
ಬೆಂಗಳೂರು (ಅ.13): ಬಿಜೆಪಿ ನಥಿಂಗ್ ಬಟ್ ತಾಲಿಬಾನ್ ಮನಸ್ಥಿತಿ. ತಾಲಿಬಾನ್ ವಿದೇಶಾಂಗ ಸಚಿವರು ಬಂದು ಮಹಿಳಾ ಪತ್ರಕರ್ತರು ಇರಬಾರದು ಎನ್ನುತ್ತಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಬಿಜೆಪಿಯವರ ಗಂಡಸ್ಥನ ಎಲ್ಲಿ ಹೋಯ್ತು? ದುರ್ಗಾ ಪೂಜೆ, ಆ ಪೂಜೆ, ಈ ಪೂಜೆ ಅಂತಾರಲ್ಲ, ಈಗ ಇದರ ಬಗ್ಗೆ ಚರ್ಚೆ ಮಾಡ್ತಾರಾ ಇವರು? ಎಂದು ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಪ್ರದೇಶಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಚಟುವಟಿಕೆಗಳನ್ನು ನಿಷೇಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿದೆ. ಈ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಸಚಿವ ಸಂತೋಷ್ ಲಾಡ್ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯನ್ನು ನೇರವಾಗಿ 'ತಾಲಿಬಾನ್ ಮನಸ್ಥಿತಿ'ಗೆ ಹೋಲಿಸುವ ಮೂಲಕ ಲಾಡ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಸರಕಾರಿ ಶಾಲೆ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಷೇಧಿಸುವ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಂತೋಷ್ ಲಾಡ್, 'ಪ್ರಿಯಾಂಕ್ ಖರ್ಗೆ ಮಾತನಾಡಿರೋದು ತಪ್ಪೇನಿಲ್ಲ. ಆರ್‌ಎಸ್‌ಎಸ್ 55 ವರ್ಷಗಳ ಕಾಲ ಭಾರತದ ಬಾವುಟ ಹಾರಿಸಲಿಲ್ಲ. ಅವರಷ್ಟಕ್ಕೆ ಅವರು ಘೋಷಣೆ ಮಾಡಿಕೊಳ್ಳಬಹುದು, ಆದರೆ ಇದು ರಿಜಿಸ್ಟರ್ಡ್ ಬಾಡಿನಾ? ಎಲ್ಲಿಯಾದರೂ ನೋಂದಣಿ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.
ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ನಥಿಂಗ್ ಬಟ್ ತಾಲಿಬಾನ್ ಮನಸ್ಥಿತಿ. ತಾಲಿಬಾನ್ ವಿದೇಶಾಂಗ ಸಚಿವರು ಬಂದು ಮಹಿಳಾ ಪತ್ರಕರ್ತರು ಇರಬಾರದು ಎನ್ನುತ್ತಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ? ಬಿಜೆಪಿಯವರ ಗಂಡಸ್ಥನ ಎಲ್ಲಿ ಹೋಯ್ತು? ದುರ್ಗಾ ಪೂಜೆ, ಆ ಪೂಜೆ, ಈ ಪೂಜೆ ಅಂತಾರಲ್ಲ, ಈಗ ಇದರ ಬಗ್ಗೆ ಚರ್ಚೆ ಮಾಡ್ತಾರಾ ಇವರು? ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸಿಎಜಿ ಅಧಿಕಾರಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆಗಳ ಬಗ್ಗೆಯೂ ಚರ್ಚೆ ನಡೆಯಬೇಕು ಎಂದರು.
ಈ ಹಿಂದೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೇ ಆರ್‌ಎಸ್‌ಎಸ್ ಅನ್ನು ಎರಡು ಬಾರಿ ನಿಷೇಧಿಸಿದ್ದರು ಎಂಬ ಐತಿಹಾಸಿಕ ಅಂಶವನ್ನು ಲಾಡ್ ನೆನಪಿಸಿದರು. ಹಿಂದುತ್ವದ ಬಗ್ಗೆ ಮಾತನಾಡುವುದನ್ನು ಬಿಟ್ಟರೆ ಆರ್‌ಎಸ್‌ಎಸ್ ಬೇರೇನನ್ನೂ ಮಾಡುತ್ತಿಲ್ಲ ಎಂದೂ ಟೀಕಿಸಿದರು.
ಇತ್ತೀಚೆಗೆ ಮುಖ್ಯಮಂತ್ರಿಗಳು ಸಚಿವರ ಸಭೆ ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು 'ಕಾಂಗ್ರೆಸ್ ಪಕ್ಷಕ್ಕೆ ಫಂಡಿಂಗ್ ಮಾಡಲು ಸಭೆ ಕರೆದಿದ್ದಾರೆ' ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಸಂತೋಷ್ ಲಾಡ್ ವ್ಯಂಗ್ಯವಾಗಿ ತಿರುಗೇಟು ನೀಡಿದರು. 'ನಾವು ಬಿಜೆಪಿಗೆ ಫಂಡಿಂಗ್ ಮಾಡೋದಕ್ಕೆ ಸಿಎಂ ಸಚಿವರ ಸಭೆ ಕರೆದಿರೋದು. ನಾವು ಮೋದಿ ಅವರಿಗೆ ಫಂಡ್ ಮಾಡ್ತೀವಿ' ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸಭೆಯ ಮೆನು ಬಗ್ಗೆ ಮಾತನಾಡಿದ ಅವರು, 'ಡಿನ್ನರ್‌ನಲ್ಲಿ ವೆಜ್, ನಾನ್ ವೆಜ್ ಎರಡು ಇರುತ್ತೆ. ಸಿದ್ದರಾಮಯ್ಯ ಸಾಹೇಬ್ರು ನಾಟಿ ಕೋಳಿ ಸಾರು ಹಾಕಿಸ್ತಾರೆ, ಕೊಸಂಬರಿ ಕೂಡ ಇರುತ್ತೆ. ಆದರೆ ಪೊಲಿಟಿಕಲ್ ಮೆನು ಗೊತ್ತಿಲ್ಲ, ಅಲ್ಲಿಗೆ ಹೋದ್ಮೇಲೆ ಗೊತ್ತಾಗುತ್ತೆ' ಎಂದು ಲಘು ಧಾಟಿಯಲ್ಲಿ ಉತ್ತರಿಸಿದರು. ಆರ್‌ಎಸ್‌ಎಸ್ ಚಟುವಟಿಕೆಗಳ ನಿಷೇಧದ ವಿಚಾರವಾಗಿ ಸಿಎಂ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಈ ಬಗ್ಗೆ ಚರ್ಚಿಸಿ ಶೀಘ್ರವೇ ತೀರ್ಮಾನ ಮಾಡಲಿದ್ದಾರೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳು ನಡೆಯಬಾರದು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಲಾಡ್ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.