
ಹಾಸನ (ಅ.16): ಕಳೆದ ಮೂರಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಇನ್ನು ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ವರದಿ ನೋಡಿ ಕಡಿವಾಣದ ಬಗ್ಗೆ ನಿರ್ಧರಿಸಲಾಗುವುದು ಎಂದರು. ಹಾಸನಾಂಬ ದರ್ಶನಾರ್ಥವಾಗಿ ನಗರದ ಸಮೀಪ ಇರುವ ಬೂವನಹಳ್ಳಿ ಹೆಲಿಪ್ಯಾಡ್‌ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ನಡೆಸಲು ಎಲ್ಲಾ ತಯಾರಿಯೂ ಮಾಡಲಾಗಿದೆ. ಪ್ರಸ್ತುತ ವಿಚಾರ ಕೋರ್ಟ್‌ನಲ್ಲಿ ಇದೆ.
ಕೋರ್ಟ್‌ನಿಂದ ಹಸಿರು ನಿಶಾನೆ ಬಂದ ತಕ್ಷಣ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸುತ್ತೇವೆ. ಪ್ರಜಾಪ್ರಭುತ್ವ ಬಲವಾಗಬೇಕಾದರೆ ನಿಯಮಿತ ಚುನಾವಣೆಗಳು ನಡೆಯಲೇಬೇಕು ಎಂದರು. ಒಂದೆಡೆ ಅಧಿಕಾರ ಹಂಚಿಕೆ ಕುರಿತು ಹೈಕಮಾಂಡ್ ಮೌನ ವಹಿಸಿರುವ ವೇಳೆ ಮತ್ತೊಂದೆಡೆ ನಡೆಯುತ್ತಿರುವ ಡಿನ್ನರ್ ಕೂಟಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸಿಎಂ ಸ್ಪಷ್ಟನೆ ನೀಡಿ, ಡಿನ್ನರ್ ಪಾರ್ಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನಾವು ಶಾಸಕರು, ಸಚಿವರು ಆಗಾಗ ಸೇರುತ್ತೇವೆ, ಪಕ್ಷದ ವಿಷಯ ಚರ್ಚಿಸುತ್ತೇವೆ, ಜೊತೆಯಾಗಿ ಊಟ ಮಾಡುತ್ತೇವೆ. ಅದರಲ್ಲಿ ರಾಜಕೀಯ ಅರ್ಥ ಹುಡುಕುವುದು ಬೇಡ.
ನವೆಂಬರ್ ಕ್ರಾಂತಿ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ವ್ಯಂಗ್ಯವಾಗಿ, ಯಾವ ಕ್ರಾಂತಿಯೂ ಇಲ್ಲ, ಅದು ಮಾಧ್ಯಮಗಳ ಭ್ರಾಂತಿ. ಸೃಷ್ಟಿ ಮಾಧ್ಯಮಗಳದ್ದೇ ಎಂದು ಹೇಳಿದರು. ರಾಜ್ಯದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ವಿಚಾರದ ಕುರಿತು ಸಿಎಂ ಹೇಳಿ, ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಂಘಟನೆಯ ಚಟುವಟಿಕೆ ನಡೆಸುವಂತಿಲ್ಲ. ತಮಿಳುನಾಡಿನ ಮಾದರಿಯನ್ನು ಅಧ್ಯಯನ ಮಾಡುತ್ತಿದ್ದೇವೆ, ವರದಿ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಶಾಸಕರು ಅನುದಾನ ತಾರತಮ್ಯದ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿರುವ ವಿಚಾರದ ಮೇಲೆ ಸಿಎಂ ಗರಂ ಆದ ಅವರು, ಜೆಡಿಎಸ್ ಮತ್ತು ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ನಮ್ಮ ಶಾಸಕರಿಗೆ ಎಷ್ಟು ಅನುದಾನ ನೀಡಿದರು. ನಾವು ಎಷ್ಟು ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ. ಸುಳ್ಳು ಆರೋಪಗಳಿಂದ ಜನರನ್ನು ದಾರಿ ತಪ್ಪಿಸಬೇಡಿ,” ಎಂದು ವಿರೋಧ ಪಕ್ಷಗಳ ಮೇಲೆ ತೀವ್ರ ಟೀಕೆ ಹೊರಹಾಕಿದರು. ಹೆಲಿಪ್ಯಾಡ್‌ನಲ್ಲಿ ರೈತ ಮುಖಂಡರು ಜಮಾಯಿಸಿ ಸಿಎಂಗೆ ಮನವಿ ಸಲ್ಲಿಸಿದರು. “ಜಿಲ್ಲೆಯಲ್ಲಿ ಸಾವಿರಾರು ಎಕರೆ ಜೋಳದ ಬೆಳೆ ಬಿಳಿಸುಳಿ ರೋಗದಿಂದ ಹಾನಿಗೊಂಡಿದೆ. ಕೂಡಲೇ ಪರಿಹಾರ ನೀಡಬೇಕು ಎಂದು ರೈತರು ಬೇಡಿಕೆ ಇಟ್ಟರು. ಇದಕ್ಕೆ ಸಿಎಂ, ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ಸೂಕ್ತ ವರದಿ ನೀಡುವಂತೆ ಸೂಚನೆ ನೀಡಿದರು.
ರಾಜ್ಯ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಮೊದಲು ಚುನಾವಣೆಗಳು ಮುಗಿಯಲಿ, ನಂತರ ಹೈಕಮಾಂಡ್ ಸೂಚನೆಯಂತೆ ಕ್ರಮ ಕೈಗೊಳ್ಳುತ್ತೇವೆ. ಈಗ ಅವರ ಗಮನ ಬಿಹಾರ ಚುನಾವಣೆಯತ್ತ ಇದೆ ಎಂದು ಹೇಳುವ ಮೂಲಕ ಸಂಪುಟ ಬದಲಾವಣೆ ಸಾಧ್ಯತೆಯ ಸುಳಿವು ನೀಡಿದರು. ಇಂದು ಹಾಸನಾಂಬೆ ದರ್ಶನಕ್ಕೆ ಎರಡನೇ ಬಾರಿ ಬಂದಿದ್ದೇನೆ. ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಸಂಸದ ಶ್ರೇಯಸ್ ಎಂ. ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ, ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ ಇತರರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.