* ‘ಪಂಜಾಬ್ ಗತಿಯೇ ರಾಜಸ್ಥಾನದಲ್ಲೂ ಆಗೋದು ಖಚಿತ’
* ಸೋನಿಯಾ ಗಾಂಧಿಗೆ ರಾಜಸ್ಥಾನ ನಾಯಕನ ಎಚ್ಚರಿಕೆ ಸಂದೇಶ
* ರಾಜಸ್ಥಾನದಲ್ಲಿ 2023ರ ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ
ಜೈಪುರ(ಏ.28): ತಕ್ಷಣವೇ ತಮಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಹೋದಲ್ಲಿ, ಪಂಜಾಬ್‌ನಲ್ಲಿ(Punjab) ಆದಂತೆ ಮುಂದಿನ ಚುನಾವಣೆಯಲ್ಲಿ ರಾಜಸ್ಥಾನದಲ್ಲೂ(Rajasthan) ಕಾಂಗ್ರೆಸ್ ಸೋಲು ಖಚಿತ ಎಂದು ಸಿಎಂ ಹುದ್ದೆಯ ಪ್ರಬಲ ಆಕಾಂಕ್ಷಿ ಸಚಿನ್ ಪೈಲಟ್(Sachin Pilot) ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಪಕ್ಷದಲ್ಲಿನ ತಮ್ಮ ಮುಂದಿನ ಸ್ಥಾನಮಾನವೇನು ಎಂಬುದರ ಬಗ್ಗೆ ಚರ್ಚಿಸಲು ಕಳೆದ ವಾರ ಸಚಿನ್ ಪೈಲಟ್ ದೆಹಲಿಯಲ್ಲಿ 3 ಬಾರಿ ಸೋನಿಯಾ(Sonid Gandhi), ಪ್ರಿಯಾಂಕಾ ಜತೆ ಸುದೀರ್ಘ ಚರ್ಚೆ ನಡೆಸಿದ್ದರು. ಅಲ್ಲಿ ಇಂಥದ್ದೊಂದು ಮಾತುಗಳನ್ನು ಅವರು ಆಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿಗೆ ಐದು ಪ್ರಶ್ನೆ: ವಿಷಯಾಂತರ ಮಾಡದೇ ನೇರವಾಗಿ ಉತ್ತರಿಸಿ ಎಂದ ಕಾಂಗ್ರೆಸ್
ಪಂಜಾಬ್‌ನಲ್ಲೂ ಕಡೆಯ ಗಳಿಗೆಯಲ್ಲಿ ಅಮರೀಂದರ್ ಸಿಂಗ್ ಪದಚ್ಯುತಗೊಳಿಸಿ ಚರಣ್‌ಜಿತ್ ಸಿಂಗ್ ನೇಮಕ ಮಾಡಿದ ಪರಿಣಾಮ ಪಕ್ಷಕ್ಕೆ ಸೋಲಾಯಿತು. ರಾಜಸ್ಥಾನದಲ್ಲಿ 2023ರ ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ಇದೆ. ಹೀಗಾಗಿ ತಕ್ಷಣವೇ ರಾಜ್ಯದಲ್ಲೂ ನಾಯಕತ್ವ ಬದಲಾವಣೆ ಮಾಡಿ ತಮಗೆ ಸಿಎಂ ಪಟ್ಟ ನೀಡಬೇಕು. ಇಲ್ಲದೇ ಹೋದಲ್ಲಿ ಕಡೆಯ ಹಂತದಲ್ಲಿ ಯಾವುದೇ ಬದಲಾವಣೆಗೆ ಮುಂದಾದರೆ ಪಕ್ಷಕ್ಕೆ ಸೋಲು ಖಚಿತ ಎಂಬ ಸಂದೇಶವನ್ನು ಸಚಿನ್ ಸೋನಿಯಾಗೆ ತಲುಪಿಸಿದ್ದಾರೆ ಎನ್ನಲಾಗಿದೆ.
2 ವರ್ಷದ ಹಿಂದೆ ಕೂಡಾ ಸಚಿನ್ ಪೈಲಟ್, ತಮ್ಮ 18 ಬೆಂಬಲಿಗ ಶಾಸಕರೊಡಗೂಡಿ ಹಾಲಿ ಸಿಎಂ ಅಶೋಕ್ ಗೆಹ್ಲೋಟ್(Ashok Gehlot) ವಿರುದ್ಧ ಬಂಡಾಯವೆದ್ದಿದ್ದರು. ಹೀಗಾಗಿ ಗೆಹ್ಲೋಟ್ 100ಕ್ಕೂ ಹೆಚ್ಚು ಶಾಸಕರನ್ನು ರೆಸಾರ್ಚ್ ಕರೆದೊಯ್ದು ರಕ್ಷಣೆ ಮಾಡಬೇಕಾಗಿ ಬಂದಿತ್ತು. ಕೊನೆಗೆ ಸಚಿನ್ ಬೆಂಬಲಿಗರಿಗೆ ಸಂಪುಟದಲ್ಲಿ ಸ್ಥಾನಮಾನದ ಭರವಸೆ ನೀಡಿದ ಬಳಿಕ ಬಂಡಾಯ ತಣ್ಣಗಾಗಿತ್ತು. ಆದರೆ ಇದೀಗ ಸಚಿನ್ ಮತ್ತೆ ಬಂಡಾಯದ ಬಾವುಟ ಬೀಸಿದ್ದಾರೆ. ಆದರೆ ಮತ್ತೊಂದೆಡೆ ಬಹುತೇಕ ಶಾಸಕರು ಮತ್ತು ಸ್ವತಃ ಸೋನಿಯಾ ಕೃಪಾಕಟಾಕ್ಷ ಹೊಂದಿರುವ ಅಶೋಕ್ ಗೆಹ್ಲೋಟ್, ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಕಳೆದ ವಾರ ಸುಳಿವು ನೀಡಿದ್ದರು. ಸಚಿನ್‌ರ ಪದೇ ಪದೇ ದೆಹಲಿ ಭೇಟಿ ಬಗ್ಗೆ ಪ್ರಶ್ನಿಸಿದಾಗ, ನನ್ನ ರಾಜೀನಾಮೆ ಪತ್ರ ಈಗಾಗಲೇ ಸೋನಿಯಾ ಬಳಿ ಇದೆ ಎನ್ನುವ ಮೂಲಕ ಎದುರಾಳಿಗಳ ಬಾಯಿ ಮುಚ್ಚಿಸುವ ಯತ್ನ ಮಾಡಿದ್ದರು.