ದಾರೀಲಿ ಹೋಗೋರಿಗೆಲ್ಲ ಉತ್ತರ ಕೊಡಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್‌

By Kannadaprabha News  |  First Published Aug 12, 2023, 12:00 AM IST

ಶೇ.10ರಿಂದ ಶೇ.15ರಷ್ಟು ಕಮಿಷನ್‌ ಯಾರು ಕೇಳಿದ್ದರು? ಡಿ.ಕೆ. ಶಿವಕುಮಾರ್‌ ಕೇಳಿದ್ದಾರಾ? ಸಿದ್ದರಾಮಯ್ಯ ಕೇಳಿದ್ದಾರಾ? ಸಚಿವರು, ಶಾಸಕರು ಕೇಳಿದ್ದಾರಾ? ಅಧಿಕಾರಿಗಳು ಕೇಳಿದ್ದಾರಾ? ಈ ಬಗ್ಗೆ ಸಾಬೀತುಪಡಿಸಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ ಡಿಸಿಎಂ ಡಿಕೆಶಿ 


ಬೆಂಗಳೂರು(ಆ.12): ‘ನನ್ನ ಮೇಲೆ ಕಮಿಷನ್‌ ಆರೋಪ ಮಾಡಿದ್ದಾರೆ. ನಾನು ಯಾರ ಬಳಿಯಾದರೂ ಕಮಿಷನ್‌ ಕೇಳಿದ್ದರೆ ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. ನಾನು ಕೇಳಿಲ್ಲವಾದರೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್‌. ಅಶೋಕ್‌ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಾರಾ?’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

‘ಶೇ.10ರಿಂದ ಶೇ.15ರಷ್ಟು ಕಮಿಷನ್‌ ಯಾರು ಕೇಳಿದ್ದರು? ಡಿ.ಕೆ. ಶಿವಕುಮಾರ್‌ ಕೇಳಿದ್ದಾರಾ? ಸಿದ್ದರಾಮಯ್ಯ ಕೇಳಿದ್ದಾರಾ? ಸಚಿವರು, ಶಾಸಕರು ಕೇಳಿದ್ದಾರಾ? ಅಧಿಕಾರಿಗಳು ಕೇಳಿದ್ದಾರಾ? ಈ ಬಗ್ಗೆ ಸಾಬೀತುಪಡಿಸಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಸಿಎಂ, ಡಿಸಿಎಂ ವಿರುದ್ಧ ಹರಿಹಾಯ್ದ ಯತ್ನಾಳ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಹಿಂದಿನ ಸರ್ಕಾರದಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಯುತ್ತಿದ್ದು, ಸೂಕ್ತವಾಗಿ ಕೆಲಸ ಮಾಡಿದ್ದರೆ ಬಿಲ್‌ ಪಾವತಿಯಾಗುತ್ತದೆ. ಮೂರ್ನಾಲ್ಕು ವರ್ಷದಿಂದ ಕಾದಿರುವವರು ಒಂದೆರಡು ತಿಂಗಳು ಕಾಯಲೇಬೇಕು. ಈಗ ಬಿಲ್‌ ಬಿಡುಗಡೆಗೆ ಒತ್ತಾಯಿಸುತ್ತಿರುವ ಬಿಜೆಪಿ ನಾಯಕರು ಮೂರ್ನಾಲ್ಕು ವರ್ಷದಿಂದ 3 ಸಾವಿರ ಕೋಟಿ ರು. ಬಿಲ್‌ ಯಾಕೆ ತಡೆ ಹಿಡಿದಿದ್ದರು?’ ಎಂದು ಕಿಡಿಕಾರಿದರು.
‘ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌ ಅವರು ತಾವು ಯಾಕೆ ಗುತ್ತಿಗೆದಾರರ ಬಿಲ್‌ ಪಾವತಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ಬಿಲ್‌ ಪಾವತಿಗೆ ಯಾರು ಅಡ್ಡಿ ಮಾಡಿದ್ದರು? ಅಥವಾ ಅವರ ಬಳಿ ಹಣ ಇರಲಿಲ್ಲವೇ? ಕೆಲಸ ಸರಿ ಮಾಡಿರಲಿಲ್ಲವೇ? ಯಾವ ಕಾರಣಕ್ಕೆ ಬಿಲ್‌ ಪಾವತಿ ಮಾಡಿಲ್ಲ’ ಎಂದು ಪ್ರಶ್ನಿಸಿದರು.

ಇದರ ಹಿಂದಿನ ಮರ್ಮವೇನು?:

‘ನಮ್ಮ ಸರ್ಕಾರ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುತ್ತಿಗೆದಾರರ ಸಂಘದ ಕೆಂಪಣ್ಣ ಅವರ ದೂರಿನ ಆಧಾರದ ಮೇಲೆ ಕೆಲಸ ಆಗಿದೆಯೇ ಇಲ್ಲವೇ ಎಂದು ನೈಜತೆ ಪರಿಶೀಲನೆ ಮಾಡಿ ಎಂದು ತಿಳಿಸಿದರು. ಇನ್ನು ಬಿಜೆಪಿ ನಾಯಕರು ಕೂಡ ಸದನದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಆಗಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ನಾವು ತನಿಖಾ ಸಮಿತಿ ರಚನೆ ಮಾಡಿದ್ದೇವೆ. ಕಾಮಗಾರಿಗಳ ಕೆಲಸ ಆಗಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಲು ಸಮಿತಿಗೆ ಸೂಚಿಸಿದ್ದೇವೆ. ಮೂರ್ನಾಲ್ಕು ವರ್ಷಗಳಿಂದ ಬಿಲ… ಪಾವತಿ ಆಗದಿದ್ದಾಗ ಸುಮ್ಮನಿದ್ದವರು, ಈಗ ತನಿಖೆ ಮುಗಿಯುವವರೆಗೂ ಕಾಯಲು ಯಾಕೆ ಸಿದ್ಧರಿಲ್ಲ? ಯಾಕೆ ಈ ಪರಿಯ ಆತುರ ಯಾಕೆ? ಏನಿದರ ಹಿಂದಿನ ಮರ್ಮವೇನು?’ ಎಂದು ಪ್ರಶ್ನಿಸಿದರು.

‘ತನಿಖೆ ಎಲ್ಲ ಕಡೆ ಮಾಡಲಾಗುತ್ತದೆ. ಹೀಗಾಗಿ ಗುತ್ತಿಗೆದಾರರು ನೇಣು ಹಾಕಿಕೊಳ್ಳುವುದು ಬೇಡ, ದಯಾಮರಣ ಕೇಳುವುದೂ ಬೇಡ. ಅವರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ. ಕೆಲಸ ಮಾಡಿದ್ದರೆ ಬಿಲ… ಪಾವತಿ ಆಗಲಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಆರೋಪ ಪ್ರತ್ಯಾರೋಪ ಸಹಜ. ಗುತ್ತಿಗೆದಾರರು ರಾಜ್ಯಪಾಲರು, ಅಶೋಕ್‌, ಕುಮಾರಸ್ವಾಮಿ ಎಲ್ಲರನ್ನೂ ಕೇಳುತ್ತಿದ್ದಾರೆ. ನಾನು ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದೇನೆ. ಎಲ್ಲವೂ ಸದ್ಯದಲ್ಲೇ ಬಯಲಾಗಲಿದೆ’ ಎಂದರು.

ಕಮಿಷನ್ ಆರೋಪ: ಸರ್ಕಾರಕ್ಕೆ ಆರ್‌.ಅಶೋಕ್‌ 10 ಪ್ರಶ್ನೆ

ಕೆಂಪಣ್ಣ ದೂರು ನೀಡಲಿ:

ಕಮಿಷನ್‌ ನಿಗದಿಗೆ ಶಾಂಘ್ರಿಲಾ ಹೋಟೆಲ್‌ನಲ್ಲಿ ಸಭೆ ನಡೆಸಲಾಗಿದೆ ಎಂಬ ಕೆಂಪಣ್ಣ ಆರೋಪಕ್ಕೆ, ‘ಕೆಂಪಣ್ಣ ಅವರು ಗೌರವಯುತ ವ್ಯಕ್ತಿ. ನೀವು ಹೇಳಿದಕ್ಕೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಹೇಳಿಕೆ ಬಗ್ಗೆ ಗೊತ್ತಿಲ್ಲ. ಅವರಿಗೆ ಯಾವ ಅಧಿಕಾರಿ ಕೇಳಿದ್ದಾರೋ ಆ ಬಗ್ಗೆ ಒಂದು ಅಫಿಡವಿಟ್‌ ಅಥವಾ ದೂರು ಸಲ್ಲಿಸಲು ಹೇಳಿ’ ಎಂದಷ್ಟೇ ಹೇಳಿದರು.

ದಾರೀಲಿ ಹೋಗೋರಿಗೆಲ್ಲ ಉತ್ತರ ಕೊಡಲ್ಲ: ಡಿಸಿಎಂ

ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ‘ನೀವು ಅಜ್ಜಯ್ಯನ ಮೇಲೆ ಆಣೆ ಪ್ರಮಾಣ ಮಾಡಿ ಎಂದಿದ್ದಾರೆ’ ಎಂಬ ಪ್ರಶ್ನೆಗೆ, ‘ರಸ್ತೆಯಲ್ಲಿ ಹೋಗುವ ಯಾರದೋ ಮಾತಿಗೆಲ್ಲ ನಾನು ಉತ್ತರ ನೀಡುವುದಿಲ್ಲ. ಅವರ ಹಿಂದೆ ಯಾರಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮಾತನಾಡಲಿ, ಉತ್ತರ ನೀಡುತ್ತೇನೆ. ಯಾರಿಗೆ ಏನು ಉತ್ತರ ನೀಡಬೇಕೊ ನೀಡುತ್ತೇನೆ’ ಎಂದು ಡಿಸಿಎಂ ಡಿಕೆಶಿ ತಿಳಿಸಿದರು.

click me!