತಹ ದೂರದೃಷ್ಟಿಯ ಕೊರತೆಯಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಜನತೆಗೆ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟುತ್ತಿದ್ದು, ಇದಕ್ಕೆ ಕೇಂದ್ರದ ತಪ್ಪು ನೀತಿಗಳೇ ಕಾರಣ ಎಂದು ಅವರು ಪ್ರತಿಪಾದಿಸಿದರು.

ದಾವಣಗೆರೆ ಉಪ ಚುನಾವಣೆ ಮತ್ತು ಮುಸ್ಲಿಂ ಸಮುದಾಯ:

ದಾವಣಗೆರೆ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಸಚಿವರು, 'ರಾಜಕೀಯದಲ್ಲಿ ಅಸಮಾಧಾನಗಳು ಇರುವುದು ಸಹಜ. ಆದರೆ ಈಗಾಗಲೇ ರಾಜ್ಯ ನಾಯಕರು ಮುಸ್ಲಿಂ ಸಮುದಾಯದ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸಮಾಧಾನಗೊಂಡಿದ್ದ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ. ಇವತ್ತಿನಿಂದ ನಾನು ಕೂಡ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ನಮಗಿದೆ' ಎಂದು ಭರವಸೆ ವ್ಯಕ್ತಪಡಿಸಿದರು.

ಡಿಕೆಶಿ ವಿರುದ್ಧ ಘೋಷಣೆ ವಿಚಾರ:

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕೆಲವರು ಘೋಷಣೆ ಕೂಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಸಂತೋಷ್ ಲಾಡ್ ನಿರಾಕರಿಸಿದರು. 'ಆ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸಾರ್ವಜನಿಕ ಜೀವನದಲ್ಲಿ ಅಥವಾ ಪಕ್ಷದ ಒಳಗಡೆ ಇಂತಹ ಸಣ್ಣಪುಟ್ಟ ವಿಷಯಗಳು ಬಂದಾಗ ಪಕ್ಷದ ಹೈಕಮಾಂಡ್ ಅದನ್ನು ಗಮನಿಸುತ್ತದೆ ಮತ್ತು ಸರಿಪಡಿಸುತ್ತದೆ' ಎಂದು ಅವರು ಚುಟುಕಾಗಿ ಉತ್ತರಿಸಿದರು.

ಶೆಲ್ ಪೆಟ್ರೋಲ್ ಬಂಕ್‌ಗಳಲ್ಲಿ ದರ ಕಡಿತಕ್ಕೆ ಸೂಚನೆ-ಮುನಿಯಪ್ಪ

ಬಾಗಲಕೋಟೆಯಲ್ಲಿ ಉಪಚುನಾವಣಾ ಪ್ರಚಾರಕ್ಕೆ ಬಂದ ವೇಳೆ ಮಾಧ್ಯಮಗಳೊಂದಿಗೆ ರಾಜ್ಯದಲ್ಲಿನ ಗ್ಯಾಸ್ ಸಮಸ್ಯೆ ವಿಚಾರದ ಬಗ್ಗೆ ಮಾತನಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಜನರು ಸುಮ್ಮನೆ ಆತಂಕಪಡುತ್ತಿದ್ದಾರೆ. ನಮ್ಮ ಬಳಿ ಪ್ರತಿನಿತ್ಯ 3000 ಆಟೋ ಗ್ಯಾಸ್ ತಗೊಳ್ತಾಯಿದ್ದರು. ಅಷ್ಟು ವ್ಯವಸ್ಥೆಯನ್ನು ಮಾಡಿದ್ದೀವಿ. ಅದರದ್ದೇನು ಪ್ರಾಬ್ಲಮ್ ಇಲ್ಲ. ಆದರೆ, ಯಾರು ಈ ಗೌರ್ನಮೆಂಟ್ ಕಂಪನಿಗಳು ಬಿಟ್ಟು ಪ್ರೈವೇಟ್ ಕಂಪನಿಗಳ ಹತ್ರ ಹೋಗ್ತಾ ಇದ್ದಾರೆ, ಹೀಗಾಗಿ ಪ್ರೈವೇಟ್ ಕಂಪನಿಯವರು ರೇಟ್ ಜಾಸ್ತಿ ಮಾಡಿದ್ದಾರೆ. ಹೀಗಾಗಿ ಜನರು ಅಲ್ಲಿ ಬಿಟ್ಟು ಇಲ್ಲಿ ಬರುತ್ತಿದ್ದಾರೆ. ಅದು ಆತಂಕ ಇರೋದು ಎಂದರು. 

ಈ ಬಗ್ಗೆ ಪ್ರೈವೇಟ್ ಕಂಪನಿವರೆಗೂ ಕೂಡ ಹೇಳ್ತಾ ಇದ್ದೇವೆ. ಇಂತಹ ಕಷ್ಟ ಪರಿಸ್ಥಿತಿಯಲ್ಲಿ ಗೌರ್ನಮೆಂಟ್ ಏನ್ ರೇಟ್ ಕೊಡುತ್ತೋ ಅದೇ ರೀತಿ ಕೊಡಬೇಕು. ಕೇಂದ್ರದ ಮಂತ್ರಿಗಳಿಗೂ ಕೂಡ ಮಾತನಾಡಿದ್ದೇನೆ, ಈ ಬಗ್ಗೆ ಲೆಟರ್ ಕೂಡ ಬರೆದಿದ್ದೇನೆ. ಏನು ಖಾಸಗಿ ಕಂಪನಿಗಳಿವೆ ಅವು ಸಹ ಇದೇ ರೀತಿ ಮಾಡಬೇಕು. ಸರ್ಕಾರ ಕೊಡೋ ರೇಟ್ ಗೆ ಕೊಡಬೇಕು. ಆತಂಕವನ್ನೂ ಮಾಡಕೂಡದು, ಹೆಚ್ಚಿಗೆ ಸಹ ಮಾಡಕೂಡದು. ಹೆಚ್ಚಿಗೆ ಮಾಡಿದ್ರೆ ಕಾನೂನು ಕ್ರಮ ಜರುಗಿಸುತ್ತೇವೆ. ಜೊತೆಗೆ ಶೆಲ್ ಪೆಟ್ರೋಲ್ ಬಂಕ್ ಗಳಲ್ಲಿನ ದರ ಕಡಿಮೆ ಮಾಡಬೇಕು ಅಂತ ಸರ್ಕಾರಕ್ಕೆ ಹೇಳಿದಿನಿ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಸಕ ಬಸನಗೌಡ ಯತ್ನಾಳ ಕಾಂಗ್ರೆಸ್ ಪರ ಕೆಲಸ ಮಾಡಬೇಕು: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಸರ್ಕಾರದಿಂದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್ ವಾಗ್ದಾಳಿ